Advertisement

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

02:29 AM Oct 18, 2024 | Team Udayavani |

ಹೊಸದಿಲ್ಲಿ: ಖಲಿಸ್ಥಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಸಂಬಂಧಿಸಿದಂತೆ ಭಾರತದ ಮೇಲೆ ಹೊರಿಸಲಾಗುತ್ತಿರುವ ಆರೋಪಗಳು ಸುಳ್ಳು ಹಾಗೂ ಪ್ರಕರಣದಲ್ಲಿ ಭಾರತ ಹೊಂದಿರುವ ನಿಲುವು ಮೌಲ್ಯಯುತವಾದದ್ದು ಎಂಬುದನ್ನು ಸ್ವತಃ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರ ಹೇಳಿಕೆಗಳೇ ಸಾಬೀತು ಪಡಿಸಿವೆ. ಹೀಗೆಂದು ಭಾರತ ಸರಕಾರ ಗುರುವಾರ ಹೇಳಿದೆ ಜತೆಗೆ ಭಾರತದ ಮೇಲೆ ಆರೋಪಗಳನ್ನು ಮಾಡಿ ಉಭಯ ರಾಷ್ಟ್ರಗಳ ಸಂಬಂಧಕ್ಕೆ ಆಗಿರುವ ಹಾನಿಯ ಜವಾಬ್ದಾರಿಯನ್ನೂ ಟ್ರಾಡೊ ಅವರೇ ಹೊರ ಬೇಕು, ಇದಕ್ಕೆಲ್ಲ ಅವರ ಹಠಮಾರಿ ಧೋರಣೆಯೇ ಕಾರಣ ಎಂದೂ ಚಾಟಿ ಬೀಸಿದೆ.

Advertisement

ನಿಜ್ಜರ್‌ ಹತ್ಯೆಯಲ್ಲಿ ಭಾರತೀಯ ರಾಜ ತಾಂತ್ರಿಕರ ಕೈವಾಡವಿದೆ ಇದಕ್ಕೆಲ್ಲ ನನ್ನ ಬಳಿ ಪುರಾವೆ ಇದೆ ಎಂದು ಹೇಳಿಕೊಳ್ಳುತ್ತಿದ್ದ ಟ್ರುಡೊ ಬುಧವಾರ ಸಾರ್ವಜನಿಕವಾಗಿ ಭಾರತದ ಕೈವಾಡ ನಿರೂಪಿಸುವ ಯಾವುದೇ ಬಲವಾದ ಸಾಕ್ಷಿ ಇಲ್ಲ, ಅವುಗಳನ್ನು ಭಾರತದ ಮುಂದೆ ನಾವು ಪ್ರಸ್ತುತವೂ ಪಡಿಸಿಲ್ಲ ಎಂದು ಒಪ್ಪಿಕೊಂಡಿದ್ದರು.

ಈ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಪತ್ರಿಕಾಗೋಷ್ಠಿ ನಡೆಸಿ, ಮೇಲ್ಕಂಡ ಹೇಳಿಕೆ ನೀಡಿದ್ದಾರೆ. ಜತೆಗೆ ನಮ್ಮ ರಾಜತಾಂತ್ರಿಕರ ವಿರುದ್ಧದ ಯಾವುದೇ ಸಾಕ್ಷ್ಯವಿಲ್ಲದ ಆರೋಪಗಳನ್ನು ನಾವು ಒಪ್ಪುವುದಿಲ್ಲ. ಟ್ರುಡೊ ಅವರ ಹೇಳಿಕೆಯೇ ನಮ್ಮ ನಿಲುವು ಸರಿ ಇದೆ ಎಂಬುದನ್ನು ಸಾಬೀತು ಪಡಿಸಿದೆ ಎಂದಿದ್ದಾರೆ.

ಬಿಷ್ಣೋಯ್‌ ವಿರುದ್ಧ ಕ್ರಮಕ್ಕೆ ಕೆನಡಾ ಸಿದ್ಧವಿಲ್ಲ: ಭಾರತ
ಕೆನಡಾದಲ್ಲಿನ ಟಾರ್ಗೆಟ್‌ ಕಿಲ್ಲಿಂಗ್‌ಗೆ ಭಾರ ತದ ರಾಜ ತಾಂತ್ರಿಕರು ಬಿಷ್ಣೋಯ್‌ ಗ್ಯಾಂಗ್‌ ಸದಸ್ಯರನ್ನು ಬಳಸುತ್ತಿದ್ಧಾರೆ ಎಂದಿದ್ದ ಕೆನಡಾ ಪೊಲೀಸರಿಗೆ ಭಾರತ ತಕ್ಕ ತಿರುಗೇಟು ನೀಡಿದೆ. ಕೆನಡಾದಲ್ಲಿರುವ ಬಿಷ್ಣೋಯ್‌ ಗ್ಯಾಂಗ್‌ನ 26 ಮಂದಿಯ ಹಸ್ತಾಂತರ ಕೋರಿ ಭಾರತ 1 ದಶಕದಿಂದ ಮನವಿ ಸಲ್ಲಿಸಿದರೂ ಕೆನಡಾ ಕ್ರಮ ಕೈಗೊಂಡಿಲ್ಲ ಎಂದಿದೆ.

ಪ್ರಧಾನಿ ಹುದ್ದೆ ತೊರೆಯಲು ಜಸ್ಟಿನ್‌ ಟ್ರಾಡೊಗೆ ಒತ್ತಡ
ಒಟ್ಟಾವ: ಖಲಿಸ್ಥಾನ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿರುವ ಪ್ರಧಾನಿ ಜಸ್ಟಿನ್‌ ಟ್ರುಡೊ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದೆ. ಭಾರತದ ಜತೆಗಿನ ಬಾಂಧವ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಕೆನಡಾ ಆಡಳಿತ ಲಿಬರಲ್‌ ಪಕ್ಷದ ಸಂಸದರೇ ಟ್ರುಡೊ ರಾಜೀನಾಮೆಗೆ ಆಗ್ರಹಿಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ.

Advertisement

ಕೆನಡಾ ಪ್ರಧಾನಿ ಮಾತಿಗೆ ಭಾರತದ ನಾಯಕರ ಟೀಕೆ
ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡ ಬಗ್ಗೆ ಸಾಕ್ಷ್ಯಗಳಿಲ್ಲ ಎಂಬ ಟ್ರುಡೊ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕಿ ಶಮಾ ಮೊಹಮ್ಮದ್‌ ಟೀಕಿಸಿದ್ದಾರೆ. “ಸಾಕ್ಷ್ಯವಿಲ್ಲದೇ ಕೇವಲ ಗುಪ್ತ ಚರ ಮಾಹಿತಿ ಆಧಾರದಲ್ಲಿ ವಿಶ್ವಮಟ್ಟದ ನಾಯಕ ಆರೋಪಗಳನ್ನು ಮಾಡುತ್ತಾನೆಂದರೆ ಅದು ಹಾಸ್ಯಾಸ್ಪದ’ ಎಂದಿದ್ದಾರೆ. ಟ್ರುಡೊ ಹೇಳಿಕೆ ಬೂಟಾಟಿಕೆಯದ್ದು ಎಂದು ಟಿಎಂಸಿ ಸಂಸದ ಸಾಕೇತ್‌ ಗೋಖಲೆ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next