ನವದೆಹಲಿ/ಮಾಸ್ಕೋ:ಲಡಾಖ್ ನಲ್ಲಿ ಗಡಿ ವಿವಾದಕ್ಕೆ ಭಾರತವೇ ಸಂಪೂರ್ಣವಾಗಿ ಹೊಣೆಯಾಗಿದೆ. ಅಲ್ಲದೇ ಚೀನಾ ತನ್ನ ಪ್ರದೇಶದ ಒಂದಿಂಚೂ ಜಾಗವನ್ನು ಬಿಟ್ಟು ಕೊಡುವುದಿಲ್ಲ….ಇದು ಚೀನಾ ಸರ್ಕಾರ ಶನಿವಾರ (ಸೆಪ್ಟೆಂಬರ್ 05, 2020) ಬೆಳಗ್ಗೆ ನೀಡಿದ್ದ ಹೇಳಿಕೆ!
ಎಲ್ ಎಸಿ(ವಾಸ್ತವ ಗಡಿ ನಿಯಂತ್ರಣ ರೇಖೆ)ಯಲ್ಲಿ ಭಾರತವೇ ಸಂಘರ್ಷಕ್ಕೆ ಇಳಿದಿರುವುದಾಗಿ ಚೀನಾ ನೇರವಾಗಿ ಭಾರತದ ವಿರುದ್ಧವೇ ಆರೋಪಿಸಿದ್ದು, ಇದರಿಂದಾಗಿ ಉಭಯ ದೇಶಗಳ ನಡುವೆ ಗಡಿ ವಿವಾದ ಹುಟ್ಟಿಕೊಂಡಿರುವುದಾಗಿ ದೂರಿದೆ ಎಂದು ವರದಿ ತಿಳಿಸಿದೆ.
ರಷ್ಯಾದಲ್ಲಿ ಭಾರತ ಮತ್ತು ಚೀನಾ ವಿದೇಶಾಂಗ, ರಕ್ಷಣಾ ಸಚಿವರ ಮಾತುಕತೆ ನಡೆದ ನಂತರ ಮೊದಲ ಬಾರಿಗೆ ಚೀನಾ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ಭಾರತ, ಚೀನಾ ಗಡಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಸೇನಾ ಜಮಾವಣೆ, ಪ್ರಚೋದನಕಾರಿ ನಡವಳಿಕೆ ಹಾಗೂ ಯಥಾಸ್ಥಿತಿಯನ್ನು ಉಲ್ಲಂಘಿಸಲು ಯತ್ನಿಸಿರುವುದನ್ನು ಗಮನಿಸಿದ ಮೇಲೆಯೇ ಭಾರತ ತನ್ನ ಪ್ರತಿರೋಧ ವ್ಯಕ್ತಪಡಿಸಿರುವುದಾಗಿ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಿದೆ.
“ಚೀನಾ ಮತ್ತು ಭಾರತದ ನಡುವಿನ ಗಡಿ ಸಂಘರ್ಷಕ್ಕೆ ಕಾರಣ ಮತ್ತು ಸತ್ಯ ಏನೆಂಬುದು ಸ್ಪಷ್ಟವಾಗಿದೆ. ಅಲ್ಲದೇ ಇಡೀ ವಿವಾದಕ್ಕೆ ಭಾರತವೇ ಸಂಪೂರ್ಣವಾಗಿ ಹೊಣೆಯಾಗಿದೆ. ಚೀನಾ ತನ್ನ ಒಂದಿಂಚು ಜಾಗವನ್ನು ಕಳೆದುಕೊಳ್ಳಲು ಬಿಡುವುದಿಲ್ಲ. ಅಲ್ಲದೇ ನಮ್ಮ ಪ್ರದೇಶದ ಏಕತೆ, ರಾಷ್ಟ್ರೀಯ ಸಾರ್ವಭೌಮತೆ ಮತ್ತು ರಕ್ಷಣೆ ವಿಚಾರದಲ್ಲಿ ನಮ್ಮ ಸೇನೆ ಸಂಪೂರ್ಣ ತೀರ್ಮಾನ ತೆಗೆದುಕೊಳ್ಳಲಿದೆ” ಎಂದು ಚೀನಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಒಮ್ಮತದ ನಿರ್ಧಾರವನ್ನು ಕಾರ್ಯಗತಗೊಳಿಸುವುದು ತುಂಬಾ ಮುಖ್ಯವಾಗಿದೆ. ಅಲ್ಲದೇ ಪರಸ್ಪರ ಮಾತುಕತೆ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಚೀನಾ ಭಾರತಕ್ಕೆ ಕರೆ ನೀಡಿದೆ.
“ಭಾರತ ಕೂಡಾ ತನ್ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸುವಲ್ಲಿ ಬದ್ಧವಾಗಿದೆ ಎಂದು ರಕ್ಷಣಾ ಸಚಿವಾಲಯ ಚೀನಾಕ್ಕೆ ತಿರುಗೇಟು ನೀಡಿದೆ. ಆದರೆ ಚೀನಾ ಇನ್ನೂ ಹೆಚ್ಚಿನ ಸಂಘರ್ಷಕ್ಕೆ ಇಳಿಯದಂತೆ ಭಾರತ ಮನವಿ ಮಾಡಿಕೊಂಡಿದೆ. ಎಷ್ಟು ಸಾಧ್ಯವೋ ಅಷ್ಟು ಶೀಘ್ರವಾಗಿ ಚೀನಾ ಭಾರತದ ಜತೆ ಕೈಗೂಡಿಸಿ ಸಂಪೂರ್ಣವಾಗಿ ಸೇನೆಯನ್ನು ವಾಪಸ್ ಪಡೆಯುವಲ್ಲಿ ಸಹಕರಿಸಬೇಕು ಎಂದು ತಿಳಿಸಿದೆ.