ಮಗುವಿಗೆ ಎದೆಹಾಲಿಗಿಂತ ಬೇರೆ ಅಮೃತವಿಲ್ಲ. ಆರು ತಿಂಗಳಾಗುವವರೆಗೆ ಎದೆಹಾಲನ್ನು ಬಿಟ್ಟು ಬೇರೆ ಏನನ್ನೂ ಕೊಡಬೇಡಿ ಅನ್ನುತ್ತಾರೆ ವೈದ್ಯರು. ನವಜಾತ ಶಿಶುವಿನ ಲಾಲನೆ- ಪಾಲನೆಗೆ ಮಾರ್ಕೆಟ್‌ನಲ್ಲಿ ಏನೇ ವಸ್ತುಗಳು ಬಂದಿರಲಿ, ಹೊಟ್ಟೆಗೆ ಮಾತ್ರ ಎದೆಹಾಲೇ ಸೂಕ್ತ. ಆದರೆ, ಕೆಲವು ಸಂದರ್ಭಗಳಲ್ಲಿ ಮಗು, ತಾಯಿಯ ಎದೆಹಾಲಿನಿಂದ ವಂಚಿತವಾಗುತ್ತದೆ. ಹೆರಿಗೆಯಲ್ಲಿ ತಾಯಿ ತೀರಿಕೊಂಡರೆ, ತಾಯಿಗೆ ಸೋಂಕು ರೋಗವಿದ್ದರೆ ಅಥವಾ ಸೌಂದರ್ಯ ಹಾಳಾಗುತ್ತದೆ ಎಂದು ತಾಯಿಯೇ ಹಾಲುಣಿಸಲು ಹಿಂಜರಿದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಬದಲಿ ವ್ಯವಸ್ಥೆ ಎಂದರೆ ಏನು? ಹಸುವಿನ ಹಾಲು ಕೊಡುವುದಲ್ಲ, ತಾಯಿ ಹಾಲೇ ಆಗಬೇಕು. ಅಂದರೆ, ಮಿಲ್ಕ್ಬ್ಯಾಂಕ್‌ನ ನೆರವು ಪಡೆಯಬಹುದು ಅಥವಾ ಬೇರೊಬ್ಬ ತಾಯಿ, ಮಗುವಿಗೆ ಹಾಲುಣಿಸುವ ಮೂಲಕ ಹಸಿವು ಇಂಗಿಸಬಹುದು. ಆದರೆ, ತಾಯಿಯಲ್ಲದ ತಾಯಿಯ ಎದೆಹಾಲು ಮಗುವಿಗೆ ಎಷ್ಟು ಸುರಕ್ಷಕ ಎಂಬ ಪ್ರಶ್ನೆ ಮೂಡಿದಾಗ ಈ ಮೂರು ವಿಷಯಗಳ ಕುರಿತು ಗಮನ ಹರಿಸಬೇಕು.
1.ಮಿಲ್ಕ್ಬ್ಯಾಂಕ್‌ನ ಹಾಲನ್ನು ಮಗುವಿಗೆ ನೀಡುವಾಗ, ಹಾಲಿನ ಗುಣಮಟ್ಟ ಮಹತ್ವದ್ದಾಗಿರುತ್ತದೆ. ಹಾಲನ್ನು ಶೇಖರಿಸುವಾಗ, ಸರಬರಾಜು ಮಾಡುವಾಗ ಚೂರು ಕಲಬೆರಕೆಯಾದರೂ ಅದು ಮಗುವಿನ ಪಾಲಿಗೆ ವಿಷವಾಗಿಬಿಡಬಹುದು.
2.ತಾಯಿ ಸೇವಿಸುವ ಆಹಾರ ಎದೆಹಾಲಾಗಿ ಪರಿವರ್ತಿತವಾಗುತ್ತದೆ. ಹಾಲುಣ್ಣುವ ಮಕ್ಕಳಿರುವ ತಾಯಂದಿರು ತಮ್ಮ ಆಹಾರ, ಸೇವಿಸುವ ಔಷಧಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆದರೆ, ನಿಮ್ಮ ಮಗುವಿಗೆ ಬೇರೊಂದು ತಾಯಿ ಎದೆಹಾಲು ನೀಡುವುದಾದರೆ, ಆಕೆಯ ಆಹಾರ, ಆರೋಗ್ಯದ ಬಗ್ಗೆ ನೂರಕ್ಕೆ ನೂರರಷ್ಟು ನಿಮಗೆ ತಿಳಿದಿರಬೇಕಾಗುತ್ತದೆ.
3.ಕೆಲವು ಸೋಂಕು ರೋಗಗಳನ್ನು ಹರಡುವ ಬ್ಯಾಕ್ಟೀರಿಯಾಗಳು ಎದೆಹಾಲಿನ ಮೂಲಕ ಮಗುವಿನ ದೇಹ ಸೇರುವ ಅಪಾಯವಿರುತ್ತದೆ. ಎಚ್‌ಐವಿಪೀಡಿತ ತಾಯಿಯಿಂದ ಮಗುವಿಗೆ ರೋಗ ಪ್ರಸರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆಯಾದರೂ, ಆ ಬಗ್ಗೆ ಇನ್ನೂ ಖಚಿತವಾಗಿಲ್ಲ. ಹಾಗಾಗಿ ನಿಮ್ಮ ಮಗುವಿಗೆ ಹಾಲುಣಿಸುವ ತಾಯಿಗೆ ಯಾವುದಾದರೂ ರೋಗವಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ.