ಬೆಂಗಳೂರು: ಹೋಟೆಲ್ ಉದ್ಯಮ ಆರಂಭಿಸಲು ನಗರಕ್ಕೆ ಆಗಮಿಸಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಘಾನಾ ಮೂಲದ ಪ್ರಜೆ ಆಂಟೋನಿ ಅಮೈರ್ ಎಂಬಾತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆತನಿಗೆ ಗಾಂಜಾ ಪೂರೈಸುತ್ತಿದ್ದ ಡಿಪ್ಲೋಮಾ ಹಾಗೂ ಬಿಟೆಕ್ ಪದವೀಧರರಾದ ಆಂಧ್ರದ ಬಿ.ನರೇಂದ್ರಬಾಬು ಹಾಗೂ ಕೆ.ಜಯಸೂರ್ಯ ಎಂಬ ಆರೋಪಿಗಳನ್ನೂ ಬಂಧಿಸಿರುವ ಪೊಲೀಸರು, ಅವರಿಂದ 20 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ.
ಆಂಧ್ರದ ವಿಶಾಖಪಟ್ಟಣದಿಂದ ಜಯಸೂರ್ಯ ಹಾಗೂ ನರೇಂದ್ರ ಬಾಬು, ಆರೋಪಿ ಆಂಟೋನಿಗೆ 20 ಕೆ.ಜಿ ಗಾಂಜಾ ತಂದುಕೊಡುತ್ತಿರುವ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮೂವರೂ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆಂಟೋನಿ, ಕಳೆದ ಮೂರು ವರ್ಷಗಳ ಹಿಂದೆ ಉದ್ಯಮ ವೀಸಾ ಅಡಿಯಲ್ಲಿ ನಗರಕ್ಕೆ ಆಗಮಿಸಿದ್ದು, ಹೋಟೆಲ್ ಆರಂಭಿಸುವ ಯೋಜನೆ ಹೊಂದಿದ್ದ. ಮೊದಲಿಗೆ, ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಶೆಫ್ ಅಗಿ ಕೆಲಸ ಆರಂಭಿಸಿದ ಆತ, ಅಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿಗಳು ಗಾಂಜಾ ಸೇವಿಸುವುದನ್ನು ಗಮನಿಸಿದ್ದ. ಹಾಗೇ ಅವರಿಗೆ ವ್ಯವಸ್ಥಿತವಾಗಿ ಗಾಂಜಾ ತಲುಪಿಸುತ್ತಿದ್ದ ಸರಬರಾಜುದಾರರ ಸಂಪರ್ಕ ಬೆಳೆಸಿಕೊಂಡಿದ್ದ.
ಬಳಿಕ, ಶೆಫ್ ಕೆಲಸ ಬಿಟ್ಟು ಪೂರ್ಣ ಮಟ್ಟದ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ವಿಶಾಖಪಟ್ಣಣ ಹಾಗೂ ತಮಿಳುನಾಡಿನಿಂದ ಗಾಂಜಾ ತರಿಸಿಕೊಂಡು ನಗರದ ವಿವಿಧ ಭಾಗಗಳಲ್ಲಿ ಮಾರಾಟ ಮಾಡಿ ವಿಲಾಸಿ ಜೀವನ ಸಾಗಿಸುತ್ತಿದ್ದ. ಆತನ ವೀಸಾ ಅವಧಿ ಕೂಡ ಪೂರ್ಣಗೊಂಡಿದ್ದು, ಕಳೆದ 6 ತಿಂಗಳಿಂದ ನಗರದ ಯಲಹಂಕದಲ್ಲಿ ಅನಧಿಕೃತವಾಗಿ ನೆಲೆಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವಿಲಾಸಿ ಜೀವನಕ್ಕಾಗಿ ದಂಧೆ: ಡಿಪ್ಲೋಮಾ ಇನ್ ಏರೋನಾಟಿಕಲ್ ಪೂರೈಸಿರುವ ನರೇಂದ್ರಬಾಬು ಹಾಗೂ ಬಿಟೆಕ್ ಮುಗಿಸಿರುವ ಜಯಸೂರ್ಯ ಕಾಲೇಜು ದಿನಗಳಿಂದಲೇ ಪರಸ್ಪರ ಸ್ನೇಹಿತರು. ವಿಧ್ಯಾಭ್ಯಾಸ ಪೂರ್ಣಗೊಂಡ ಬಳಿಕ ಕೆಲವು ತಿಂಗಳು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದು,
ಮೋಜಿನ ಜೀವನ ನಡೆಸಲು ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ, ತಮ್ಮದೇ ಕಾರಿನಲ್ಲಿ ಬೆಂಗಳೂರಿನ ಗಾಂಜಾ ಮಾರಾಟಗಾರರಿಗೆ ಗಾಂಜಾ ತಲುಪಿಸುವ ಕೆಲಸಕ್ಕಿಳಿದಿದ್ದರು. ಬಂದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿ ಹೇಳಿದರು.