ಬ್ರಹ್ಮಾವರ: ಬಿರು ಬೇಸಗೆಗೆ ಕೆರೆ ಬಾವಿಗಳು ಒಣಗುತ್ತಿವೆೆ. ನದಿ ತೊರೆಗಳು ಬರಿದಾಗುತ್ತಿವೆ. ಬಹುತೇಕ ಕಡೆ ಇಂತಹ ಪರಿಸ್ಥಿತಿ ತಲೆದೋರಿದರೆ ಚಾಂತಾರು ಮದಗದಲ್ಲಿ ಮಾತ್ರ ಇಂದಿಗೂ ಸಮೃದ್ಧ ಜೀವಜಲ ಕಾಣಸಿಗುತ್ತಿದೆ.
ಹತ್ತಾರು ಎಕ್ರೆ ವಿಸ್ತೀರ್ಣದಲ್ಲಿರುವ ಪ್ರಸಿದ್ಧವಾದ ಚಾಂತಾರು ಮದಗ ಪರಿಸರದ ಹಲವಾರು ಊರುಗಳಿಗೆ, ಸಹಸ್ರಾರು ಪ್ರಾಣಿ ಪಕ್ಷಿಗಳಿಗೆ ಸಂಜೀವಿನಿಯಾಗಿದೆ.
ಕಡು ಬೇಸಗೆಯಲ್ಲೂ ಮದಗದಲ್ಲಿ ಸಾಕಷ್ಟು ನೀರು ಸಂಗ್ರವಾಗಿರಲು ಮುಖ್ಯವಾಗಿ ಎರಡು ಕಾರಣ. ಇತ್ತೀಚೆಗೆ ಮದಗದಲ್ಲಿ ತುಂಬಿರುವ ಹೂಳನ್ನು ತೆಗೆದು ಸಮರ್ಪಕ ದಂಡೆ ಕಟ್ಟಿರುವುದು ಒಂದಾದರೆ, ಈ ವರ್ಷ ಬೇಕಾಬಿಟ್ಟಿ ಮದಗದ ನೀರನ್ನು ಹೊರಬಿಡದೆ ಶಿಸ್ತುಬದ್ಧವಾಗಿ ನೀರನ್ನು ಬಳಸಿಕೊಳ್ಳುತ್ತಿರುವುದು ಕಾರಣ.
ಪ್ರತಿ ರವಿವಾರ ಗೇಟನ್ನು ತೆಗೆದು ನಿಯಮಿತವಾಗಿ ಕೃಷಿ ಉದ್ದೇಶಗಳಿಗೆ ನೀರನ್ನು ಬಿಡಲಾಗುತ್ತಿದೆ. ಇದರಿಂದ ನೀರು ಪೋಲಾಗದೆ ಸಾಕಷ್ಟು ಪ್ರಮಾಣದಲ್ಲಿ ಮದಗದಲ್ಲೇ ಸಂಗ್ರಹಗೊಂಡಿದೆ.
ಚಾಂತಾರು ಪಂ. ಸದಸ್ಯರಾದ ನಿತ್ಯಾನಂದ ಪೂಜಾರಿ ಮತ್ತು ಚಂದ್ರಶೇಖರ ನಾಯ್ಕ ಅವರ ಮುತುವರ್ಜಿ ಯಿಂದ ಪಂಚಾಯತ್ ನಿರ್ಣಯ ದಂತೆ ಮದಗದ ಗೇಟಿಗೆ ಬೀಗ ಅಳವಡಿಸಿ, ಅಗತ್ಯಕ್ಕನುಗುಣವಾಗಿ ನೀರನ್ನು ಪೂರೈಸಲಾಗುತ್ತಿದೆ. ಪರಿಣಾಮ ಇನ್ನೂ ಎರಡು ತಿಂಗಳು ಮಳೆಯಾಗದಿದ್ದರೂ ಪರಿಸರದ ಜನರಿಗೆ ನೀರಿನ ಸಮಸ್ಯೆಯಾಗದು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ವ್ಯಾವಹಾರಿಕ ಉದ್ದೇಶಗಳಿಗೆ ಮದಗದಿಂದ ಟ್ಯಾಂಕರ್‌ನಲ್ಲಿ ನೀರು ಸಾಗಿಸುವುದನ್ನೂ ನಿಷೇಧಿಸಲಾಗಿದೆ.
ಮದಗದ ಒಳಗಡೆ ನಿರ್ಮಿಸಿರುವ ಎರಡು ಬಾವಿಗಳಿಂದ ಪರಿಸರದ ಮಟಪಾಡಿ, ಚಾಂತಾರು, ಕುಂಜಾಲು, ಹೆರಂಜೆ, ಆರೂರು ಪ್ರದೇಶಗಳಿಗೆ ನೀರನ್ನು ಪೂರೈಸಲಾಗುತ್ತಿದೆ.