Advertisement
ವಿದ್ಯುತ್ಛಕ್ತಿ ಕಾಯ್ದೆಯ ತಳಹದಿಇಡೀ ರಾಷ್ಟ್ರದಲ್ಲಿ ವಿದ್ಯುತ್ ಉತ್ಪಾದನೆ, ಸರಬರಾಜು ಮೊದಲಾದ ಎಲ್ಲ ವಿದ್ಯುತ್ ವಿಚಾರಗಳು ನಿರ್ವಹಣೆಯಾಗುವುದು 2003ರ ವಿದ್ಯುತ್ಛಕ್ತಿ ಕಾಯ್ದೆಯ ಮೂಲಕ. ಈ ಹೊಸ ಕಾಯ್ದೆಯಿಂದಾಗಿ ಅಲ್ಲಿಯವರೆಗೆ ಜಾರಿಯಲ್ಲಿದ್ದ ಎಲ್ಲಾ ವಿದ್ಯುತ್ಛಕ್ತಿ ಕಾನೂನುಗಳು ಮರೆಗೆ ಸರಿದವು. ಕಾಯ್ದೆಯ ಜಾರಿಗೆ ಬೇಕಾದ ನಿಯಮಗಳನ್ನು ರೂಪಿಸುವ ಅವಕಾಶ ಮಾತ್ರ ರಾಜ್ಯ ಸರ್ಕಾರಗಳಿಗೆ ಇದೆ. ಅಂದರೆ ಕಾಯ್ದೆಗೆ ವಿರುದ್ಧವಾದ ನಿಯಮಗಳನ್ನು ತರಲಿಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶವಿಲ್ಲ. ಸರಿಯೇ, ಇಲ್ಲ ಎನ್ನಬಹುದಾದ ನಿಯಮವಿದ್ದರೂ ಅದರ ತಿದ್ದುಪಡಿಗೆ ಕೇಂದ್ರದ ಲೋಕಸಭೆ, ರಾಜ್ಯಸಭೆಗಳ ಒಪ್ಪಿಗೆ ಪಡೆಯಬೇಕಾಗುತ್ತದೆ.
Related Articles
ವಿದ್ಯುತ್ ಕಾಯ್ದೆಯ ಅನುಸಾರ ಸರ್ಕಾರದ ಆಧಿಪತ್ಯದಲ್ಲಿರುವ ಎಸ್ಕಾಂಗಳೇ ಗ್ರಾಹಕರಿಗೆ ವಿದ್ಯುತ್ ಪ್ರಸರಣ ಮಾಡಬೇಕು ಎಂಬುದು ಕಡ್ಡಾಯವಲ್ಲ. ಸದ್ಯಕ್ಕೆ ನಮ್ಮಲ್ಲಿ ಪರ್ಯಾಯಗಳಿಲ್ಲವಷ್ಟೇ. ಈ ಐದು ಸರ್ಕಾರಿ ಒಡೆತನದ ಕಂಪನಿಗಳಲ್ಲದೆ ಸಹಕಾರಿ ವಲಯದಲ್ಲಿ ವಿದ್ಯುತ್ಛಕ್ತಿ ಪೂರೈಕೆ ವಹಿವಾಟು ನಡೆಸುತ್ತಿರುವ ಹುಕ್ಕೇರಿ ಸಹಕಾರಿ ವಿದ್ಯುತ್ ಸರಬರಾಜು ಸಂಘ ಕೂಡ ಇದೆ. ಇದು ಮೆಸ್ಕಾಂನಿಂದಲೇ ವಿದ್ಯುತ್ ಪಡೆದು ಅಲ್ಲಿನ ಗ್ರಾಹಕರಿಗೆ ವಿದ್ಯುತ್ ವಿತರಿಸುತ್ತಿದ್ದು ತನ್ನದೇ ಪ್ರತ್ಯೇಕ ಅಸ್ತಿತ್ವವನ್ನು ಪ್ರದರ್ಶಿಸುವ ಮನಸ್ಸು ಮಾಡಿಲ್ಲ. ನೇರವಾಗಿ ಕೆಪಿಟಿಸಿಎಲ್‌ನಿಂದ ಇದು ವಿದ್ಯುತ್ ಪಡೆದು ತನ್ನದೇ ಸ್ವಂತಿಕೆ ತೋರಬೇಕಿತ್ತು. ಬಿಡಿ, ಆದರೆ ಇದು ಹೊಸ ಸಾಧ್ಯತೆಗಳನ್ನು ಹೇಳುತ್ತಿದೆ.
Advertisement
ವಿದ್ಯುತ್ಛಕ್ತಿ ಕಾಯ್ದೆಯು ರಾಜ್ಯಗಳ ಮಟ್ಟದಲ್ಲಿ ವಿದ್ಯುತ್ ಕಂಪನಿಗಳ ನಿಗಾ ನೋಡಿಕೊಳ್ಳಲಿರುವ “ವಿದ್ಯುತ್ಛಕ್ತಿ ನಿಯಂತ್ರಣಾ ಆಯೋಗ’ಗಳನ್ನು ಸ್ಥಾಪಿಸುವುದನ್ನು ಕಡ್ಡಾಯ ಮಾಡಿತು. ವಿದ್ಯುತ್ ದರಗಳ ನಿಷ್ಕರ್ಷೆ ಮಾಡುವ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳ ಇಂಧನ ಇಲಾಖೆಯಿಂದ ಬೇರ್ಪಡಿಸಿ ಈ “ಆಯೋಗ’ಗಳಿಗೆ ಕೊಟ್ಟಿತು.
ಇದಲ್ಲದೆ ವಿದ್ಯುತ್ಛಕ್ತಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ನಿಯಮಾವಳಿಗಳನ್ನು ರೂಪಿಸುವ ಮತ್ತು ಆಚರಣೆಗೆತರುವ ಅಧಿಕಾರವನ್ನು ಇವಕ್ಕೆ ಕೊಡಲಾಯಿತು. ಅಂತಹ ನಿಯಮಾವಳಿಗಳ ಅನುಷ್ಠಾನಕ್ಕೇ ಅಗತ್ಯವಿರುವ ಸಂಸ್ಥೆಗಳನ್ನು ರಚಿಸುವ ಜವಾಬ್ದಾರಿಯನ್ನೂ ಅವಕ್ಕೆ ನೀಡಲಾಯಿತು. ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‌ಸಿ)ವನ್ನು 1999ರಲ್ಲಿ ಸ್ಥಾಪಿಸಲಾಯಿತು.
ಬಹುಶಃ ಖಾಸಗಿ ವಿದ್ಯುತ್ ಪ್ರಸರಣ ಕಂಪನಿಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಲು ಕೆಇಆರ್‌ಸಿಯಂಥ ವ್ಯವಸ್ಥೆ ಪೂರಕವಾಗುತ್ತದೆ. ಎಸ್ಕಾಂನಂತಹ ಪ್ರಸರಣ ಉದ್ದೇಶದ ಕಂಪನಿಗಳನ್ನು ಹುಟ್ಟುಹಾಕುವ ಒಂದು ಪ್ರಯತ್ನವೂ ಈಗಾಗಲೇ ನಡೆದಿದೆ. ಈಗ ವಿದ್ಯುತ್‌ಅನ್ನು ನಮಗೆಲ್ಲ ಕೊಡುತ್ತಿರುವ ಎಸ್ಕಾಂಗಳು ಕೂಡ ಒಂದು ಕಂಪನಿ. ರಾಜ್ಯ ಸರ್ಕಾರ ಬಂಡವಾಳ ಹಾಕಿ ನಡೆಸುತ್ತಿರುವ ಖಾಸಗಿ ಕಂಪನಿ. ಇಂತಹ ಉದ್ದೇಶದ ಪ್ರತ್ಯೇಕ ಸರಬರಾಜು ಕಂಪನಿಯನ್ನು ಜನರು ಸಹಕಾರಿ ವ್ಯವಸ್ಥೆಯಲ್ಲಿ ಹುಟ್ಟುಹಾಕಿ ನಡೆಸಿದರೆ ನಿರಂತರ ವಿದ್ಯುತ್ ಪಡೆದುಕೊಳ್ಳಲೂ ಸಾಧ್ಯ, ಗುಣಮಟ್ಟ ಕೂಡ ಕಷ್ಟವಲ್ಲ. ಈ ನಿಲುವನ್ನು ಹೊಂದಿದ ಶರಾವತಿ ವಿದ್ಯುತ್ ಸೌಹಾರ್ದ ಸಹಕಾರಿ ನಿಯಮಿತ ಎಂಬ ಸೌಹಾರ್ದ ಸಂಸ್ಥೆ ಶಿವಮೊಗ್ಗ ಜಿಲ್ಲೆಯ ಸಾಗರವನ್ನು ಕೇಂದ್ರೀಕರಿಸಿಕೊಂಡು ಆರಂಭಗೊಂಡಿದೆ.
ಜನರಿಂದ ಷೇರು ಮೊತ್ತವನ್ನು ಪಡೆದು ಲಭ್ಯವಾಗುವ ಮೂಲಧನದ ಮೂಲಕ ಮೆಸ್ಕಾಂ ನಿರ್ವಹಣೆಯ ಸಾಗರ, ಹೊಸನಗರ, ಸೊರಬ ತಾಲೂಕು ಸೇರಿದ ಸಾಗರ ಉಪಭಾಗದ ವಿದ್ಯುತ್ ಸರಬರಾಜನ್ನು ನೋಡಿಕೊಳ್ಳುವ ಹೊಣೆ ಹೊರಲು ಈ ಸಂಸ್ಥೆ ಸಜಾjಗುತ್ತಿದೆ.
ಹೊಸ ಸಾಧ್ಯತೆಯ ಹೊಳಹು!ಮನೆಗೆ ಪವರ್‌ಕಟ್ ಇಲ್ಲದ ದಿನದ 24 ಘಂಟೆ ವಿದ್ಯುತ್ ಸೌಲಭ್ಯ ಬೇಕು. ಕೃಷಿಕ ಜೀವಗಳಿಗೆ ಮಧ್ಯರಾತ್ರಿಯ ಬದಲು ಬೆಳಗ್ಗೆ ಅಥವಾ ಸಂಜೆ ಆರು ಘಂಟೆ ಪಂಪ್‌ಸೆಟ್ ವಿದ್ಯುತ್ ಇದ್ದಿರಬೇಕು. ಬೃಹತ್ ಉದ್ಯಮಗಳಿಲ್ಲದ ಸಾಗರ ಉಪ ವಿಭಾಗೀಯ ಪ್ರದೇಶದಲ್ಲಿ ಮನೆ ಹಾಗೂ ಕೃಷಿಗೆ ನಿರಂತರ ವಿದ್ಯುತ್ ಕೊಡುವುದು ಕಷ್ಟವಲ್ಲ. ವಿದ್ಯುತ್ ಲಭ್ಯತೆ ದೇಶದಲ್ಲಿ ಸಾಕಷ್ಟಿದೆ. ವಾಸ್ತವವಾಗಿ ನಮ್ಮಲ್ಲಿನ ವಿದ್ಯುತ್ ಬೇಡಿಕೆ ನಿರಂತರವಾಗಿ ಪೂರೈಸುವ ಪ್ರಮಾಣದಲ್ಲಿಯೇ ಇದೆ. ಅದರ ನಿರ್ವಹಣೆಯಲ್ಲಿ ದಕ್ಷತೆ ತೋರಬೇಕಾಗಿದೆ. ಆ ಕಾರಣದಿಂದಾಗಿಯೇ ನಮ್ಮ ಸಂಸ್ಥೆ ಜನರ ಸಹಭಾಗಿತ್ವದಲ್ಲಿ ನಿರಂತರ ವಿದ್ಯುತ್‌ನ ಕನಸನ್ನು ಸಾಕಾರಗೊಳಿಸಲು ಹೊರಟಿದೆ ಎಂದು ಶರಾವತಿ ವಿದ್ಯುತ್ ಸೌಹಾರ್ದ ಸಹಕಾರಿ ಸಂಸ್ಥೆ ಹೇಳಿಕೊಂಡಿದೆ. ಸಂಸ್ಥೆಯು ಷೇರುದಾರರಾಗಲು ಈ ಭಾಗದ ಜನರಿಗೆ 10 ಸಾವಿರ ರೂ. ಷೇರು ಮೊತ್ತ ನಿಗದಿಪಡಿಸಿದೆ. ವಿದ್ಯುತ್ ಸರಬರಾಜಿನ ಜೊತೆಗೆ ಸೋಲಾರ್ ವಿದ್ಯುತ್ ಉತ್ಪಾದನೆ, ವಿದ್ಯುತ್ ಉಪಕರಣಗಳ ಮಾರಾಟ, ಸಂಬಂಧಿತ ಉದ್ಯಮಗಳ ಸ್ಥಾಪನೆ ಮೊದಲಾದ ಉದ್ದೇಶಗಳನ್ನು ಸಂಸ್ಥೆ ಹೊಂದಿದೆ. ವಿದ್ಯುತ್ ವಿತರಣೆಗೆ ಸರ್ಕಾರದ ಪರವಾನಗಿ ಪಡೆದಿರುವ ಈ ಸಂಸ್ಥೆ ಜನರ ಸಹಭಾಗಿತ್ವದ ಉದ್ದೇಶದಿಂದ ಬಂಡವಾಳ ಸಂಗ್ರಹದಲ್ಲಿದೆ. ಸಂಗ್ರಹವಾದ ಹಣವನ್ನು ಠೇವಣಿಯಾಗಿಡಲಾಗುತ್ತದೆ. ವಿದ್ಯುತ್ ಪ್ರಸರಣ ವ್ಯವಸ್ಥೆಯ ಅವಕಾಶ ಲಭ್ಯವಾಗದಿದ್ದರೆ ಅಷ್ಟೂ ಹಣವನ್ನು ಮತ್ತೆ ಷೇರುದಾರರಿಗೆ ವಾಪಾಸು ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಇಂತಹ ಸಂಸ್ಥೆಗಳು ಸೌಹಾರ್ದ ಕಾಯ್ದೆಯಲ್ಲಿಯೇ ನೋಂದಣಿ ಮಾಡಿಸಬೇಕೆಂದಿಲ್ಲ. ಕೋ ಅಪರೇಟಿವ್ ಕಾಯ್ದೆ, ಸೊಸೈಟಿ ಆ್ಯಕ್ಟ್‌ನಲ್ಲಿ ಕೂಡ ಇಂತಹ ಅಭಿಲಾಷೆಯ ಸಂಸ್ಥೆಗಳು ನೋಂದಣಿ ಆಗಬಹುದು. ಆ ಲೆಕ್ಕದಲ್ಲಿ ಸೌಹಾರ್ದ ಕಾಯ್ದೆ ಹೆಚ್ಚು ಕಿರಿಕಿರಿ ಇಲ್ಲದ, ಪರಮಾವಧಿ ಆಯ್ಕೆಗಳನ್ನು ಹೊಂದಬಹುದಾದ ಕಾರಣಕ್ಕೆ ಉತ್ತಮ ಎನ್ನಬಹುದು. ಖಾಸಗಿ ಸಂಸ್ಥೆಯೊಂದು ಅತ್ಯುತ್ತಮ ವಿದ್ಯುತ್ ಕೊಡುತ್ತೇನೆ ಎಂದು ಬೇಕಾಬಿಟ್ಟಿ ವಿದ್ಯುತ್ ಯೂನಿಟ್ ದರ ನಿಗದಿಪಡಿಸಲು ನಮ್ಮ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಕೆಇಆರ್‌ಸಿ ನಿಗದಿಪಡಿಸಿದ ದರದಲ್ಲಿಯೇ ಬಿಲ್ ಮಾಡಬೇಕು. ಬೇಕಿದ್ದರೆ ಕೆಇಆರ್‌ಸಿ ಹೇಳಿದ ಗರಿಷ್ಠ ದರಕ್ಕಿಂತ ಕಡಿಮೆಗೆ ಯೂನಿಟ್ ದರ ನಿಷ್ಕರ್ಷಿಸಬಹುದು. ಮೂಲಭೂತ ವ್ಯವಸ್ಥೆಗಳು ಈಗಾಗಲೇ ಇರುವುದರಿಂದ ಈಗಿರುವ ಸರಬರಾಜು ಜಾಲವನ್ನು ಉತ್ತಮಪಡಿಸುವ ಅವಕಾಶವಂತೂ ಇದ್ದೇ ಇದೆ. ಕರ್ನಾಟಕದ ವಾತಾವರಣದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಅವಕಾಶ ಕಲ್ಪಿಸಿ, ಅಗತ್ಯ ಬೀಳುವ ವಿದ್ಯುತ್ ಅನ್ನು ಕೆಪಿಸಿಟಿಎಲ್‌ನಿಂದ ಒಪ್ಪಂದ ಮಾಡಿಕೊಂಡು ಪಡೆಯಬಹುದು. ಒಂದು ಖಾಸಗಿ ಕಂಪನಿ ವಿದ್ಯುತ್ ಸರಬರಾಜಿನ ನಿರ್ವಹಣೆಗೆ ಮುಂದಾದಾಗ ಕೆಲವು ವಿರೋಧಗಳು ಬರಬಹುದು. ಈವರೆಗೆ ಆರಾಮದಾಯಕ ಕೆಲಸ ಹಾಗೂ ಲಂಚದ ಸುಖಾಸೀನ ಅನುಭಸಿರುವ ಅಧಿಕಾರಿ ವರ್ಗಕ್ಕೆ ಕಾರ್ಯಕ್ಷಮತೆ ಆಧರಿಸಿದ ಖಾಸಗಿ ವ್ಯವಸ್ಥೆ ಕಹಿಯೆನಿಸೀತು. ಸುರಕ್ಷಿತ ಭಾವದಲ್ಲಿರುವ ನೌಕರರು ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಲು ನೂರು ಬಾರಿ ಯೋಚಿಸುತ್ತಾರೆ. ಈಗಿನ ವ್ಯವಸ್ಥೆಯಲ್ಲಿ ಸರ್ಕಾರಿ ಒಡೆತನದ ಕಾರಣ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳು ಎಸ್ಕಾಂಗಳ ಮೇಲೆ ಅತೀವ ಪ್ರಭಾವ ಬೀರಬಹುದಾಗಿದೆ. ಇಂತಹ ಮಾದರಿಯಲ್ಲಿ ಸ್ವತಃ ಕಾಡಲು ಅವರಿಗೆ ಅಕ್ಕರೆ ಅಧಿಕ. ಅವರ ಆಕ್ಷೇಪಗಳನ್ನು ನಿವಾರಿಸಿಕೊಳ್ಳುವ ಅಡೆತಡೆಯೂ ಇರುತ್ತದೆ. ಸಾಂಕ್ರಾಮಿಕ ಆಂದೋಲನದತ್ತ….
ಜನಕ್ಕಂತೂ ಪರ್ಯಾಯ ಬೇಕು. ಅವರು ಈಗಿನ ಎಸ್ಕಾಂ ಮಾದರಿಗಳಿಂದ ರೋಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಒಂದು ಸಣ್ಣ ಭಾಗದಲ್ಲಿ ಮಾತ್ರ ಪ್ರಯೋಗ ನಡೆದರೆ ಸಾಕಾಗುವುದಿಲ್ಲ. ಅಲ್ಲದೆ, ಇಂತಹ ಪ್ರಯತ್ನ ಆಕ್ಷೇಪಗಳ ನಡುವೆ ಅರಳದೆ ಹೋಗಿಬಿಡುವ ಅಪಾಯವೂ ಇದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಒಮ್ಮೆಗೇ ಇಂತಹ ಪ್ರಯೋಗಕ್ಕೆ ಮುಂದಾಗುವ 10-15 ಸಂಸ್ಥೆಗಳು ಹುಟ್ಟಿಕೊಳ್ಳಬೇಕು. ಅವುಗಳೆಲ್ಲ ಒಂದು ಜನಾಂದೋಲನಕ್ಕೆ ಮುಂದಾಗಬೇಕು. ಇಂತಹ ಪ್ರಯತ್ನದಿಂದ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿಲುವುಗಳು ಬದಲಾಗುತ್ತವೆ. ಮನಸ್ಫೂರ್ತಿಯಿಂದಲ್ಲವಾದರೂ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವರಿಗೆ ಬೇರೆ ಆಯ್ಕೆ ಇರುವುದಿಲ್ಲ. ಒಂದರ್ಥದಲ್ಲಿ ಸರ್ಕಾರಿ ಮನೋಭಾವದ ಎಸ್ಕಾಂ ಮಾಡೆಲ್ ಮಾಯವಾಗಿ ಖಾಸಗಿ, ಗುಣಮಟ್ಟ, ಕಾರ್ಯವೈಖರಿ ಆಧಾರಿತ ಸರಬರಾಜು ವ್ಯವಸ್ಥೆ ಚಾಲನೆಗೆ ಬರುತ್ತದೆ. ಅಂತಹ ದಿನ ಬಂದೀತೇ? -ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ