Advertisement

ಜೆರುಸಲೇಂಗೆ ರಾಜಧಾನಿ ಮಾನ್ಯತೆ: ಟ್ರಂಪ್ ಸಿದ್ಧತೆ

08:00 AM Dec 07, 2017 | Team Udayavani |

ವಾಷಿಂಗ್ಟನ್‌: ಇಸ್ರೇಲ್‌ನ ಐತಿಹಾಸಿಕ ನಗರಿಯಾದ ಜೆರುಸಲೇಂ ಶೀಘ್ರ ರಾಜಧಾನಿಯಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಇದನ್ನು ಮಾನ್ಯ ಮಾಡಲು ಅಮೆರಿಕ ತುದಿಗಾಲಲ್ಲಿ ನಿಂತಿದೆ. ಶತಾಯಗತಾಯ ಈ ವಿದ್ಯಮಾನಕ್ಕೆ ಸಾಕ್ಷಿಯಾಗಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಣ ತೊಟ್ಟಿರುವುದೂ ಸ್ಪಷ್ಟ. ಆದರೆ ಇದಕ್ಕೆ ಜಾಗತಿಕವಾಗಿ ವಿರೋಧವೂ ವ್ಯಕ್ತಗೊಳ್ಳುತ್ತಿದ್ದು, ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

Advertisement

ಟ್ರಂಪ್‌ ಇದೇ ಮೊದಲ ಬಾರಿಗೆ ಜೆರುಸಲೇಂ ನಗರಿಯನ್ನೇ ರಾಜಧಾನಿಯನ್ನಾಗಿ ಮಾಡುವ ಬಗ್ಗೆ ಅಮೆರಿಕ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ನಿರೀಕ್ಷೆಯಂತೆಯೇ ಟ್ರಂಪ್‌ ಈ ನಿರ್ಧಾರಕ್ಕೆ ಬಂದಿದ್ದು, ಜೆರುಸಲೇಂ ರಾಜಧಾನಿ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವ ಮೊದಲ ರಾಷ್ಟ್ರವೂ ಅಮೆರಿಕ ಆಗಿದೆ. ವೈಟ್‌ಹೌಸ್‌ನ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ಸ್ವತಃ ಟ್ರಂಪ್‌ ಅವರೇ ಜೇರುಸಲೇಂಗೆ ಈ ಸ್ಥಾನಮಾನ ನೀಡುವ ಬಗ್ಗೆ ಬದಲಾಯಿಸಲಾದ ಅಮೆರಿಕ ನೀತಿಯ ಜತೆಗೇ ಯಾವುದೇ ಕ್ಷಣದಲ್ಲಿ ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ರಾಜತಾಂತ್ರಿಕವಾಗಿ ಆಗಬೇಕಾದ ಎಲ್ಲಾ ಪ್ರಕ್ರಿಯೆಗಳೂ ಆಗಿವೆ ಎಂದೇ ಹೇಳಲಾಗಿದೆ.

“ಜೆರುಸಲೇಂ ನಗರಿಯನ್ನೇ ಇಸ್ರೇಲ್‌ನ ರಾಜಧಾನಿಯನ್ನಾಗಿ ಮಾಡುವುದಕ್ಕೆ ಅಮೆರಿಕ ಬದ್ಧವಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ. ಐತಿಹಾಸಿಕ ನಗರಿಯಾಗಿದ್ದರಿಂದಲೇ ಈ ನಿರ್ಧಾರಕ್ಕೆ ಬಂದಿದ್ದಾರೆ. ಜೆರುಸಲೇಂ ಯಹೂದಿಗಳ ಚರಿತ್ರೆ ಪ್ರತಿಬಿಂಬಿಸುವ ಕೇಂದ್ರ. ಅಷ್ಟೇ ಅಲ್ಲ, ಯಹೂದಿಗಳಿಗೆ ರಾಜಧಾನಿಯೂ ಅದೇ ಆಗಿತ್ತು. ಅಷ್ಟೇ ಅಲ್ಲ, ಸರಕಾರದ ಪ್ರಮುಖ ಸಚಿವರುಗಳು, ಶಾಸಕರು ಹಾಗೂ ಸರ್ವೋತ್ಛ ನ್ಯಾಯಾಲಯದಲ್ಲಿಯೂ ಅವರ ಪ್ರಾಬಲ್ಯ ಇದೆ ಎನ್ನುವ ಅಭಿಪ್ರಾಯ ಟ್ರಂಪ್‌ ಅವರದ್ದಾಗಿದೆ’ ಎಂದು ಶ್ವೇತ ಭವನದ ಹಿರಿಯ ಅಧಿಕಾರಿ ಬುಧವಾರ ತಿಳಿಸಿದ್ದಾರೆ.
ಒಟ್ಟಾರೆ ಅಧ್ಯಕ್ಷ ಟ್ರಂಪ್‌ ಅವರ ಈ ನಿರ್ಧಾರ ವಿವಾದ ಉಲ್ಬಣಿಸುವಂತೆ ಮಾಡಿದೆ. ಜತೆ ಜೊತೆಗೆ ಗತಕಾಲದ ಅಮೆರಿಕ ನೀತಿಯಲ್ಲಿಯೂ ಅಮೂಲಾಗ್ರ ಬದಲಾವಣೆ ಆಗಲಿದೆ.

ತೀವ್ರ ವಿರೋಧ: ಅಮೆರಿಕದ ಈ ನಿರ್ಧಾರದ ಬಗ್ಗೆ ಅನೇಕ ಅರಬ್‌ ನಾಯಕರು, ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ಯಾಲೆಸ್ತೀನ್‌ ಕೂಡ ಆಕ್ಷೇಪ ಎತ್ತಿದೆ. ಪ್ಯಾಲೆಸ್ತೀನಿಯರು ಬುಧವಾರ ರಸ್ತೆಗಿಳಿದಿದ್ದು, ಟ್ರಂಪ್‌ ಅವರ ಪ್ರತಿಕೃತಿಯನ್ನು, ಇಸ್ರೇಲ್‌ನ ಧ್ವಜವನ್ನು ಸುಟ್ಟುಹಾಕಿದ್ದಾರೆ. ಅಲ್ಲದೆ, ಸೈದ್ಧಾಂತಿಕ ನಿಲುವು ಹೊಂದಿರುವ ಕೆಲವು ಅಮೆರಿಕನ್ನರಿಂದಲೂ ಇದಕ್ಕೆ ಆಕ್ಷೇಪ ಕೇಳಿಬಂದಿದೆ. ಆದರೆ ಈ ನಡುವೆಯೂ ಟ್ರಂಪ್‌ ಇದಕ್ಕೆ ಬದ್ಧರಾಗಿರುವುದು ಗಮನಾರ್ಹ. ಟ್ರಂಪ್‌ ಈ ನಿರ್ಧಾರಕ್ಕೆ ಬರುವ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಇಸ್ಲಾಮಿಕ್‌ ಸಹಕಾರ ಸಂಘಟನೆ ಮೊನ್ನೆ ಮೊನ್ನೆಯಷ್ಟೇ ಮುಸ್ಲಿಂ ರಾಷ್ಟ್ರಗಳ ಶೃಂಗಸಭೆ ಕರೆಯುವುದಾಗಿ ಹೇಳಿಕೊಂಡಿತ್ತು. ಈಗ ಆಕ್ರೋಶ ಇನ್ನಷ್ಟು  ಹೆಚ್ಚಾಗಿದೆ.

ಚರ್ಚೆಯಾಗಲಿ: ವಿಶ್ವಸಂಸ್ಥೆ
ಇಸ್ರೇಲ್‌ ರಾಜಧಾನಿಯನ್ನು ಜೇರುಸಲೇಂ ಮಾಡುವ ಬಗ್ಗೆ ವೈಟ್‌ಹೌಸ್‌ ಟ್ರಂಪ್‌ ಅವರ ನಿಲುವು ಪ್ರಕಟಿಸಿದ ಬೆನ್ನಿಗೇ ವಿಶ್ವಸಂಸ್ಥೆ ಪ್ರತಿಕ್ರಿಯಿಸಿದೆ. ಇಸ್ರೇಲ್‌ನ ಭವಿಷ್ಯದ ವಿಚಾರವಾಗಿ ಚರ್ಚೆ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Advertisement

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಭಿಪ್ರಾಯ ಹಾಗೂ ನಿರ್ಧಾರ ವನ್ನು ಗೌರವಿಸುತ್ತೇವೆ. ಉಳಿದ ರಾಷ್ಟ್ರಗಳೂ ಅವರ ನಡೆಯನ್ನೇ ಪಾಲಿಸಬೇಕು.
– ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಪ್ರಧಾನಿ

ಇಂಥ ನಿರ್ಧಾರದ ಮೂಲಕ ಟ್ರಂಪ್‌ ಅವರ ಕೆಣಕುವ ಬುದ್ಧಿಯನ್ನು ಖಂಡಿತಾ ಸಹಿಸಿ ಕುಳಿತಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಇದಕ್ಕೆ ಬೆಂಬಲ ಸೂಚಿಸಲಿಕ್ಕೆ ಸಾಧ್ಯವೇ ಇಲ್ಲ. 
– ಹಸನ್‌ ರೌಹಾನಿ, ಇರಾನ್‌ ಅಧ್ಯಕ್ಷ

ಅಮೆರಿಕ ನಿರ್ಧಾರದಿಂದ ಜಾಗತಿಕವಾಗಿ ಒತ್ತಡ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಅಮೆರಿಕ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. 
– ಗೆಂಗ್‌ ಶಾಂಗ್‌, ಚೀನಾ ವಿದೇಶಾಂಗ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next