ಮೈಸೂರು: ನಂಜನಗೂಡು ಉಪಚುನಾವಣೆ ತಮ್ಮ ಸ್ವಾಭಿಮಾನ ಹಾಗೂ ಸಿದ್ದರಾಮಯ್ಯನವರ ಷಡ್ಯಂತ್ರಗಳ ನಡುವಿನ ಸ್ಪರ್ಧೆ ಎಂಬ ಶ್ರೀನಿವಾಸ್‌ಪ್ರಸಾದರ ಪಂಥಾಹ್ವಾನವನ್ನು ಸ್ವೀಕರಿಸದೆ ಪಲಾಯನ ಮಾಡಿ ಸ್ಪರ್ಧೆಗೂ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲೊಪ್ಪಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡಿನಲ್ಲಿ ತಮ್ಮ ಸ್ವಾಭಿಮಾನ ಮತ್ತು ಸಿದ್ದರಾಮಯ್ಯನವರ ಷಡ್ಯಂತ್ರದ ನಡುವೆ ಸ್ಪರ್ಧೆ ಎಂಬ ಶ್ರೀನಿವಾಸಪ್ರಸಾದ್ ಅವರ ಪಂಥಾಹ್ವಾನವನ್ನು ಸಿಎಂ ಸಿದ್ದರಾಮಯ್ಯ ಸ್ವೀಕರಿಸಲಿಲ್ಲ. ಬದಲಿಗೆ ಕಳಲೆ ಕೇಶವಮೂರ್ತಿ ಹಾಗೂ ಶ್ರೀನಿವಾಸಪ್ರಸಾದ್ ನಡುವೆ ಸ್ಪರ್ಧೆ, ನಮ್ಮಿಬ್ಬರ ನಡುವೆ ಅಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಚುನಾವಣೆಗೂ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಸೋಲನ್ನು ತಿಳಿದು ಕಾಂಗ್ರೆಸ್ ಹತಾಶ: ಉಪ ಚುನಾವಣೆ ನಡೆಯುತ್ತಿರುವ ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ತಾವು ಹೋದೆಡೆಯಲ್ಲೆಲ್ಲಾ ವಿಜಯೋತ್ಸವಕ್ಕೆ ಹೋಗುತ್ತಿದ್ದೇನೇನೋ ಎಂಬ ಭಾವನೆ ಬರುವಂತೆ ಗ್ರಾಮಸ್ಥರು ತಮ್ಮನ್ನು ಸ್ವಾಗತಿಸುತ್ತಿದ್ದು, ನಿರೀಕ್ಷೆಗೂ ಮೀರಿ ಜನರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ನೋಡಿ ಉಪಚುನಾವಣೆಗಳಲ್ಲಿ ಸೋಲುವುದನ್ನು ತಿಳಿದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಹತಾಶರಾಗಿ ತಮ್ಮ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಜನರಿಂದ ಕಾಂಗ್ರೆಸ್‌ಗೆ ತಕ್ಕಪಾಠ: ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರಮೋದಿ ಹಾಗೂ ತಮ್ಮನ್ನು ಟೀಕಿಸುತ್ತಿರುವುದನ್ನು ನೋಡಿದರೆ, ನಾವು ಪ್ರಚಾರ ಮಾಡುವ ಅಗತ್ಯವೇ ಇಲ್ಲ. ಆನರೇ ಇವರಿಗೆ ಪಾಠ ಕಲಿಸುತ್ತಾರೆ. ಬೌದ್ಧಿಕ ಸ್ಥಿಮಿತ ಕಳೆದುಕೊಂಡಿರುವುದು ನಾನೋ, ನೀವೋ ಎಂಬುದು ನಿಮ್ಮ ಮಾತಿನಿಂದಲೇ ತಿಳಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಯಡಿಯೂರಪ್ಪ, ತಮ್ಮ ವಿರುದ್ಧ ಸಿ.ಎಂ.ಇಬ್ರಾಹಿಂ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.