ಹುಬ್ಬಳ್ಳಿ: ಗ್ರಾ.ಪಂ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್-19 ಮಾರ್ಗಸೂಚಿ ಪಾಲನೆ ಮಾಡದ ಹಿನ್ನೆಲೆಯಲ್ಲಿ, ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಘಟನೆ ಇಲ್ಲಿನ ಹುಬ್ಬಳ್ಳಿ ಲ್ಯಾಮಿಂಗ್ಟನ್ ಶಾಲೆಯ ಮತ ಎಣಿಕೆ ಕೇಂದ್ರದಲ್ಲಿ ನಡೆದಿದೆ.
ಮತ ಎಣಿಕೆ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ. ಎಲ್ಲಾ ಅಭ್ಯರ್ಥಿಗಳಿಗೆ ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ, ಒಂದೇ ಕೊಠಡಿಯಲ್ಲಿ 500 ಜನರನ್ನು ಹಾಕಿದ್ದಾರೆ ಎಂದು ಶಿರಗುಪ್ಪಿ, ಹಳ್ಯಾಳ ಗ್ರಾ.ಪಂ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಿಂದ ಹೊರ ನಡೆದರು.
ಇಲ್ಲಿ ವಯಸ್ಸಾದವರನ್ನೂ ಒಳಗೊಂಡಂತೆ ಕೆಲ ಸಕ್ಕರೆ ಕಾಯಿಲೆ ರೋಗಿಗಳಿದ್ದು, ಅವರಿಗೆ ಉಪಹಾರದ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದ ಕಾರು : ಇಬ್ಬರು ಸ್ಥಳದಲ್ಲೇ ಸಾವು
ಅಭ್ಯರ್ಥಿಗಳು ಗುಂಪಾಗಿ ಮತ ಎಣಿಕೆ ಕೇಂದ್ರದಿಂದ ಹೊರ ಬರುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಅಭ್ಯರ್ಥಿಗಳಿಗೆ ಸಮಧಾನ ಪಡಿಸಲು ಯತ್ನಿಸಿದರು. ಹಾಗೂ ತಕ್ಷಣವೆ ಎಲ್ಲಾ ಅಭ್ಯರ್ಥಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು. ಆ ಬಳಿಕ ಅಭ್ಯರ್ಥಿಗಳು ಮತ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡರು.