ಬೆಂಗಳೂರು: ಕೆನರಾ ಬ್ಯಾಂಕ್ 2017-2018ನೇ ಆರ್ಥಿಕ ವರ್ಷದಲ್ಲಿ 9,548 ಕೋಟಿ ರೂ. ಒಟ್ಟು ಲಾಭ ಗಳಿಸಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಲಾಭ ಪ್ರಮಾಣ ಶೇ.7.12 ಹೆಚ್ಚಳ ಕಂಡಿದೆ.
ನಗರದ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಜೇಶ್ ಶರ್ಮಾ ಮಾತನಾಡಿ, 2017-18ನೇ ಸಾಲಿನಲ್ಲಿ ನಿವ್ವಳ ಬಡ್ಡಿ ಆದಾಯವು 12,163
ಕೋಟಿ ರೂ. ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.23.21ರಷ್ಟು ಹೆಚ್ಚಳ ಕಂಡಿದೆ. ಜಾಗತಿಕ ಠೇವಣಿ ಮೊತ್ತವು 5.25 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಮೂಲಕ ಶೇ 5.96 ಏರಿಕೆ ಕಂಡುಬಂದಿದೆ ಎಂದು ಹೇಳಿದರು. ಒಟ್ಟು ಅನುತ್ಪಾದಕ ಸಾಲ ಪ್ರಮಾಣ ಶೇ.11.84 ಹಾಗೂ ನಿವ್ವಳ ಅನುತ್ಪಾದಕ ಸಾಲ ಸರಾಸರಿ ಶೇ.7.48ರಷ್ಟಿದೆ.
ಬಡ್ಡಿಯೇತರ ಆದಾಯದಲ್ಲಿ ಶೇ.11.53 ಏರಿಕೆಯಾಗಿದ್ದರೆ, ಒಟ್ಟಾರೆ ವ್ಯವಹಾರವು 9.06 ಲಕ್ಷ ಕೋಟಿ ರೂ. ಮೀರಿದ್ದು, ಶೇ.8.26 ಹೆಚ್ಚಳವಾಗಿದೆ. ಕೃಷಿಗೆ ಶೇ.13.41ರಷ್ಟು, ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕಾ ವಲಯಕ್ಕೆ ಶೇ.10.49, ರೀಟೆಲ್ ಕ್ಷೇತ್ರಕ್ಕೆ ಶೇ.30.46, ಗೃಹಸಾಲ ಶೇ. 16.32, ವಾಹನ ಸಾಲದಲ್ಲಿ ಶೇ.31.11, ಶಿಕ್ಷಣ ಶೇ. 10.23, ವೈಯಕ್ತಿಕ ಸಾಲ ಪ್ರಮಾಣ ಶೇ. 56.13 ಹೆಚ್ಚಳವಾಗಿದೆ. ಚಾಲ್ತಿ ಮತ್ತು ಉಳಿತಾಯ ಖಾತೆಗಳಲ್ಲಿ ಶೇ.32.85ರಿಂದ 34.28 ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಬ್ಯಾಂಕ್‌ನ ಶಾಖೆಗಳ ಸಂಖ್ಯೆ 6,212 ಹಾಗೂ ಎಟಿಎಂಗಳ ಸಂಖ್ಯೆ 9,395ಕ್ಕೆ ತಲುಪಿದ್ದು, ಇನ್ನು ಅಂತರ್ಜಾಲ ವ್ಯವಹಾರ ಪ್ರಮಾಣವು ಶೇ.12ರಷ್ಟು ಗಣನೀಯ ಏರಿಕೆ ಕಂಡಿದೆ. 93.75 ಲಕ್ಷ ಮೊಬೈಲ್ ಬ್ಯಾಂಕಿಂಗ್ ಹಾಗೂ 47.96 ಲಕ್ಷ ನೆಟ್‌ಬ್ಯಾಂಕಿಂಗ್ ಬಳಕೆದಾರರು ಇದ್ದಾರೆ. ಇನ್ನು ಮುಂದಿನ ವರ್ಷ ಚಾಲ್ತಿ ಹಾಗೂ ಉಳಿತಾಯ ಠೇವಣಿ ಹೆಚ್ಚಿಸುವ ಜೊತೆಗೆ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗುದು ಎಂದು ತಿಳಿಸಿದರು. ಕಾರ್ಯಕಾರಿ ನಿರ್ದೇಶಕರಾದ ಎಂ.ವಿ. ರಾವ್, ಪಿ.ವಿ.ಭಾರತಿ ಉಪಸ್ಥಿತರಿದ್ದರು.