Advertisement
ರಾಜ್ಯ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ ಹೊಸದಾಗಿ ಘೋಷಣೆ ಮಾಡಿದ 50 ತಾಲೂಕುಗಳಲ್ಲಿ ಸರಿಯಾಗಿ ತಾಲೂಕು ಕೇಂದ್ರ ಕಚೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳು ಸ್ಥಾಪನೆ ಆಗಿಲ್ಲ. ಮೂರು ವರ್ಷ ಕಳೆದರೂ ಜನರು ಪರದಾಡುತ್ತಿದ್ದಾರೆ ಎಂದು ಆರೋಪಿಸಿ ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
Related Articles
Advertisement
ಸಮರ್ಪಕ ಪ್ರಮಾಣಪತ್ರ ಸಲ್ಲಿಸಿ:ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರ ಸಮಧಾನ ತಂದಿಲ್ಲ. ಹೊಸ ತಾಲೂಕುಗಳಿಗೆ ಕಚೇರಿ ಸ್ಥಾಪಿಸಲು ಗರಿಷ್ಠ ಕಾಲಮಿತಿ ಹಾಕಿಕೊಳ್ಳಲು 2020ರ ಫೆ.3ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಸರ್ಕಾರ, ಹಣ ಬಿಡುಗಡೆ ಮಾಡಲಾಗಿದೆ, ಕ್ರಮ ಕೈಗೊಳ್ಳಲಾಗುತ್ತಿದೆ ಎಂದಷ್ಟೇ ಪ್ರಮಾಣಪತ್ರದಲ್ಲಿ ಹೇಳಿದೆ. ಇದೊಂದು ಅಸ್ಪಷ್ಟ ಪ್ರಮಾಣಪತ್ರವಾಗಿದೆ. ಆದ್ದರಿಂದ ಹೊಸದಾಗಿ ಸಮಪರ್ಕವಾದ ಪ್ರಮಾಣಪತ್ರ ಸಲ್ಲಿಸಬೇಕು. ಯಾವುದೇ ಅಡೆತಡೆಗಳಿಲ್ಲದೆ ಹೊಸ ತಾಲೂಕುಗಳ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಆಗಬೇಕು. ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆ ಆಗದಂತೆ ಸರ್ಕಾರ ಖಾತರಿ ನೀಡಬೇಕು. ಸಮರ್ಪಕ ಪ್ರಮಾಣಪತ್ರ ಸಲ್ಲಿಸಲು ವಿಫಲವಾದಲ್ಲಿ ಮುಂದಿನ ವಿಚಾರಣೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು 2022ರ ಜ.14ಕ್ಕೆ ಮುಂದೂಡಿತು. ಅರ್ಜಿದಾರರ ವಾದ:
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ವಿ. ಶ್ರೀನಿವಾಸ್ ವಾದ ಮಂಡಿಸಿ, 2017-18ನೇ ಸಾಲಿನ ಬಜೆಟ್‌ನಲ್ಲಿ 50 ಹೊಸ ತಾಲೂಕುಗಳನ್ನು ಘೋಷಿಸಲಾಗಿದೆ. ಆದರೆ, ಮೂರು ವರ್ಷ ಕಳೆದರೂ, ತಾಲೂಕು ಕೇಂದ್ರ ಕಚೇರಿ ಸೇರಿದಂತೆ ಇತರೆ ತಾಲೂಕು ಮಟ್ಟದ ಕಚೇರಿಗಳ ಸ್ಥಾಪನೆಯಾಗಿಲ್ಲ. ಹೊಸ ತಾಲೂಕಿನ ಜನರಿಗೆ ಆಸ್ಪತ್ರೆ, ಖಜಾನೆ, ಉಪ ನೊಂದಣಾಧಿಕಾರಿ ಕಚೇರಿ, ಜೆಎಂಎಫ್ಸಿ ಕೋರ್ಟ್ ಮತ್ತಿತರರ ಕಚೇರಿಗಳ ಸೌಲಭ್ಯ ಸಿಕ್ಕಿಲ್ಲ. ಹೊಸ ತಾಲೂಕುಗಳಿಗೆ ಕಚೇರಿಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ತಾಲೂಕುಗಳಲ್ಲಿ ಕಚೇರಿಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಈ ವಿಚಾರವಾಗಿ ಅರ್ಜಿದಾರರು 2018ರ ಡಿ.31ರಂದು ನೀಡಿರುವ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಿದರು. ಸರ್ಕಾರ ಹೇಳಿದ್ದು:
ಹೊಸದಾಗಿ ಘೋಷಿಸಿರುವ 50 ತಾಲೂಕುಗಳಲ್ಲಿ “ಮಿನಿ ವಿಧಾನಸೌಧ’ಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಈಗಾಗಲೇ ತಲಾ 10 ಕೋಟಿ ರೂ. ವೆಚ್ಚದಲ್ಲಿ 13 ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ 50 ಹೊಸ ತಾಲೂಕುಗಳಲ್ಲಿ ಲಭ್ಯವಿರುವ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳಲ್ಲಿ ತಾಲೂಕು ಕಚೇರಿ ಮತ್ತು ತಾ.ಪಂ. ಕಚೇರಿ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಹೊಸ ತಾಲೂಕುಗಳಲ್ಲಿ ಕಚೇರಿಗಳ ಸ್ಥಾಪನೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಹಣಕಾಸು ಇಲಾಖೆ ಸಲಹೆ ನೀಡಿದೆ. ಅದಾಗ್ಯೂ50 ತಾಲೂಕುಗಳಿಗೆ ಆಡಳಿತಾತ್ಮಕ ವೆಚ್ಚಕ್ಕೆ 2017-19ರಿಂದ 2020-21ರವರೆಗೆ ತಲಾ 30 ಲಕ್ಷ ರೂ. ಹಣ ಮಂಜೂರು ಮಾಡಲಾಗಿದೆ, 2021-22ರಲ್ಲಿ ಪ್ರತಿ ತಾಲೂಕಿಗೆ 1.75 ಲಕ್ಷ ಹಾಗೂ ಹೆಚ್ಚುವರಿಯಾಗಿ 1.75 ಲಕ್ಷ ರೂ. ಹಣ ಮಂಜೂರು ಮಾಡಲಾಗಿದೆ ಎಂದು ಸರ್ಕಾರ ಪ್ರಮಾಣಪತ್ರದಲ್ಲಿ ಹೇಳಿದೆ.