ಚಂಡಿಗಢ: ನನ್ನ ಸಿದ್ಧಾಂತ ಹಾಗೂ ವರುಣ್ ಗಾಂಧಿ ಅವರ ಸಿದ್ಧಾಂತಕ್ಕೆ ಹೊಂದಾಣಿಕೆ ಆಗುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ (17 ರಂದು) ಹೇಳಿದ್ದಾರೆ.
ಪಂಜಾಬ್‌ನ ಹೋಶಿಯಾರ್‌ಪುರನಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನನ್ನ ಸಿದ್ಧಾಂತವು ವರುಣ್ ಗಾಂಧಿ ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ. ನಾನು ಆರ್ ಎಸ್ ಎಸ್ ಕಚೇರಿಗೆ ಹೋಗುವುದಿಲ್ಲ. ಅಲ್ಲಿಗೆ ಹೋಗುವ ಮುನ್ನ ನನ್ನ ತಲೆ ಕಡಿಯಿರಿ. ನನ್ನ ಕುಟುಂಬ ಒಪ್ಪಿಕೊಂಡ ಸಿದ್ಧಾಂತವೇ ಬೇರೆ ವರುಣ್ ಒಪ್ಪಿಕೊಂಡು ಸಾಗಿದ ಸಿದ್ಧಾಂತವೇ ಬೇರೆ ಎಂದು ಹೇಳಿದರು.
ರಾಜಕೀಯ ಬಿಟ್ಟು ಪರಿವಾರದಲ್ಲಿ ಒಟ್ಟುಗೂಡಬಹುದೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, ಕುಟುಂಬದ ವಿಚಾರ ಬೇರೆ, ರಾಜಕೀಯ ವಿಚಾರ ಬೇರೆ ಎಂದರು.
ವರುಣ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಹಬ್ಬಿತ್ತು. ವರುಣ್ ಗಾಂಧಿ ಕಳೆದ ಕೆಲ ದಿನಗಳಿಂದ ಕೇಂದ್ರದ ವಿರುದ್ದವೇ ಜನರ ಸಮಸ್ಯೆ ಬಗ್ಗೆ ಟ್ವೀಟ್ ನಲ್ಲಿ ಪೋಸ್ಟ್ ಮಾಡಿದ್ದರು.
ವರುಣ್ ಗಾಂಧಿ ಹಾಗೂ ಅವರ ತಾಯಿ ಮನೇಕಾ ಗಾಂಧಿ ಉತ್ತರ ಪ್ರದೇಶದ ಸಂಸದರಾಗಿದ್ದಾರೆ. ಆದರೆ ಇಬ್ಬರೂ ಇದುವರೆಗೆ ಟ್ವಿಟರ್ ನಲ್ಲಿ ಬಿಜೆಪಿ ಹೆಸರನ್ನು ಬಳಸಿಲ್ಲ. ಇಬ್ಬರೂ ಪ್ರಧಾನಿ ಮೋದಿಯವರ ಮಂತ್ರಿ ಮಂಡಳಿ ಅಥವಾ ಯಾವುದೇ ಪ್ರಮುಖ ಬಿಜೆಪಿ ಸಮಿತಿಯ ಭಾಗವಾಗಿಲ್ಲ. ಕಳೆದ ಯುಪಿ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರದಲ್ಲೂ ಭಾಗಿಯಾಗಿಲ್ಲ.