Advertisement

ಕೋರ್ಟ್‌ಗೆ ಹಾಜರಾಗದೇ ಮಲ್ಯಗೆ ಜೈಲು ಶಿಕ್ಷೆ ಸಾಧ್ಯವಿಲ್ಲ!

04:05 AM Jul 15, 2017 | Karthik A |

ಹೊಸದಿಲ್ಲಿ: ಬ್ಯಾಂಕುಗಳಲ್ಲಿ ಬಹುಕೋಟಿ ರೂ. ಸಾಲಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ಮಲ್ಯ ಇದೀಗ ಸುಪ್ರೀಂ ಕೋರ್ಟ್‌ನ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಕಾರಣ ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಮಲ್ಯ ಕೋರ್ಟ್‌ಗೆ ಹಾಜರಾಗದ ಹೊರತು ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ಹೇಳಿದೆ. ಮಲ್ಯ ಅವರನ್ನು ತಮ್ಮ ಮುಂದೆ ಹಾಜರುಪಡಿಸುವಲ್ಲಿ ವಿಫ‌ಲವಾದ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅವರನ್ನು ಹಾಜರುಪಡಿಸುವವರೆಗೂ ಶಿಕ್ಷೆ ನಿಗದಿಪಡಿಸುವುದಿಲ್ಲ ಎಂದು ಖಾರವಾಗಿ ಹೇಳಿದೆ.

Advertisement

ಇದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸರಕಾರ, ಬ್ರಿಟನ್‌ನಲ್ಲಿ ಮಲ್ಯ ಗಡೀಪಾರು ಕುರಿತ ಮುಂದಿನ ವಿಚಾರಣೆ 2017 ಡಿ.4ರಿಂದ ಆರಂಭವಾಗಲಿದೆ. ಅವರ ಗಡಿಪಾರು ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದೇವೆ ಎಂದು ಹೇಳಿತು. ಆದರೆ, ನಿಮ್ಮ ಹೆಜ್ಜೆ ಹಾಗೂ ಪ್ರಕ್ರಿಯೆಗಳ ವಿಚಾರದಲ್ಲಿ ನಮಗೆ ಆಸಕ್ತಿ ಇಲ್ಲ. ಮಲ್ಯ ಅವರನ್ನು ಕೋರ್ಟ್‌ ಹಾಜರುಪಡಿಸುವುದು ಮುಖ್ಯವಾಗಿದೆ ಎಂದು ಸುಪ್ರೀಂಕೋರ್ಟ್‌ನ ನ್ಯಾ.ಕೆ. ಗೋಯೆಲ್‌ ಮತ್ತು ನ್ಯಾ.ಯು.ಯು.ಲಲಿತ್‌ ಅವರಿದ್ದ ನ್ಯಾಯಪೀಠ ಹೇಳಿತು. ನಂತರ, ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತು.

ಇದಕ್ಕೂ ಮುನ್ನ ಜು.10ರಂದು ನಡೆದ ವಿಚಾರಣೆ ವೇಳೆ ಮಲ್ಯ ಮತ್ತು ಅವರ ಕುಟುಂಬದ ಆಸ್ತಿಗಳ ವಿವರಗಳನ್ನು ಬ್ಯಾಂಕ್‌ ಒಕ್ಕೂಟಗಳಿಗೆ ನೀಡಲು ವಿಫ‌ಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲು ಸುಪ್ರೀಂ ಕೋರ್ಟ್‌ ಖುದ್ದು ಹಾಜರಾಗುವಂತೆ ಹೇಳಿತ್ತು. ಆದರೆ ಮಲ್ಯ ಊಹೆಯಂತೆಯೇ ಹಾಜರಾಗಿರಲಿಲ್ಲ. ಬಳಿಕ ಶುಕ್ರವಾರಕ್ಕೆ ಶಿಕ್ಷೆಯ ಘೋಷಣೆ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಮಲ್ಯ ಹಾಜರಾಗದಿದ್ದರಿಂದ ಕೋರ್ಟ್‌ ಶಿಕ್ಷೆ ಜಾರಿ ಮಾಡಲಿಲ್ಲ. ಮಲ್ಯ ಗಡೀಪಾರಾಗಿ ಬಂದ ಬಳಿಕ ಕೇಸ್‌ ಲಿಸ್ಟ್‌ ಮಾಡಿ ಶಿಕ್ಷೆ ಘೋಷಿಸುವುದಾಗಿ ನ್ಯಾಯಪೀಠ ಹೇಳಿದೆ. ಇನ್ನು ಕೋರ್ಟ್‌ ಕಲಾಪದ ಬಳಿಕ ರಾಷ್ಟ್ರೀಯ ಮಾಧ್ಯಮವೊಂದರೊಂದಿಗೆ ಮಾತನಾಡಿದ ಅಟಾರ್ನಿ ಜನರಲ್‌ ವೇಣುಗೋಪಾಲ್‌, 2018 ಜನವರಿವರೆಗೂ ಮಲ್ಯ ಗಡೀಪಾರು ಆಗುವ ಸಂಭವ ಇಲ್ಲ ಎಂದು ಹೇಳಿದ್ದಾರೆ. 

ಭಾರತದಲ್ಲಿ ಮಿಸ್‌ ಮಾಡೋಕೆ ಏನೂ ಇಲ್ಲ
ಕೋಟಿಗಟ್ಟಲೆ ರೂ. ಸಾಲ ಮಾಡಿ ಲಂಡನ್‌ಗೆ ಪರಾರಿಯಾಗಿರುವ ಮಲ್ಯ ವಿರುದ್ಧ ಗಡೀಪಾರು ಪ್ರಕರಣ ವಿಚಾರಣೆಯಲ್ಲಿದ್ದರೂ, ಅವರ ಐಷಾರಾಮಿತನಕ್ಕೆ, ಹವ್ಯಾಸಗಳಿಗೆ ಏನೊಂದೂ ಕೊರತೆಯಾಗಿಲ್ಲ! ಅದಕ್ಕೇ ಭಾರತವನ್ನು ಮಿಸ್‌ ಮಾಡೋಕೆ ಏನೂ ಇಲ್ಲ ಎಂದು ಹೇಳಿದ್ದಾರೆ! ಲಂಡನ್‌ನ ರಾಯಲ್‌ ಸ್ಕಾಟ್‌ನಲ್ಲಿ ಕುದುರೆ ರೇಸ್‌, ವಿಂಬಲ್ಡನ್‌ ಟೆನ್ನಿಸ್‌, ಇತ್ತೀಚೆಗೆ ಚಾಂಪಿಯನ್ಸ್‌ ಟ್ರೋಫಿ ಮತ್ತು ಮುಂದಿನ ಫಾರ್ಮುಲಾ ರೇಸ್‌ಗೆ ತಮ್ಮ ಫೋರ್ಸ್‌ ಒನ್‌ ತಂಡದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು, ಬೇಸಿಗೆ ಆಟಗಳಲ್ಲಿ ತೊಡಗಿಸಿಕೊಳ್ಳುತ್ತ ಮಲ್ಯ ಹಾಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next