Advertisement

ಛಿದ್ರಗೊಂಡ ಕಾಲಿನಲ್ಲಿ ನಿಲ್ಲಲಾಗದೆ 

11:08 AM Dec 03, 2017 | Team Udayavani |

ವಿದ್ಯಾಗಿರಿ : ‘ಪಾಕಿಸ್ತಾನ ಎಸೆದ ಹ್ಯಾಂಡ್‌ ಗ್ರೆನೇಡ್‌ ಸ್ಫೋಟಗೊಂಡು ಕಾಲು ಛಿದ್ರವಾಗಿತ್ತು. ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಜತೆಗಿದ್ದವರು ಕಾರ್ಗಿಲ್‌ನ ತುತ್ತ ತುದಿಯಲ್ಲಿ ಭಾರತದ ಧ್ವಜ ಹಾರಾಡುತ್ತಿ ರುವುದನ್ನು ತಿಳಿಸಿದರು. ನಿಲ್ಲಲು ಕಷ್ಟವಾದರೂ ಮಲಗಿದ್ದಲ್ಲೇ ಎದ್ದು ಕುಳಿತು ಧ್ವಜಕ್ಕೆ ಸೆಲ್ಯೂಟ್‌ ಹೊಡೆದೆ.’

Advertisement

– ಹೀಗೆ ಹೇಳುತ್ತಲೇ ಕ್ಯಾ| ನವೀನ್‌ ನಾಗಪ್ಪ ಭಾವುಕರಾದರು. ಕಾರ್ಗಿಲ್‌ ಯುದ್ಧದಲ್ಲಿ ಭಾರತೀಯ ಸೇನೆಯೊಂದಿಗಿದ್ದ ಧನ್ಯತಾ ಭಾವ ಅವರಲ್ಲಿತ್ತು. ಆಳ್ವಾಸ್‌ ನುಡಿಸಿರಿಯಲ್ಲಿ ‘ನನ್ನ ಕತೆ-ನಿಮ್ಮ ಜೊತೆ’ ಕಾರ್ಯಕ್ರಮದಲ್ಲಿ ಅವರು ಕಾರ್ಗಿಲ್‌ ಯುದ್ಧದ ದಿನಗಳನ್ನು ನೆನಪಿಸಿಕೊಂಡರು.

ದೇಶ ಸೇವೆಯ ಕನಸು
‘ದೇಶ ಸೇವೆಯ ಅದಮ್ಯ ಕನಸು ಹೊತ್ತು 1999 ಜನವರಿಯಲ್ಲಿ ಸೇನೆಗೆ ಸೇರಿದೆ. ಐದೇ ತಿಂಗಳಲ್ಲಿ ಕಾರ್ಗಿಲ್‌ ಯುದ್ಧ ಘೋಷಣೆಯಾಗಿತ್ತು. ನಮ್ಮ ಪ್ರದೇಶದ ಬೆಟ್ಟ ಗುಡ್ಡಗಳನ್ನು ಪಾಕಿಸ್ತಾನಿಗಳು ಆಕ್ರಮಿಸಿಕೊಂಡಿದ್ದರು. ಲೆ| ಸೌರಭ್‌ ಕಾಲಿಯಾ ನೇತೃತ್ವದ ತಂಡ ಮತ್ತು ಪಾಕ್‌ ನಡುವೆ ಯುದ್ಧ ನಡೆಯಿತು. ದುರದೃಷ್ಟವಶಾತ್‌ ಸೌರಭ್‌ ತಂಡದಲ್ಲಿದ್ದ ಆರೂ ಮಂದಿಯನ್ನು ಕಳೆದುಕೊಂಡೆವು. ನಮ್ಮ ಸೈನಿಕರಿಗೆ ಚಿತ್ರಹಿಂಸೆ ನೀಡಿ 21 ದಿನಗಳ ಬಳಿಕ ಅವರ ಶವಗಳನ್ನು ಭಾರತೀಯ ಸೇನೆಗೆ ಪಾಕ್‌ ಕಳುಹಿಸಿಕೊಟ್ಟಿತು ಎಂದರು.

ಗ್ರೆನೇಡ್‌ ಸ್ಫೋಟ
ಜೊತೆಗಿದ್ದ ಶ್ಯಾಂ ಸಿಂಗ್‌ನನ್ನು ಕಳೆದುಕೊಂಡೆವು. ನಾವಿದ್ದ ಪ್ರದೇಶದ ಮಧ್ಯೆ ಒಂದು ಬಂಡೆ, ಆಚೆ ಕಡೆ ಪಾಕಿಸ್ತಾನ. ಹೆತ್ತ ತಾಯಿಗೋಸ್ಕರ 120 ಜನರ ತಂಡ ಪಾಕ್‌ ಜತೆ ನಿರಂತರ ಕಾದಾಡಿತು. ಮೇ 7ರಂದು ಪಾಕ್‌ ಎಸೆದ ಹ್ಯಾಂಡ್‌ ಗ್ರೆನೇಡ್‌ ನನ್ನ ಕಾಲು ಬಳಿ ಬಿತ್ತು. ಸ್ಫೋಟವಾಗಿದ್ದರೆ ಸನಿಹದ 10 ಕಿಲೋ ಮೀಟರ್‌ ವ್ಯಾಪ್ತಿಯೂ ಛಿದ್ರವಾಗುತ್ತಿತ್ತು. ಅದು ಸ್ಫೋಟಿಸಲಿಲ್ಲ. ಎದ್ದು ನಿಂತರೆ ಪಾಕಿಸ್ತಾನಕ್ಕೆ ತಿಳಿಯುತ್ತದೆ.ಆ ಹ್ಯಾಂಡ್‌ ಗ್ರಾನೈಡ್‌ನ್ನು ವಾಪಸ್‌ ಎಸೆದೆ. ಬಂಡೆ ಕಲ್ಲಿಗೆ ಬಡಿದು ನನ್ನ ಕಾಲ ಬಳಿ ಬಂದು ಬಿತ್ತು. ಕಾಲು ಛಿದ್ರಗೊಂಡಿತ್ತು ಎಂದು ಅವರು ಭಾವುಕರಾಗಿ ನುಡಿದರು.

ಆಳ್ವಾಸ್‌ ನುಡಿಸಿರಿ ಸರ್ವಾಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌, ಸ್ವಾಗತ ಸಮಿತಿ ಉಪಾಧ್ಯಕ್ಷ ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next