Advertisement

ಶೈಕ್ಷಣಿಕ ವರ್ಷ ಶಾಲಾ ಶುಲ್ಕ ಹೆಚ್ಚಿಸುವಂತಿಲ್ಲ?

10:23 AM Apr 19, 2020 | Suhan S |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳಲ್ಲಿ ಯಾವುದೇ ರೀತಿಯಲ್ಲೂ ಡೊನೇಷನ್‌ ಹಾಗೂ ಹೆಚ್ಚುವರಿ ಶುಲ್ಕ ಪಡೆಯದಂತೆ ರಾಜ್ಯ ಸರ್ಕಾರ ಈಗಿಂದಲೇ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.

Advertisement

ಖಾಸಗಿ ಹಾಗೂ ಅನುದಾನಿತ ಶಾಲೆಗಳ ಶುಲ್ಕಕ್ಕೆ ಸಂಬಂಧಿಸಿದಂತೆ ಸರ್ಕಾರ ಪ್ರತಿ ವರ್ಷ ಆದೇಶ ಹೊರಡಿಸುತ್ತದೆ. ಹೆಚ್ಚುವರಿ ಶುಲ್ಕ ಮತ್ತು ಡೊನೇಷನ್‌ ಪಡೆಯುವಂತಿಲ್ಲ ಎಂಬ ನಿಯಮ ರೂಪಿಸಿದರೂ, ಹೆಚ್ಚುವರಿ ಶುಲ್ಕ ವಸೂಲಾತಿಗೆ ಕಡಿವಾಣ ಬಿದ್ದಿಲ್ಲ ಮತ್ತು ಡೊನೇಷನ್‌ ಕೂಡ ಅದೇ ಪ್ರಮಾಣದಲ್ಲಿ ವಸೂಲಿ ಮಾಡುತ್ತಿದ್ದರು. ಪಾಲಕ, ಪೋಷಕರು ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಡೊನೇಷನ್‌ ಹಾಗೂ ಹೆಚ್ಚುವರಿ ಶುಲ್ಕ ಪಾವತಿ ಮಾಡುತ್ತಿದ್ದರು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಬಹತೇಕ ಐಟಿ ಸಂಸ್ಥೆಗಳು ಸೇರಿದಂತೆ ಎಲ್ಲ ವಲಯಗಳಲ್ಲೂ ಆರ್ಥಿಕ ಹಿಂಜರಿಕೆಯಿದೆ. ಆದ್ದರಿಂದ ದುಬಾರಿ ಶುಲ್ಕ ಪಾವತಿಸಲು ಪಾಲಕ, ಪೋಷಕರು ಶಕ್ತರಾಗಿಲ್ಲ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲಾಡಳಿತ ಮಂಡಳಿಗಳು ಶುಲ್ಕ ಹೆಚ್ಚಳ ಮಾಡದಂತೆ, ಹೆಚ್ಚುವರಿ ಶುಲ್ಕ ಮತ್ತು ಡೊನೇಷನ್‌ ಪಡೆದಂತೆ ನಿಗಾವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಒಂದರಿಂದ 9ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಸರ್ಕಾರ ಉತ್ತೀರ್ಣಗೊಳಿಸಿದೆ. ಅಲ್ಲದೆ, 2019-20ನೇ ಸಾಲಿನ ಬಾಕಿ ಶುಲ್ಕ ಮತ್ತು 2020-21ನೇ ಸಾಲಿನ ಹೊಸ ಪ್ರವೇಶಾತಿ ಹಾಗೂ ಶುಲ್ಕ ವಸೂಲಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿ, ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ.

ಸರ್ಕಾರದ ಮುಂದಿನ ಆದೇಶದ ನಂತರ ಪ್ರವೇಶಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಾತಿ ಆರಂಭವಾಗಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಶುಲ್ಕ ಹೆಚ್ಚಳ ಮಾಡದಿರಲು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಮನವಿ ಮಾಡಲಿದ್ದೇವೆ. ಅಲ್ಲದೆ, ಯಾವ ತರಗತಿಗೆ ಎಷ್ಟು ಶುಲ್ಕ ಪಡೆಯಬೇಕು ಎಂಬುದನ್ನು ಪ್ರತಿ ವರ್ಷದಂತೆ ಮುಂದಿನ ಸಾಲಿಗೂ ಪ್ರಕಟಿಸಲಿದ್ದೇವೆ. ಕಾನೂನೂ ಉಲ್ಲಂಘಿಸಿ ಹೆಚ್ಚುವರಿ ಶುಲ್ಕ ಅಥವಾ ಡೊನೇಷನ್‌ ಪಡೆಯುವ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಸದ್ಯದಲ್ಲೇ ಮನವಿ : ಕೋವಿಡ್ 19 ವೈರಸ್‌ ನಿಂದಾಗಿ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಚ್ಚುವರಿ ಶುಲ್ಕ ಪಡೆಯುವುದು ಅಥವಾ ಶುಲ್ಕ ಸ್ವೀಕಾರ ಪ್ರಮಾಣ ಹೆಚ್ಚಳ ಮಾಡಬಾರದು ಎಂಬ ಮನವಿಯನ್ನು ಸರ್ಕಾರ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅತೀ ಶೀಘ್ರದಲ್ಲಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಸಲ್ಲಿಸಲಾಗುತ್ತದೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.

ಇಲಾಖೆಯಿಂದ ನಿಗಾ :  ಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ ಶುಲ್ಕ ಅಥವಾ ಪಾಲಕ, ಪೋಷಕರಿಂದ ದುಬಾರಿ ಶುಲ್ಕ ಪಡೆಯುವ ಶಾಲಾಡಳಿತ ಮಂಡಳಿಗಳ ಮೇಲೆ ನಿಗಾ ಇಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡುತ್ತಿದೆ. ಜಿಲ್ಲಾ ಹಂತದ ಸಮಿತಿಗಳ ಮೂಲಕ ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ ಹಾಕಲಿದೆ. ಈ ಕುರಿತು ದೂರು ನೀಡಿದ ತಕ್ಷಣವೇ ಪರಿಶೀಲಿಸಿ, ಮುಂದಿನ ಕ್ರಮ ತಗೆದುಕೊಳ್ಳಲಿದ್ದೇವೆ ಎಂದು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮುಂದಿನ ಶೈಕ್ಷಣಿಕ ವರ್ಷ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡುವುದಿಲ್ಲ. ಪ್ರವೇಶ ಪ್ರಕ್ರಿಯೆ ಮತ್ತು ಶುಲ್ಕ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಕೃತ ಸೂಚನೆ ನೀಡಲಾಗುತ್ತದೆ. ಹೆಚ್ಚುವರಿ ಶುಲ್ಕ ವಸೂಲಿ ಮತ್ತು ಡೊನೇಷನ್‌ ಮೇಲೂ ನಿಗಾ ಇಡಲಿದ್ದೇವೆ.   ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ

 

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next