ನವದೆಹಲಿ:ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದು, ಸುಮಾರು 19 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿ ತಮ್ಮ ಅಧ್ಯಕ್ಷಗಾದಿಯ ವಿದಾಯ ಭಾಷಣದಲ್ಲಿ ಭಾವುಕರಾದ ಘಟನೆ ನಡೆಯಿತು.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ರಾಹುಲ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಪಕ್ಷದ ಅಧ್ಯಕ್ಷೆಯಾಗಿ ಇದು ನನ್ನ ಕೊನೆಯ ಭಾಷಣ ಎಂದು ಹೇಳಿದರು. ಇನ್ಮುಂದೆ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದರು.
ಭಾಷಣಕ್ಕೆ ಅಡ್ಡಿಯಾದ ಪಟಾಕಿ ಸದ್ದು:
ಸೋನಿಯಾ ಗಾಂಧಿ ಅವರು ಭಾಷಣ ಮಾಡುತ್ತಿದ್ದ ವೇಳೆ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು ಸಿಡಿಸಿದ ಭಾರೀ ಪ್ರಮಾಣದ ಪಟಾಕಿ ಸದ್ದಿನಿಂದಾಗಿ ಭಾಷಣವನ್ನು ನಿಲ್ಲಿಸಿದರು. ಪಟಾಕಿ ಸದ್ದಿನಿಂದಾಗಿ ಸೋನಿಯಾ ಅವರ ಧ್ವನಿ ಕೇಳಿಸುತ್ತಿರಲಿಲ್ಲವಾಗಿತ್ತು, ಏತನ್ಮಧ್ಯೆ ಸೋನಿಯಾ ಗಾಂಧಿಯವರು ಮಾತನಾಡುತ್ತಿದ್ದಾರೆ ದಯವಿಟ್ಟು ಪಟಾಕಿ ಸಿಡಿಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಳ್ಳಲಾಯಿತು.
ಭಾರೀ ಸದ್ದಿನಿಂದಾಗಿ ಸೋನಿಯಾ ಗಾಂಧಿ ಅವರು ಕೆಲವು ಬಾರಿ ಭಾಷಣವನ್ನು ಮುಂದುವರಿಸಿ ನಿಲ್ಲಿಸಿದ್ದರು. ಪಟಾಕಿ ಸಿಡಿಸುವುದನ್ನು ನಿಲ್ಲಿಸುವವರೆಗೆ ಭಾಷಣ ಮುಂದುವರಿಸಲ್ಲ ಎಂದು ಸೋನಿಯಾ ಹೇಳಿದ್ದರು.
ಮೈಕ್ ನಲ್ಲಿ ವಿನಂತಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ, ಕೊನೆಗೆ ರಾಹುಲ್ ಗಾಂಧಿಯೇ ತಾಯಿಯ ಹತ್ತಿರ ಬಂದು ಪಟಾಕಿ ಸಿಡಿಸೋದನ್ನು ನಿಲ್ಲಿಸುವುದಾಗಿ ಹೇಳಿದರು. ಈ ಶಬ್ದದಿಂದಾಗಿ ನಾನು ಬೊಬ್ಬೆ ಹೊಡೆಯಬೇಕಾಗಿದೆ ಎಂದರು. ಕೆಲವು ನಿಮಿಷಗಳ ಬಳಿಕ ಮತ್ತೆ ಭಾಷಣ ಮುಂದುವರಿಸಿದರು.