ಒಟ್ಟಾವ(ಕೆನಡಾ): ಕೋವಿಡ್ ಎರಡನೇ ಅಲೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಹತ್ತು ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ನೆರವು ನೀಡಲು ಸಿದ್ಧವಿರುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಂತ್ಯಕ್ರಿಯೆಗೆ ಗ್ರಾಮಸ್ಥರ ವಿರೋಧ : ಸೈಕಲ್ ಮೇಲೆ ಪತ್ನಿ ಶವ ಹೊತ್ತು ಊರೆಲ್ಲ ತಿರುಗಿದ ವೃದ್ಧ
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ 19 ಸೋಂಕು ನಿಗ್ರಹದ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಹೆಚ್ಚುವರಿ ಮೆಡಿಕಲ್ ಸರಬರಾಜು ಸಹಾಯ ಸೇರಿದಂತೆ ಯಾವ ರೀತಿಯಲ್ಲಿ ಕೆನಡಾದ ನೆರವು ಬಯಸುತ್ತೀರಿ ಎಂಬ ಬಗ್ಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರ ಜತೆ ಮಾತುಕತೆ ನಡೆಸಿರುವುದಾಗಿ ಕೆನಡಾ ವಿದೇಶಾಂಗ ವ್ಯವಹಾರಗಳ ಸಚಿವ ಮಾರ್ಕ್ ಗರ್ನೆವು ತಿಳಿಸಿದ್ದಾರೆ.
ನಾವು ಕೆನಡಾ ರೆಡ್ ಕ್ರಾಸ್ ಸಂಸ್ಥೆ ಮೂಲಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ 10 ಮಿಲಿಯನ್ ಡಾಲರ್ ಹಣವನ್ನು ನೀಡಲು ಸಿದ್ಧರಿರುವುದಾಗಿ ಪ್ರಧಾನಿ ಟ್ರುಡೋ ತಿಳಿಸಿದ್ದಾರೆ. ಈ ಹಣ ಆ್ಯಂಬುಲೆನ್ಸ್ ಸೇವೆ ಮತ್ತು ಸ್ಥಳೀಯವಾಗಿ ಪಿಪಿಇ ಕಿಟ್ ಸೇರಿದಂತೆ ಎಲ್ಲಾ ರೀತಿಯ ಉಪಕರಣ ಖರೀದಿಗೆ ನೆರವಾಗಲಿದೆ ಎಂದು ಹೇಳಿದರು.
ಕೋವಿಡ್ 19 ಸೋಂಕು ಭಾರತದಲ್ಲಿ ಹೆಚ್ಚಿನ ಅಪಾಯವನ್ನು ತಂದೊಡ್ಡಿದೆ. ನಾವು ಸ್ನೇಹಿತ ರಾಷ್ಟ್ರಗಳಾಗಿ ನೆರವು ನೀಡಬೇಕಾಗಿದೆ. ಇದು ಇಡೀ ಜಗತ್ತನ್ನೇ ಕಂಗೆಡಿಸಿರುವುದನ್ನು ನೋಡಿದ್ದೇವೆ. ಹೀಗಾಗಿ ನಾವು ಭಾರತಕ್ಕೆ ಎಲ್ಲ ರೀತಿಯ ನೆರವು ನೀಡಲು ಸಿದ್ದರಾಗಿದ್ದೇವೆ ಎಂದು ಟ್ರುಡೋ ತಿಳಿಸಿದರು.