ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ 2017-2018ನೇ ಸಾಲಿನ ವಿತ್ತ ವರ್ಷದ ಮೂರನೇ ತ್ತೈಮಾಸಿಕದಲ್ಲಿ 126 ಕೋಟಿ ರೂ. ನಿವ್ವಳ ಲಾಭಗಳಿಸಿದೆ.
ಬುಧವಾರ ನಗರದ ಕೇಂದ್ರ ಕಚೇರಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ- ಸಿಇಒ ರಾಕೇಶ್ ಶರ್ಮ ಅವರು ಕಾರ್ಯನಿರ್ವಾಹಕ ನಿರ್ದೇಶಕರಾದ ಎಂ.ವಿ. ರಾವ್ ಹಾಗೂ ಶ್ರೀಮತಿ ಪಿ.ವಿ. ಭಾರತಿ ಅವರ ಜತೆಗೂಡಿ ಪತ್ರಿಕಾಗೋಷ್ಠಿ ನಡೆಸಿ 2017ರ ಡಿಸೆಂಬರ್ ಅಂತ್ಯದ ಆರ್ಥಿಕ ಫಲಿತಾಂಶಗಳನ್ನು ಪ್ರಕಟಿಸಿದರು.
ಬ್ಯಾಂಕಿನ ಒಟ್ಟು ಲಾಭ ವರ್ಷದಿಂದ ವರ್ಷಕ್ಕೆ ಶೇ.42.9ರ ಬೆಳವಣಿಗೆಯೊಂದಿಗೆ 2,831 ಕೋಟಿ ರೂ.ಗೆ ತಲುಪಿದ್ದರೆ, ನಿವ್ವಳ ಲಾಭದಲ್ಲಿ ಮಾತ್ರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 196 ಕೋಟಿ ರೂ. ಕಡಿಮೆಯಾಗಿದೆ. ಆದರೆ, ಜಾಗತಿಕ ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ ಶೇ.4.16 ರಷ್ಟು ವೃದ್ಧಿಯಾಗಿ 8.77 ಲಕ್ಷ ಕೋಟಿ ರೂ. ವಹಿವಾಟು ನಡೆಸಿ, ಜಾಗತಿಕ ಠೇವಣಿ 5.04 ಲಕ್ಷ ಕೋಟಿಗೆ ತಲುಪಿರುವುದು ಬ್ಯಾಂಕಿನ ಬೆಳವಣಿಗೆಯನ್ನು ತೋರಿಸುತ್ತದೆ ಎಂದರು.
ಶೇಕಡವಾರು ಮುಂಗಡ ಹೆಚ್ಚಳ: ಈ ತ್ತೈಮಾಸಿಕದಲ್ಲಿ ಕೃಷಿ ಸಾಲದಲ್ಲಿ ಶೇ.14.80, ಎಂಎಸ್‌ಎಂಇ ಶೇ.15.65, ರಿಟೇಲ್ ಕ್ಷೇತ್ರ ಶೇ.32.87, ನೇರ ಗೃಹಸಾಲ ಶೇ.22.29, ವಾಹನ ಸಾಲ ಶೇ.33.21, ಶಿಕ್ಷಣ ಸಾಲ ಶೇ.11.85 ರಷ್ಟು ಹೆಚ್ಚಳ ಮಾಡಲಾಗಿದ್ದಲ್ಲದೆ, ವೈಯಕ್ತಿಕ ಸಾಲ ನೀಡುವಿಕೆಯಲ್ಲೂ ಶೇ.43.46 ರಷ್ಟು ಹೆಚ್ಚಳ ಮಾಡಲಾಗಿದೆ.
ಚಾಲ್ತಿ ಮತ್ತು ಉಳಿತಾಯ (ಕಾಸಾ) ಠೇವಣಿಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.2.53ರ ಬೆಳವಣಿಗೆಯೊಂದಿಗೆ 1.58 ಲಕ್ಷ ಕೋಟಿ ರೂ.ಗೆ ತಲುಪಿದೆ. ನಿವ್ವಳ ಆನುತ್ಪಾದಕ ಆಸ್ತಿಗಳ ಅನುಪಾತ ಸೆಪ್ಟೆಂಬರ್ 2017ರಲ್ಲಿದ್ದ ಶೇ.7.02ಕ್ಕೆ ಹೋಲಿಸಿದಾಗ ಶೇ.6.78ಕ್ಕೆ ಅನುಕ್ರಮವಾಗಿ ಇಳಿಕೆ ಕಂಡುಬಂದಿರುವುದು ಸಂತಸ ಸಂಗತಿ.
ನಮ್ಮ ಮುಂಗಡ ಠೇವಣಿಯ ಅನುಪಾತವೂ ಶೇ.74.05ಕ್ಕೇರಿದ್ದು, ಸಾಲ ವಸೂಲಾತಿಯಲ್ಲಿನ ಬದಲಾವಣೆಗಳು, ನಿಷ್ಕಿಯ ಖಾತೆಗಳಲ್ಲಿ ಅದರಲ್ಲೂ ರೈಟ್ ಆಫ್ ಆದ ಸಾಲಗಳಲ್ಲಿನ ವಸೂಲಾತಿಯಿಂದ ನಮ್ಮ ಬಡ್ಡಿಯೇತರ ಆದಾಯವೂ ಉತ್ತಮಗೊಂಡಿದೆ. ಮುಂದಿನ ದಿನಗಳಲ್ಲಿ ಬ್ಯಾಂಕು ಮತ್ತಷ್ಟು ಅಭಿವೃದ್ಧಿ ಕಾಣಲಿದೆ ಎಂದು ರಾಕೇಶ್ ಶರ್ಮ ತಿಳಿಸಿದರು.