ಬೆಂಗಳೂರು: ಎರಡನೇ ಹಂತದಲ್ಲಿ 50 ಇಂದಿರಾ ಕ್ಯಾಂಟೀನ್‌ಗಳು ಸೇವೆಗೆ ಸಿದ್ಧವಾಗಿವೆ. ಆದರೆ, ಆ ಪೈಕಿ ಸೋಮವಾರ “ಉದ್ಘಾಟನೆ ಭಾಗ್ಯ’ ದೊರಕಿದ್ದು ಕೇವಲ 12ಕ್ಕೆ! ಮೊದಲ ಹಂತದಲ್ಲಿ 101 ಇಂದಿರಾ ಕ್ಯಾಂಟೀನ್‌ಗಳು ಕಾರ್ಯಾರಂಭ ಮಾಡಿವೆ. 2ನೇ ಹಂತದಲ್ಲಿ ಗಾಂಧಿ ಜಯಂತಿಯಂದು 50 ಕ್ಯಾಂಟೀನ್‌ಗಳನ್ನು ಲೋಕಾರ್ಪಣೆ ಮಾಡಲು ಬಿಬಿಎಂಪಿ ಸಿದ್ಧವಾಗಿತ್ತು. ಆದರೆ ಗಣ್ಯರ ಡೇಟ್ ಸಿಗದ ಕಾರಣ ಕ್ಯಾಂಟೀನ್‌ಗಳ ಉದ್ಘಾಟನೆ ವಿಳಂಬವಾಗಿದೆ.
ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ ಶಾಸಕ ಆರ್.ವಿ. ದೇವರಾಜ್, ಆಯುಕ್ತ ಮಂಜುನಾಥ ಪ್ರಸಾದ್, ಹೊಸಕೆರೆಹಳ್ಳಿ ವಾರ್ಡ್‌ನಲ್ಲಿ ಸ್ಥಳೀಯ ಸದಸ್ಯೆ ಕೆ.ರಾಜೇಶ್ವರಿ ಚೋಳರಾಜ್, ಸಿ.ವಿ. ರಾಮನ್‌ನಗರ ವಾರ್ಡ್‌ನಲ್ಲಿ ಮೇಯರ್ ಸಂಪತ್‌ರಾಜ್ ಇಂದಿರಾ ಕ್ಯಾಂಟೀನ್‌ಗಳನ್ನು ಉದ್ಘಾಟಿಸಿದರು. ಜೆ.ಪಿ. ಪಾರ್ಕ್ ಬಳಿಯ ಕ್ಯಾಂಟೀನ್ ಭಾನುವಾರವೇ ಕಾರ್ಯಾರಂಭ ಮಾಡಿದೆ.
ಗಣ್ಯರು ತುಂಬಾ ಬ್ಯುಸಿ: 38 ಕ್ಯಾಂಟೀನ್‌ಗಳು ಉದ್ಘಾಟನೆಗಾಗಿ ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರು ಹಾಗೂ ಜನಪ್ರತಿನಿಧಿಗಳ ಎದುರುನೋಡುತ್ತಿವೆ. ಅ.10ರವರೆಗೂ ಜನಪ್ರತಿನಿಧಿಗಳು ದಿನಾಂಕ ನೀಡಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಹಿತಿ ನೀಡಿದರು.
600 ಊಟ; 1,000 ಜನ!: ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನ ಕ್ಯಾಂಟೀನ್‌ಗೆ ಮೊದಲ ದಿನವೇ ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದರು. ಆದರೆ ಪೈರೈಕೆಯಾಗಿದ್ದು 600 ಊಟ ಮಾತ್ರ. ಇಲ್ಲಿ ಬೇಡಿಕೆ ಹೆಚ್ಚಿರುವುದರಿಂದ ನಿತ್ಯ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 600 ತಿಂಡಿ ಮತ್ತು ಊಟ, ರಾತ್ರಿ 400 ಊಟ ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಘಾಟನೆಗೊಂಡ ಕ್ಯಾಂಟೀನ್‌ಗಳು: ಕಾವಲ್‌ಬೈರಸಂದ್ರ, ಸಿ.ವಿ. ರಾಮನ್‌ನಗರ, ವಿಜ್ಞಾನ ನಗರ, ಗರುಡಾಚಾರ್‌ಪಾಳ್ಯ, ಹೊಸಕೆರೆಹಳ್ಳಿ, ಮಾರೇನಹಳ್ಳಿ, ರಾಜಮಹಲ್ ಗುಟ್ಟಹಳ್ಳಿ, ನಾಗಪುರ, ಧರ್ಮರಾಯಸ್ವಾಮಿ ದೇವಸ್ಥಾನ, ಕತ್ರಿಗುಪ್ಪೆ, ಜೆ.ಪಿ. ಪಾರ್ಕ್.