Advertisement

ಕೆಆರ್‌ಎಸ್‌ನಲ್ಲಿ ಏನೋನೋ ಮಾಡಲು ಸಾಧ್ಯವಿಲ್ಲ

11:58 AM Nov 24, 2018 | |

ಮೈಸೂರು: ಕೆಆರ್‌ಎಸ್‌ ಜಲಾಯಶಯದಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ನಿರ್ಮಿಸುವ ಮುನ್ನ ತಾಂತ್ರಿಕ ತಜ್ಞರ ಸಮಿತಿ ರಚಿಸಿ, ಅವರು ನೀಡುವ ವರದಿ ಆಧರಿಸಿ ಮುಂದಿನ ತೀರ್ಮಾನಕೈಗೊಳ್ಳಲಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಸಲಹೆ ನೀಡಿದರು. 

Advertisement

ನಗರದ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಯದುವಂಶದ ಕೊಡುಗೆ ಹಾಗೂ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಛಲದಿಂದ ನಿರ್ಮಾಣವಾಗಿರು ಕೆಆರ್‌ಎಸ್‌ ಅಣೆಕಟ್ಟೆಯನ್ನು ಏನೇನೋ ಮಾಡಲು ಸಾಧ್ಯವಿಲ್ಲ ಎಂದರು. 

ಸಚಿವರು ತಾಂತ್ರಿಕ ತಜ್ಞರಲ್ಲ: ಡಿಸ್ನಿಲ್ಯಾಂಡ್‌ ನಿರ್ಮಿಸುವುದು ಬೇಡ ಎನ್ನುತ್ತಿಲ್ಲ. ಆದರೆ, ಈ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ದೂರದೃಷ್ಟಿಯ ಆಲೋಚನೆ ನಡೆಸಬೇಕಾದ ಅಗತ್ಯವಿದೆ. ಯೋಜನೆ ಮಾಡಲು ಮುಂದಾಗಿರುವ ಸಚಿವರು ತಾಂತ್ರಿಕ ತಜ್ಞರಲ್ಲ, ಅವರು ಕೇವಲ ಆಡಳಿತ ನಡೆಸುವವರಷ್ಟೇ. ಹೀಗಾಗಿ ರಾಜ್ಯದಲ್ಲಿರುವ ತಾಂತ್ರಿಕ ತಜ್ಞರು ಸಭೆ ನಡೆಸಿ, ಅವರ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಿದೆ. 

ಗಂಭೀರ ತೀರ್ಮಾನವಿರಲಿ: ಪ್ರವಾಸೋದ್ಯಮ ಎಂಬುದು ಮೈಸೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಪಡಿಸುವ ಅಗತ್ಯವಿದೆ. ಆದರೆ, ಡಿಸ್ನಿಲ್ಯಾಂಡ್‌ ನಿರ್ಮಿಸುವ ವಿಷಯದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್‌, ಸಾ.ರಾ.ಮಹೇಶ್‌ ಉತ್ಸುಕರಾಗಿದ್ದು, ಅವರ ಉತ್ಸಾಹಕ್ಕೆ ತಣ್ಣೀರು ಎರಚುತ್ತಿಲ್ಲ. ಬದಲಿಗೆ ತಜ್ಞರ ಅಭಿಪ್ರಾಯವಿಲ್ಲದೆ ಯೋಜನೆ ಆರಂಭಿಸುವುದು ಸರಿಯಲ್ಲ. ರಸ್ತೆ ಮಾಡುವಾಗ ತಾಂತ್ರಿಕ ವರದಿ ನೋಡಲಿದ್ದು, ಅಣೆಕಟ್ಟಿನ ವಿಚಾರದಲ್ಲಿ ಗಂಭೀರ ತೀರ್ಮಾನವಿರಲಿ ಎಂದು ಸಲಹೆ ನೀಡಿದರು.

ಡಿಸ್ನಿಲ್ಯಾಂಡ್‌ ವಿಷಯದಲ್ಲಿ ಪ್ರತಿಷ್ಠೆ ಬೇಡ: ಕೆಆರ್‌ಎಸ್‌ ಅಣೆಕಟ್ಟೆಯನ್ನು ನಂಬಿ ನಾಲ್ಕು ರಾಜ್ಯದ ಜನರಿದ್ದು, ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗುತ್ತಿದೆ. ಇಂತಹ ಅಣೆಕಟ್ಟಿನಲ್ಲಿ ಡಿಸ್ನಿಲ್ಯಾಂಡ್‌ ಮಾದರಿ ಯೋಜನೆ ನಿರ್ಮಿಸುವ ವಿಷಯವನ್ನು ಪ್ರತಿಷ್ಠೆ ತೋರುವುದು ಬೇಡ ಎಂದ ಅವರು, ರಾಜ್ಯದಲ್ಲಿ ಸಾಕಷ್ಟು ತಾಂತ್ರಿಕ ತಜ್ಞರಿದ್ದು, ಅವರುಗಳ ಸಮಿತಿ ರಚಿಸಿ, ಸಮಿತಿಯು  ನೀಡುವ ವರದಿಯ ಆಧಾರದಲ್ಲಿ ಮುಂದಿನ ಕೆಲಸ ನಡೆಯಲಿ ಎಂದು ಎಚ್‌. ವಿಶ್ವನಾಥ್‌ ಹೇಳಿದರು. 

Advertisement

ಮೈತ್ರಿ ಸಂಸಾರ ಚೆನ್ನಾಗಿ ನಡೆಯುತ್ತಿದೆ: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬಂದು ಆರು ತಿಂಗಳು ಪೂರೈಸಿದೆ. ಮೈತ್ರಿ ಸರ್ಕಾರ ಉತ್ತಮವಾಗಿ ಸಂಸಾರ ಮಾಡುತ್ತಿದ್ದು, ಯಾವುದೇ ಸಮಸ್ಯೆ ಇಲ್ಲ. ನಾವಿಬ್ಬರೂ ಮದುವೆಯಾಗಿದ್ದೇವೆ, ನಮ್ಮದೇನು ಬೇರೆ ಬೇರೆ ಕುಟುಂಬವಲ್ಲ. ನಮ್ಮದು ಒಂದೇ ಕುಟುಂಬಯಾಗಿದ್ದು, ಸಂಸಾರ ಚೆನ್ನಾಗಿ ನಡೆಯುತ್ತಿದೆ. ಹೀಗಾಗಿ ಬಾಳ್ವೆ ಚೆನ್ನಾಗಿ ನಡೆಯುತ್ತಿದೆ ಎಂದು ಜೆಡಿಎಸ್‌ ರಾಜ್ಯಧ್ಯಕ್ಷ ಎಚ್‌.ವಿಶ್ವನಾಥ್‌ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next