Advertisement

ಮತ್ತದೇ ಕಂಪನಿಗೆ ಕ್ಯಾಂಟೀನ್‌ ಟೆಂಡರ್‌?

12:39 AM Dec 23, 2019 | Lakshmi GovindaRaj |

ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಏಳು ವಲಯ ಗಳಲ್ಲಿ ಇಂದಿರಾ ಕ್ಯಾಂಟೀನ್‌ನ ಟೆಂಡರ್‌ ಪ್ರಕ್ರಿಯೆ ಅಂತಿಮವಾಗಿದ್ದು, ಪೂರ್ವ ವಲಯದಲ್ಲಿ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನ್‌ ನಿರ್ವಹಣೆಯ ಜವಾಬ್ದಾರಿಯನ್ನು ಚೆಫಾಕ್‌ ಮತ್ತು ರಿವಾರ್ಡ್‌ ಸಂಸ್ಥೆಗಳಿಗೆ ನೀಡಲಾಗಿತ್ತು.

Advertisement

ಈ ಸಂಸ್ಥೆಗಳಿಗೆ ನೀಡಿದ್ದ ಟೆಂಡರ್‌ ಆ.16ಕ್ಕೆ ಮುಕ್ತಾಯವಾಗಿದ್ದರೂ, ಈ ಯೋಜನೆಯ ಅಸ್ತಿತ್ವದ ಬಗ್ಗೆಯೇ ಪ್ರಶ್ನೆ ಮತ್ತು ಗೊಂದಲಗಳು ಮೂಡಿದ ಹಿನ್ನೆಲೆಯಲ್ಲಿ ಟೆಂಡರ್‌ ಕರೆಯದೆ ಇದೇ ಸಂಸ್ಥೆಯನ್ನು ಮುಂದುವರಿಸಲಾಗಿತ್ತು. ಈಗ ಹೊಸ ಟೆಂಡರ್‌ ಕರೆಯಲಾಗಿದ್ದು, ಬಹುತೇಕ ವಲಯಗಳಲ್ಲಿ ಚೆಫಾಕ್‌ ಮತ್ತು ರಿವಾರ್ಡ್‌ ಸಂಸ್ಥೆಗೆ ಟೆಂಡರ್‌ ಅಂತಿಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ನ ಗುತ್ತಿಗೆ ಪಡೆದಿರುವ ಚೆಫಾಕ್‌ ಮತ್ತು ರಿವಾರ್ಡ್‌ ಸಂಸ್ಥೆಯ ಸರ್ಮಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ಗಂಭೀರವಾದ ಆರೋಪಗಳು ಕೇಳಿಬಂದಿದ್ದವು. ಖುದ್ದು ಉಪಮೇಯರ್‌ ರಾಮಮೋಹನ್‌ರಾಜ್‌ ಅವರು ಈ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಕೌನ್ಸಿಲ್‌ ಸಭೆಯಲ್ಲೂ ಚರ್ಚೆಯಾಗಿತ್ತು. ಹಾಲಿ ಸಂಸ್ಥೆ ಕಳಪೆ ಗುಣಮಟ್ಟದ ಆಹಾರವನ್ನು ಸರಬರಾಜು ಮಾಡುತ್ತಿದೆ.

ಇದನ್ನು ಸೇವಿಸಿದ ಸಾರ್ವಜನಿಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಬೇರೆ ಸಂಸ್ಥೆಗೆ ಗುತ್ತಿಗೆ ನೀಡಲಾಗುವುದು, ಮೆನು ಬದಲಾಯಿಸಿ ಸಾರ್ವಜನಿಕರಿಗೆ ಆರೋಗ್ಯಕರವಾದ ಆಹಾರ ನೀಡಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದರು.

ಆದರೆ, ಇಂದಿರಾ ಕ್ಯಾಂಟೀನ್‌ ನಿರ್ವಹಣೆಯ ಬಗ್ಗೆ ಮೂಡಿರುವ ಗೊಂದಲಗಳಿಂದಲೂ ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಹೆಚ್ಚಿನ ಗುತ್ತಿಗೆದಾರರು ಭಾಗವಹಿಸಲಿಲ್ಲ. ಅಲ್ಲದೆ,ಟೆಂಡರ್‌ ಪ್ರಕ್ರಿಯೆಯಲ್ಲಿ ಹೆಚ್ಚು ಗುತ್ತಿಗೆದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಹಾಲಿ ಸಂಸ್ಥೆಗೆ ಟೆಂಡರ್‌ ಅಂತಿಮವಾಗಿದೆ ಎನ್ನಲಾಗಿದೆ.

Advertisement

ಮೆನು ಬದಲಾವಣೆ ಸಾಧ್ಯತೆ ಕಡಿಮೆ: ಇಂದಿರಾ ಕ್ಯಾಂಟೀನ್‌ನ ಮೆನು ಬದಲಾವಣೆ ಮಾಡುವ ಬಗ್ಗೆಯೂ ಈ ಹಿಂದೆ ಚರ್ಚೆ ಮಾಡಲಾಗಿತ್ತು. ರಾಗಿ ಮುದ್ದೆ, ಮಂಗಳೂರು ಬಜ್ಜಿ ಹಾಗೂ ಕಾಫಿ, ಟೀ ನೀಡುವುದಕ್ಕೆ ಬಿಬಿಎಂಪಿ ಮುಂದಾಗಿತ್ತು. ಆದರೆ, ಮೂಲಗಳ ಪ್ರಕಾರ ಈಗ ಮೆನು ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ಹೇಳಲಾಗಿದೆ.

ಆಂತರಿಕ ತನಿಖೆಗೆ ಮುಂದಾದ ಪಾಲಿಕೆ: ಇಂದಿರಾ ಕ್ಯಾಂಟೀನ್‌ ಯೋಜನೆಗೆ ವೆಚ್ಚ ಮಾಡಿರುವ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದೆಯೇ ಎಂಬ ಬಗ್ಗೆ ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ (ಸಿಎಜಿ) ಇದೇ ಮೊದಲ ಬಾರಿಗೆ ಪರಿಶೀಲಿಸಿ ವರದಿ ತಯಾರಿಸುತ್ತಿದೆ. ಮತ್ತೂಂದೆಡೆ ಬಿಬಿಎಂಪಿ ಇಂದಿರಾ ಕ್ಯಾಂಟೀನ್‌ ಯೋಜನೆ ಅಕ್ರಮಗಳ ಬಗ್ಗೆ ತನಿಖೆ ಕೈಗೊಂಡಿದೆ.

ಸಿಎಜಿಯ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‌ನ ಆಹಾರ ಗುಣಮಟ್ಟ, ತಯಾರಿಕಾ ವಿಧಾನ, ತೂಕ, ಗ್ರಾಹಕ ಅಭಿಪ್ರಾಯ, ಸರಬರಾಜು ವ್ಯವಸ್ಥೆ, ಸ್ವಚ್ಛತೆ, ನಿರ್ವಹಣೆ, ಯೋಜನೆ ಫ‌ಲಾನುಭವಿಗಳಿಗೆ ತಲುಪುತ್ತಿದ್ದೇಯೆ ಸೇರಿದಂತೆ ಇನ್ನಿತರ ವಿಷಯವನ್ನಿಟ್ಟುಕೊಂಡು ಯೋಜನೆಯನ್ನು ಮೌಲ್ಯಮಾಪನ ನಡೆಸುತ್ತಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸರಿಪಡಿಸುವ ನಿಟ್ಟಿನಲ್ಲಿ ಬಿಬಿಎಂಪಿಯಿಂದ ಆಂತರಿಕ ಪರಿಶೀಲನೆ ನಡೆಸಲಾಗುತ್ತಿದೆ.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next