Advertisement
ಸರಕಾರದ ಘೋಷಣೆಯಂತೆ ತರಕಾರಿ ಬೆಳೆಗಾರರು ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ. ಪರಿಹಾರ ಪಡೆಯಲಿದ್ದಾರೆ. ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಕ್ಯಾಬೀಜ್, ಟೊಮ್ಯಾಟೊ, ಸವತಿಕಾಯಿ, ಮೆಣಸಿನಕಾಯಿ, ಹೂ ಕೋಸು ಮೊದಲಾದ ತರಕಾರಿ ಬೆಳೆಗಾರರಿಗೆ ಇದರ ಪ್ರಯೋಜನ ಸಿಗಲಿದೆ. ಆದರೆ ತರಕಾರಿ ಬೆಳೆಗಾರರಿಗೆ ಸರಕಾರ ಘೋಷಣೆ ಮಾಡಿರುವ ಪರಿಹಾರದ ಹಣ ಪಡೆಯುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಲಿದೆ ಎಂದು ಸಣ್ಣ ರೈತರೇ ಹೇಳುತ್ತಿರುವುದು ನಿಜವಾದ ಫಲಾನುಭವಿಗಳು ಯೋಜನೆ ಲಾಭ ಪಡೆಯಲಿದ್ದಾರೆಯೇ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
Related Articles
Advertisement
ಬೇರೆಯವರ ಹೊಲದಲ್ಲಿ ಉಳಿಮೆ ಮಾಡುತ್ತಿರುವ ರೈತರ ನೆರವಿಗೆ ಸರಕಾರ ಧಾವಿಸಬೇಕು. ಭೂ ಮಾಲೀಕರು ಬೇರೆಯವರಾಗಿರುವದರಿಂದ ಉತಾರ ಹಾಗೂ ಬ್ಯಾಂಕ್ ಖಾತೆಗಳು ಅವರ ಹೆಸರಿನಲ್ಲಿರುತ್ತವೆ. ಸರಕಾರದ ಪರಿಹಾರ ಸಹ ಅವರ ಹೆಸರಿಗೆ ಬರುತ್ತದೆ. ನಾವು ಕೇಳಿದರೆ ಭೂ ಮಾಲೀಕರಿಂದ ನೀವೇ ಪಡೆದುಕೊಳ್ಳಿ. ಅದಕ್ಕೆ ಒಪ್ಪಂದ ಮಾಡಿಕೊಳ್ಳಿ ಎನ್ನುತ್ತಾರೆ. ವಾಸ್ತವದಲ್ಲಿ ಇದು ಸಾಧ್ಯವೇ. ಭೂ ಮಾಲೀಕರು ಸಣ್ಣ ರೈತರ ಜೊತೆ ಇಂತಹ ಒಪ್ಪಂದ ಮಾಡಿಕೊಳ್ಳುವರೇ ಎಂಬುದು ಹಾನಿ ಅನುಭವಿಸಿರುವ ರೈತರ ಪ್ರಶ್ನೆ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಬರೀ ನಷ್ಟವನ್ನೇ ಅನುಭವಿಸಿದ್ದೇವೆ. ಈ ಬಾರಿ ಒಳ್ಳೆಯ ಬೆಳೆ ಬಂದಿದ್ದರೂ ಕೋವಿಡ್ ವೈರಸ್ ಹಾವಳಿ ಎಲ್ಲವನ್ನೂ ಹಾಳುಮಾಡಿದೆ.
ಹೊಲದಲ್ಲಿ ರಾಶಿ ರಾಶಿಯಾಗಿ ಇದ್ದ ಬೆಳೆಯನ್ನು ಯಾರೂ ಖರೀದಿ ಮಾಡಲು ಬರದೇ ಇದ್ದರಿಂದ ಎಲ್ಲವೂ ಹೊಲದಲ್ಲೇ ಕೊಳೆತಿದೆ. ಕಾರಣ ಸರಕಾರವೇ ನಿಯಮಾವಳಿಗಳನ್ನು ಬದಲಾಯಿಸಿ ಸಾಗುವಳಿ ಮಾಡುತ್ತಿರುವವರಿಗೆ ಪ್ರತಿ ಹೆಕ್ಟೇರ್ ಗೆ 50 ಸಾವಿರ ರೂ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ.
ಸರಕಾರ ತರಕಾರಿ ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿದೆ. ಇದು ಸ್ವಾಗತಾರ್ಹ. ಆದರೆ ಬೇರೆಯವರ ಹೊಲ ಪಡೆದು ಉಳಿಮೆ ಮಾಡುತ್ತಿರುವ ರೈತರಲ್ಲಿ ಯಾವುದೇ ದಾಖಲೆ ಇರುವುದಿಲ್ಲ. ಉತಾರ ಭೂ ಮಾಲೀಕರ ಹೆಸರಲ್ಲಿ ಇರುತ್ತದೆ. ಹೀಗಾಗಿ ಸರಕಾರದ ಪರಿಹಾರ ಸಹ ಉಳಿಮೆ ಮಾಡಿದ ರೈತರ ಬದಲು ಭೂಮಿ ಮಾಲೀಕರಿಗೆ ಹೋಗುತ್ತದೆ. ಕಾರಣ ಈ ನಿಯಮವನ್ನು ಬದಲಿಸಿ ನಿಜವಾದ ಫಲಾನುಭವಿಗಳಿಗೆ ಪರಿಹಾರ ಕೊಡಬೇಕು. –ಅಪ್ಪಾಸಾಹೇಬ ದೇಸಾಯಿ, ರೈತ ಮುಖಂಡ
ಸರಕಾರದ ಮಾರ್ಗಸೂಚಿಯಂತೆ ಭೂ ಮಾಲೀಕರಿಗೆ ಪರಿಹಾರ ಕೊಡಲಾಗುತ್ತದೆ. ಸಾಗುವಳಿದಾರರಿಗೆ ಈ ಪರಿಹಾರ ಕೊಡಲು ಅವಕಾಶ ಇಲ್ಲ. ಒಂದು ವೇಳೆ ರೈತರು ಬೇರೆಯವರ ಹೊಲ ಪಡೆದು ಸಾಗುವಳಿ ಮಾಡುತ್ತಿದ್ದರೆ ಅವರಿಂದ ಪರಿಹಾರ ಪಡೆದುಕೊಳ್ಳಬೇಕು. –ರವೀಂದ್ರ ಹಕಾಟಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ
-ಕೇಶವ ಆದಿ