Advertisement

ಧೋನಿ ಸ್ಥಾನ ತುಂಬಬಲ್ಲರೇ ರಿಷಭ್‌ ಪಂತ್‌?

03:24 PM Sep 22, 2018 | |

ಮಹೇಂದ್ರ ಸಿಂಗ್‌ ಧೋನಿ ಭಾರತ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ವಿಕೆಟ್‌ಕೀಪರ್‌. ಈ ಮಾತಲ್ಲಿ ಯಾವುದೇ ಅತಿಶಯೋಕ್ತಿಯಲ್ಲ. ಟಿ20, ಏಕದಿನ, ಟೆಸ್ಟ್‌ನಲ್ಲಿ ನಾಯಕನಾಗಿ, ಬ್ಯಾಟ್ಸ್‌ಮನ್‌ ಆಗಿ, ವಿಕೆಟ್‌ ಕೀಪರ್‌ ಆಗಿ ಎಲ್ಲದರಲ್ಲೂ ಧೋನಿ ಸೈ ಎನಿಸಿಕೊಂಡಿದ್ದಾರೆ. 

Advertisement

ವಿಶ್ವ ಕ್ರಿಕೆಟ್‌ನಲ್ಲಿ ದಾಖಲೆಗಳ ವೀರನಾಗಿ, ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಧೋನಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾಗ ಮುಂದೆ ವಿಕೆಟ್‌ ಕೀಪರ್‌ ಯಾರು? ಎನ್ನುವಂತಹ ಪ್ರಶ್ನೆಗಳು ಬಿಸಿಬಿಸಿ ಚರ್ಚೆಯ ವಿಷಯವಾಗಿತ್ತು. ಇದೀಗ ಅಂತಹ ಪ್ರಶ್ನೆಗೆ ಉತ್ತರ ಸಿಕ್ಕುವ ಕಾಲ ಸನ್ನಿಹಿತವಾಗಿದೆ. ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಹೊಸ ಪ್ರತಿಭೆಯ ಉದಯವಾಗಿದೆ. ಧೋನಿ ಬಳಿಕ ಯಾರು ಎಂಬ ಮಂತ್ರ ಜಪಿಸುತ್ತಿದ್ದವರಿಗೆ ರಿಷಭ್‌ ಪಂತ್‌ ಉತ್ತರವಾಗಿ ಕಾಣುತ್ತಿದ್ದಾರೆ. 

ಹೊಸ ಪ್ರತಿಭೆ ಯಾರು?: ಧೋನಿ ಸ್ಥಾನ ತುಂಬಲು ಕಳೆದ ಎರಡು ವರ್ಷದಿಂದ ಅನೇಕರು ಪ್ರಯತ್ನ ಪಡುತ್ತಲೇ ಇದ್ದಾರೆ ಆ ಸಾಲಿನಲ್ಲಿ ಮೊದಲಿಗೆ ಬರೋದು ದಿನೇಶ್‌ ಕಾರ್ತಿಕ್‌. ನಂತರ ಪಾರ್ಥಿವ್‌ ಪಟೇಲ್‌, ವೃದ್ಧಿಮಾನ್‌ ಸಹಾ, ಸಂಜು ಸ್ಯಾಮ್ಸನ್‌. ಆದರೆ ಅವರೆಲ್ಲರನ್ನು ಹಿಂದಿಕ್ಕಿರುವ ರಿಷಭ್‌ ಪಂತ್‌ ಭವಿಷ್ಯದಲ್ಲಿ ಧೋನಿ ಸ್ಥಾನ ಅಲಂಕರಿಸುವ ಭರವಸೆ ಮೂಡಿಸಿದ್ದಾರೆ. 

 20 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಸಿಕ್ಕ ಮೊದಲ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಪ್ರತಿಭಾವಂತ. ಆಡಿದ ಚೊಚ್ಚಲ ಪಂದ್ಯದಲ್ಲೇ   ಎರಡೆರಡು ದಾಖಲೆ ಮಾಡಿದ್ದಾರೆ ಹಾಗೂ ಧೋನಿ ನಂತರ ಅವರ ಸ್ಥಾನ ತುಂಬೋನು ನಾನೇ ಎಂದು ಸಾರಿ ಹೇಳಿದ್ದಾರೆ. ಹಾಗಂತ ಮುಂದೆ ಅವರಿಗೆ ತಂಡದಲ್ಲಿ ಸ್ಥಾನ ಸಿಗೋದು ಖಚಿತ ಎಂದು ಹೇಳಲು ಸಾಧ್ಯವಿಲ್ಲ. ಒಂದೆರಡು ಪಂದ್ಯಗಳಿಂದ ಇದನ್ನೆಲ್ಲ ನಿರ್ಧರಿಸಲು ಆಗಲ್ಲ. ಹೀಗಾಗಿ ಇನ್ನಷ್ಟು ಪಂದ್ಯಗಳಲ್ಲಿ ರಿಷಭ್‌ ಪಂತ್‌ ಮಿಂಚಿದ್ದೇ ಆದರೆ ಧೋನಿ ಸ್ಥಾನವನ್ನು ತುಂಬುವುದರಲ್ಲಿ ಅನುಮಾನವೇ ಇಲ್ಲ.  

 ಸಿಕ್ಸರ್‌ನಿಂದ ದಾಖಲೆ 
ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ ಪಂದ್ಯದಲ್ಲಿ ಪಂತ್‌ ತಾವೆದುರಿಸಿದ ಎರಡನೇ ಎಸೆತದಲ್ಲಿಯೇ ಸಿಕ್ಸ್‌ ಸಿಡಿಸೋ ಮೂಲಕ ಹೊಸ ಸಾಧನೆ ಮೆರೆದಿದ್ದಾರೆ. ಭಾರತ ತಂಡದ ಪರವಾಗಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಸಿಕ್ಸರ್‌ ಮೂಲಕ ರನ್‌ ಖಾತೆ ತೆರೆದ ಮೊದಲ ಬ್ಯಾಟ್ಸ್‌ ಮನ್‌ ಎಂಬ ಗೌರವಕ್ಕೆ ರಿಷಭ್‌ ಭಾಜನರಾಗಿದ್ದಾ ರೆ. ಅಲ್ಲದೇ ಈ ಸಾಧನೆ ಮಾಡಿದ ವಿಶ್ವದ 12ನೇ ಬ್ಯಾಟ್ಸ್‌ ಮನ್‌ ಎಂಬ ಕೀರ್ತಿಗೂ ಪಾತ್ರರಾಗಿದ್ದಾ ರೆ. 12 ಆಟಗಾರರ ಪೈಕಿ ನ್ಯೂಜಿಲೆಂಡಿನ ಮಾರ್ಕ್‌ ಕ್ರೆಗ್‌ ಮೊದಲ ಎಸೆತ, ಆಸ್ಟ್ರೇಲಿಯದ ಎರಿಕ್‌ ಫ್ರೀಮನ್‌ ಹಾಗೂ ಪಂತ್‌ 2ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿ¨ªಾರೆ. ಇನ್ನು ಈ ಪಂದ್ಯದ ಮೂಲಕ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಮೂಲಕ ರಿಷಭ್‌ ಭಾರತದ ಪರವಾಗಿ ಅಂತರಾಷ್ಟ್ರೀಯ ಟೆಸ್ಟ್‌  ಪಂದ್ಯವನ್ನಾಡಿದ 291ನೇ ಆಟಗಾರ ಎಂದೆನಿಸಿಕೊಂಡರು. ಚೊಚ್ಚಲ ಟೆಸ್ಟ್‌ ಶತಕವನ್ನು ಸಿಕ್ಸರ್‌ ಹೊಡೆಯುವ ಮೂಲಕ ಪೂರೈಸಿದ ಭಾರತದ ನಾಲ್ಕನೆಯ ಬ್ಯಾಟ್ಸ್‌ಮನ್‌ ಪಂತ್‌. ಈ ಮೊದಲು ಕಪಿಲ್‌ ದೇವ್‌, ಹರ್ಭಜನ್‌ ಸಿಂಗ್‌ ಹಾಗೂ ಇರ್ಫಾನ್‌ ಪಠಾಣ್‌ ಈ ದಾಖಲೆ ಮಾಡಿದ್ದಾರೆ. 

Advertisement

ಗಮನ ಸೆಳೆದ‌ ಬ್ಯಾಟಿಂಗ್‌: ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಮೂರು ಪಂದ್ಯ, ಆರು  ಇನಿಂಗ್ಸ್‌ನಿಂದ ರಿಷಭ್‌ ಪಂತ್‌ ಒಟ್ಟಾರೆ 162 ರನ್‌ಗಳಿಸಿದರು. ಕೊನೆಯ ಟೆಸ್ಟ್‌ನಲ್ಲಿ ಮಹತ್ವದ ಸನ್ನಿವೇಶದಲ್ಲಿ ಇಂಗ್ಲೆಂಡ್‌ ವೇಗಿಗಳ ಬೆಂಕಿ ದಾಳಿಗೆ ಎದೆಯೊಡ್ಡಿ ನಿಂತ ರಿಷಭ್‌ ಪಂತ್‌ 114 ರನ್‌ ಸಿಡಿಸಿ ಭಾರತದ ಮಾನ ಕಾಪಾಡಿದ್ದರು. ಈ ಮೂಲಕ  ಇಂಗ್ಲೆಂಡ್‌ ನೆಲದಲ್ಲಿ  ಶತಕ ಹೊಡೆದ ಮೊದಲ ಭಾರತೀಯ ವಿಕೆಟ್‌ ಕೀಪರ್‌ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ. ಈ ಬ್ಯಾಟಿಂಗ್‌ ಇವರಿಗೆ ನೂರಾರು ಅಭಿಮಾನಿಗಳನ್ನು ಸೃಷ್ಟಿಸಿದೆ. 

5 ಕ್ಯಾಚ್‌ ಮೊದಲ ವಿಕೆಟ್‌ ಕೀಪರ್‌: ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ರಿಷಭ್‌ ಐದು ಕ್ಯಾಚ್‌ಗಳನ್ನು ಹಿಡಿದ ಮೊತ್ತ ಮೊದಲ ಭಾರತೀಯ ವಿಕೆಟ್‌ ಕೀಪರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ‌ ಅಲಿಸ್ಟರ್‌ ಕುಕ್‌, ಜೆನಿಂಗ್ಸ್‌, ಒಲಿವರ್‌ ಪಾಪ್‌, ಕ್ರಿಸ್‌ ವೋಕ್ಸ್‌ ಹಾಗೂ ಆದಿಲ್‌ ರಶೀದ್‌ ಕ್ಯಾಚ್‌ಗಳನ್ನು ಪಂತ್‌ ಹಿಡಿದಿದ್ದರು. 

ಐಪಿಎಲ್‌ನಲ್ಲೂ ಮಿಂಚಿದ್ದಾರೆ!
 ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಆರಂಭಿಕರಾಗಿ ಆಡಿದ ಪಂದ್ಯಗಳಲ್ಲಿ ಅನೇಕ ಪಂದ್ಯವನ್ನು ಏಕಾಂಗಿಯಾಗಿ ಹೋರಾಡಿ ಪಂತ್‌ ಗೆಲ್ಲಿಸಿದ್ದಾ ರೆ ಹಾಗೂ ಕಳೆದ ಐಪಿಎಲ್‌ ಟೂರ್ನಿಯಲ್ಲಿ 14 ಪಂದ್ಯದಲ್ಲಿ 53ರ ಸರಾಸರಿಯಲ್ಲಿ ರಿಷಭ್‌ ಪಂತ್‌ 684 ರನ್‌ ಸಿಡಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್‌ ಸಿಡಿಸಿದ 2ನೇ ಬ್ಯಾಟ್ಸ್‌ಮನ್‌ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಧನಂಜಯ ಆರ್‌.ಮಧು

Advertisement

Udayavani is now on Telegram. Click here to join our channel and stay updated with the latest news.

Next