ರಾಜ್ಯದಲ್ಲಿ ಸರಕಾರಿ ನೌಕರರಿಗೆ ಏಳನೇ ವೇತನ ಆಯೋಗ ರಚನೆ ಘೋಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2.40 ಲಕ್ಷ ಹುದ್ದೆಗಳು ಖಾಲಿ ಇರುವುದಾಗಿ ತಿಳಿಸಿದ್ದಾರೆ. ಇಷ್ಟೊಂದು ಬೃಹತ್ ಸಂಖ್ಯೆಯ ಸರಕಾರಿ ಹುದ್ದೆಗಳು ಖಾಲಿ ಇದ್ದರೆ ಇಲಾಖೆಗಳಲ್ಲಿ ದೈನಂದಿನ ಕೆಲಸ ಕಾರ್ಯಗಳು ನಡೆಯುವುದಾದರೂ ಹೇಗೆ!
ಅತ್ತ ಕಲ್ಯಾಣ ಕರ್ನಾಟಕ ಭಾಗದಲ್ಲೂ ಸಾವಿರಾರು ಹುದ್ದೆಗಳ ಖಾಲಿ ಇರುವ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾವವಾಗಿದೆ. ಜತೆಗೆ ಇಲಾಖಾ ಸಚಿವರು ಖಾಲಿ ಹುದ್ದೆ ತುಂಬುವ ಕುರಿತ ವಿಚಾರ ಬಂದಾಗಲೆಲ್ಲ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ. ರಾಜ್ಯದಲ್ಲಿ ಎಲ್ಲ ಇಲಾಖೆಗಳಲ್ಲಿನ ಒಟ್ಟಾರೆ ಸರಕಾರಿ ನೌಕರರ ಹುದ್ದೆ 7.60 ಲಕ್ಷ. ಆ ಪೈಕಿ ತುಂಬಿರುವುದು 5.20 ಲಕ್ಷ. ಖಾಲಿ ಇರುವುದು 2.40 ಲಕ್ಷ. ಇದರಲ್ಲಿ 91 ಸಾವಿರ ಹೊರಗುತ್ತಿಗೆ ನೌಕರರು ಇದ್ದಾರೆ ಎಂದು ಅಂಕಿ-ಅಂಶ ನೀಡಲಾಗಿದೆ. ಖಾಲಿ ಇರುವ ಹುದ್ದೆಗಳಿಂದ ರಾಜ್ಯ ಸರಕಾರಕ್ಕೆ ವಾರ್ಷಿಕ 8 ಸಾವಿರ ಕೋಟಿ ರೂ. ಉಳಿತಾಯವಾಗುತ್ತಿದೆ. ಇದೀಗ 7ನೇ ವೇತನ ಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡಿದರೆ 10,500 ಕೋಟಿ ರೂ. ಹೊರೆಯಾಗುತ್ತದೆ. ಈಗಿನ ಪ್ರಕಾರ ಹೆಚ್ಚುವರಿಯಾಗಿ 2,500 ಕೋಟಿ ರೂ. ಭರಿಸಬೇಕಾಗುತ್ತದೆ ಎಂಬುದು ಸರಕಾರದ ಲೆಕ್ಕಾಚಾರ.
ಆದರೆ ಇದೇ ಲೆಕ್ಕಾಚಾರದಡಿ ಮುಂದುವರಿಯುವುದಾದರೆ 2.40 ಲಕ್ಷ ಖಾಲಿ ಹುದ್ದೆ ಭರ್ತಿ ಮಾಡುವುದಿಲ್ಲವೇ ಎಂಬ ಪ್ರಶ್ನೆಯೂ ಇದೆ. ಹೀಗಾದರೆ ವೇತನ ಆಯೋಗ ರಚನೆ ಮಾಡಿ ವೇತನ ಪರಿಷ್ಕರಣೆ ಮಾಡಿದರೂ ಇರುವ ಅಧಿಕಾರಿ-ನೌಕರರ ಮೇಲೆ ಒತ್ತಡ ಹೆಚ್ಚಾಗಲಿದೆ.
ಆರ್ಥಿಕ ಮಿತವ್ಯಯ ಜಾರಿ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳ ವಿಲೀನ, ಅನಗತ್ಯ ಹುದ್ದೆ ರದ್ದು ಕುರಿತು ಕೂಡ ಸರಕಾರದ ಮುಂದೆ ಶಿಫಾರಸು ಇದೆ. ರಾಜ್ಯ ಸರಕಾರಕ್ಕೆ ಆರ್ಥಿಕ ಶಿಸ್ತು ರೂಪಿಸಲು ಇದು ಸಕಾಲ ಎಂದೇ ಹೇಳಬಹುದು. ರಾಜ್ಯದಲ್ಲಿರುವ ಒಟ್ಟಾರೆ ಇಲಾಖೆಗಳು, ಅವುಗಳ ಕಾರ್ಯದ ಒತ್ತಡ, ಇ ಆಡಳಿತದಿಂದಾಗಿ ತೀರಾ ಅಗತ್ಯವಾಗಿ ಬೇಕಾದ ಸಿಬಂದಿ ಇವೆಲ್ಲದರ ಬಗ್ಗೆ ಸಮಗ್ರವಾಗಿ ಪರಾಮರ್ಶೆ ಮಾಡಿ ಆನಗತ್ಯ ಹುದ್ದೆ ರದ್ದು ಮಾಡಿ “ಖಾಲಿ ಹುದ್ದೆ ತುಂಬಲು ಬಾಕಿ ಇದೆ’ ಎಂಬುದಕ್ಕೆ ಅವಕಾಶ ಇಲ್ಲದಂತೆ ಮಾಡಬೇಕಾಗಿದೆ. ಇಡೀ ಇಲಾಖಾ ರಚನೆ ಹಾಗೂ ಕಾರ್ಯನಿರ್ವಹಣೆಯ ವ್ಯವಸ್ಥೆ ಬದಲಾವಣೆ ಮಾಡಬೇಕಾಗಿದೆ. ಇದರ ನಡುವೆ ಹೊರಗುತ್ತಿಗೆ ವ್ಯವಸ್ಥೆಯಿಂದ ಸಮಸ್ಯೆಗಳಾಗುತ್ತಿರುವ ದೂರುಗಳು ಇರುವುದರಿಂದ ಅದಕ್ಕೂ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಖಾಲಿ ಹುದ್ದೆ ಇದೇ ರೀತಿ ಇರಿಸಿಕೊಂಡು ಇದರಿಂದ ಉಳಿತಾಯ ಆಗುತ್ತಿದೆ ಎಂದು ಭಾವಿಸುವುದು ಸರಿಯಲ್ಲ. 2.40 ಲಕ್ಷ ಹುದ್ದೆಯಲ್ಲಿ ಇಂದಲ್ಲ ನಾಳೆ ತುಂಬಲೇಬೇಕಾದ ಹುದ್ದೆಗಳು ಇದ್ದರೆ ಅದರ ಬಗ್ಗೆ ಗಮನಹರಿಸಬೇಕಾಗಿದೆ. ಅನಗತ್ಯ ಹುದ್ದೆ ಇದ್ದರೂ ರದ್ದು ಮಾಡ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖ ವಾಗಬೇಕಾಗುತ್ತದೆ. ವೇತನ ಆಯೋಗದ ರಚನೆ, ಅನಂತರ ಅದರ ಶಿಫಾರಸಿನಂತೆ ವೇತನ ಪರಿಷ್ಕರಣೆ ಮಾಡಿ ಖಾಲಿ ಹುದ್ದೆ ಬಗ್ಗೆ ಯಥಾಸ್ಥಿತಿ ಮುಂದುವರಿಕೆಯಾದರೆ ಪರೋಕ್ಷವಾಗಿ ಇದು ಅಭಿವೃದ್ಧಿ ಹಾಗೂ ಸರಕಾರದ ದೈನಂದಿನ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು.