ಬೆಂಗಳೂರು: ತುರ್ತು ಸೇವೆಗಳಲ್ಲಿ ಒಂದಾದ ಆರೋಗ್ಯ ಸೇವೆಗೆ ಅಗತ್ಯವಾದ ಅರೆ ವೈದ್ಯ ಸಿಬ್ಬಂದಿಯನ್ನು ತ್ವರಿತವಾಗಿ ನೇಮಿಸಿಕೊಳ್ಳಲು ವಿಶೇಷ ನೇರ ನೇಮಕಾತಿಗೆ ಮುಂದಾಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕರ್ನಾಟಕ ಲೋಕಸೇವಾ ಆಯೋಗದ ಮಾದರಿಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲಕರವಾದ ಕೆಲ ವ್ಯವಸ್ಥೆ
ಜಾರಿಗೆ ಸಜ್ಜಾಗಿದೆ. ಸಂಪುಟದಲ್ಲಿ ಅನುಮೋದನೆ ಪಡೆದಂತೆ 3,100 ಹುದ್ದೆಗಳ ನೇರ ನೇಮಕಾತಿಗೆ ಇಲಾಖೆ ಸಿದ್ಧತೆ
ನಡೆಸಿದೆ. ನರ್ಸ್, ಕಿರಿಯ ಆರೋಗ್ಯ ಸಹಾಯಕರು (ಪುರುಷ/ ಮಹಿಳೆ) ಸೇರಿ ಇತರೆ ಅರೆ ವೈದ್ಯ ಸೇವೆಯ ಸಿಬ್ಬಂದಿ ನೇಮಕ ಪ್ರಕ್ರಿಯೆಯಲ್ಲಿ ಅಭ್ಯರ್ಥಿ ಸ್ನೇಹಿ ಕ್ರಮಗಳನ್ನು ಇಲಾಖೆ ಅನುಷ್ಠಾನಗೊಳಿಸುತ್ತಿದೆ.
ಇಲಾಖೆಯ ಈವರೆಗಿನ ನೇಮಕಾತಿ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳು ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ) ಮೂಲಕ ಶುಲ್ಕ ಪಾವತಿಸಬೇಕಿತ್ತು. ಆದರೆ ಈ ಬಾರಿ ಇ-ಪೇಮೆಂಟ್ ಮೂಲಕ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ
ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ, ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಬಳಸಿಯೂ ಶುಲ್ಕ ಪಾವತಿಸಬಹುದಾಗಿದೆ.
ಹಲವು ಹುದ್ದೆಗೆ ಒಂದೇ ಅರ್ಜಿ: ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿದಾರರು ಅರ್ಹರಾಗಿದ್ದರೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಬದಲಿಗೆ ಒಂದೇ ಅರ್ಜಿಯಲ್ಲೇ ಅರ್ಹತೆ ಹೊಂದಿರುವ ಬಹು ಹುದ್ದೆಗೂ ವಿವರ ಸಲ್ಲಿಸಲು ಅವಕಾಶ ಕಲ್ಪಿಸುತ್ತಿದೆ. ಇದರಿಂದ ಅಭ್ಯರ್ಥಿಗಳಿಗೆ ಶುಲ್ಕ ಉಳಿತಾಯವಾಗುವ ಜತೆಗೆ ಅರ್ಹತೆಯಿರುವ ಎಲ್ಲ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಂತಾಗಲಿದೆ. ಅರ್ಜಿಯಲ್ಲೇ ಅಭ್ಯರ್ಥಿಗಳ ಇ-ಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ದಾಖಲಿಸುವ ಅಂಕಣ ಕಲ್ಪಿಸಲಿದೆ. ಇದರಿಂದ ನೇಮಕಾತಿಗೆ ಸಂಬಂಧಪಟ್ಟ ಪ್ರಕ್ರಿಯೆಗಳ ಬಗ್ಗೆ ಅಭ್ಯರ್ಥಿಗಳಿಗೆ ಸಕಾಲದಲ್ಲಿ ಸೂಕ್ತ ಮಾಹಿತಿ ಒದಗಿಸಲು ಅನುಕೂಲವಾಗಲಿದೆ.