ಬೆಂಗಳೂರು: ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಗೆ ಹಾನಿ ಉಂಟು ಮಾಡಲಾಗಿದೆ ಎಂದು ಆರೋಪಿಸಿ ಮನೆ ಮಾಲೀಕರು ನೀಡಿದ ದೂರಿನ ಅನ್ವಯ ನಟ ಯಶ್ ತಾಯಿ ಪುಷ್ಪಾ ಅವರ ವಿರುದ್ಧ ಗಿರಿನಗರ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್‌ನ್ನು ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
ತಮ್ಮ ವಿರುದ್ಧದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಪುಷ್ಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿತು. ಇದರಿಂದಾಗಿ ಪುಷ್ಪಾ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಗೊಂಡಂತಾಗಿದೆ.
ಅರ್ಜಿಯ ವಿಚಾರಣೆ ವೇಳೆ ಪುಷ್ಪಾ ಪರ ವಕೀಲರು ವಾದ ಮಂಡಿಸಿ, ಹೈಕೋರ್ಟ್ ಆದೇಶದಂತೆ ಅರ್ಜಿದಾರರು ನಡೆದುಕೊಂಡಿದ್ದಾರೆ. ನ್ಯಾಯಾಲಯ ನಿಗದಿಪಡಿಸಿದ ಹಣವನ್ನು ಮನೆ ಮಾಲೀಕರಿಗೆ ಪಾವತಿಸಲಾಗಿದೆ. ಮನೆ ಖಾಲಿ ಮಾಡುವಾಗ ತಾವು ಹಾಕಿದ್ದ ವಸ್ತುಗಳನ್ನು ಮಾತ್ರ ಅರ್ಜಿದಾರರು ತೆಗೆದುಕೊಂಡಿದ್ದಾರೆ.
ಈ ರೀತಿ ವಸ್ತುಗಳನ್ನು ತೆಗೆಯುವಾಗ ಅಲ್ಪ-ಸ್ವಲ್ಪ ಹಾನಿ ಆಗಿದೆ. ಹಾಗಂತ, ಪೊಲೀಸರಿಗೆ ದೂರು ಕೊಟ್ಟು ಎಫ್ಐಆರ್ ದಾಖಲಿಸಿರುವುದು ಸರಿಯಲ್ಲ. ಇದರಲ್ಲಿ ಸಾಕಷ್ಟು ಕಾನೂನು ಲೋಪಗಳಾಗಿವೆ. ಹಾಗಾಗಿ, ಇದನ್ನು ರದ್ದುಗೊಳಿಸಬೇಕು ಎಂದು ಕೋರಿದರು.
ಪ್ರಕರಣವೇನು?: ಹೈಕೋರ್ಟ್ ಆದೇಶದಂತೆ ನಟ ಯಶ್ ಅವರ ತಾಯಿ ಪುಷ್ಪಾ ಅವರು ತಾವು ವಾಸವಿದ್ದ ಬನಶಂಕರಿ 3ನೇ ಹಂತದ ಬಾಡಿಗೆ ಮನೆಯನ್ನು ಜೂ.7ರಂದು ಖಾಲಿ ಮಾಡಿದ್ದರು. ಆದರೆ, ಮನೆ ಖಾಲಿ ಮಾಡುವಾಗ ಸುಮಾರು 28 ಲಕ್ಷ ರೂ.ಮೌಲ್ಯದ ಬೆಲೆ ಬಾಳುವ ವಸ್ತುಗಳಿಗೆ ಹಾನಿ ಉಂಟು ಮಾಡಲಾಗಿದೆ ಎಂದು ಮನೆ ಮಾಲೀಕರಾದ ಡಾ.ವನಜಾ ಅವರು ಶ್ರೀನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.