Advertisement

ನಿಕೋಟಿನ್‌ ಸೋಂಕನ್ನು ತಡೆಯುತ್ತಾ? ಹೀಗೊಂದು ಫ್ರಾನ್ಸ್‌ ತಜ್ಞರ ಸಂಶೋಧನೆ

11:29 AM Apr 25, 2020 | sudhir |

ಮಣಿಪಾಲ: ಸಿಗರೇಟ್‌ನಲ್ಲಿರುವ ನಿಕೋಟಿನ್‌ ಅಂಶವು ಜನರಲ್ಲಿ ಕೋವಿಡ್ ಸೋಂಕು ಪ್ರತಿರೋಧಕವಾಗಿ ಕೆಲಸ ಮಾಡುತ್ತದೆ ಎಂದು ಫ್ರಾನ್ಸ್‌ನಲ್ಲಿ ನಡೆದ ಸಂಶೋಧನೆ ತಿಳಿಸಿದೆ.

Advertisement

ಈ ಕುರಿತು ಮತ್ತಷ್ಟು ಸಂಶೋಧನೆಗೆ ಪರೀಕ್ಷೆ ನಡೆಸಲು ತಜ್ಞರು ಮುಂದಾಗಿದ್ದಾರೆ. ಪ್ಯಾರಿಸ್‌ನ ಆಸ್ಪತ್ರೆಯೊಂದರಲ್ಲಿ 343 ಕೋವಿಡ್ ಸೋಂಕಿತರು ಮತ್ತು ಇದರ ಆರಂಭಿಕ ಲಕ್ಷಣಗಳುಳ್ಳ ಸುಮಾರು 139 ಮಂದಿಯನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಅಂಶವು ತಿಳಿದು ಬಂದಿದೆ. ಪ್ಯಾರಿಸ್‌ನ ಜನಸಂಖ್ಯೆಯಲ್ಲಿ ಶೇ.35ರಷ್ಟು ಮಂದಿ ಧೂಮಪಾನಿಗಳಿದ್ದು, ಅದಕ್ಕೆ ಹೋಲಿಸಿದರೆ ಸಂಶೋಧನೆಗೆ ಒಳಗಾಗಿರುವ ರೋಗಿಗಳಲ್ಲಿರುವ ಧೂಮಪಾನಿಗಳ ಸಂಖ್ಯೆ ತುಂಬಾ ಕಡಿಮೆ.

“ಸಂಶೋಧನೆಗೆ ಒಳಗಾಗಿರುವ ಕೋವಿಡ್ ಸೋಂಕಿತರಲ್ಲಿ ಕೇವಲ ಶೇ. 5ರಷ್ಟು ಮಂದಿ ಮಾತ್ರ ಧೂಮಪಾನಿಗಳಿದ್ದಾರೆ’ ಎಂದು ಈ ಅಧ್ಯಯನದಲ್ಲಿ ಭಾಗಿಯಾಗಿರುವ ಇಂಟರ್ನಲ್‌ ಮೆಡಿಸಿನ್‌ನ ಪ್ರೊಫೆಸರ್‌ ಝಹೀರ್‌ ಅಮೋರಾ ಅವರು ತಿಳಿಸಿದ್ದಾರೆ.

ಚೀನದ ಜನಸಂಖ್ಯೆಯ ಶೇ. 26ರಷ್ಟು ಮಂದಿ ಧೂಮಪಾನಿಗಳಾಗಿದ್ದು, ಅಲ್ಲಿನ 1,000 ಕೋವಿಡ್ ಸೋಂಕಿತರಲ್ಲಿರುವ ಧೂಮಪಾನಿಗಳ ಸಂಖ್ಯೆ ಶೇ. 12.6 ಮಾತ್ರ ಆಗಿದೆ ಎಂದು ಕಳೆದ ತಿಂಗಳು ನ್ಯೂ ಇಂಗ್ಲಂಡ್‌ ಜರ್ನಲ್‌ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನದಲ್ಲಿ ಉಲ್ಲೇಖೀಸಲಾಗಿತ್ತು.

ಕೋವಿಡ್ ವೈರಸ್‌ ಜೀವಕೋಶಕ್ಕೆ ಪ್ರವೇಶಿಸದಂತೆ ಹಾಗೂ ದೇಹಕ್ಕೆ ಹರಡದಂತೆ ನಿಕೋಟಿನ್‌ ತಡೆಯುತ್ತದೆ ಎನ್ನುತ್ತಾರೆ ಸಂಶೋಧನೆಯಲ್ಲಿ ಭಾಗಿಯಾದ ಫ್ರಾನ್ಸ್‌ನ ಪಾಸ್ಟರ್‌ನ ಇನ್‌ಸ್ಟಿಟ್ಯೂಷನ್‌ನ ಜೀನ್‌ ಪೀರ್ರೆ ಚಾಂಗ್ಯೂ.

Advertisement

ಈ ಸಂಶೋಧನೆಗೆ ಆರೋಗ್ಯ ಇಲಾಖೆಯ ಅಂಗೀಕಾರಕ್ಕಾಗಿ ಕಾಯಲಾಗುತ್ತಿದ್ದು, ಬಳಿಕ ಹೆಚ್ಚಿನ ಕ್ಲಿನಿಕಲ್‌ ಪರೀಕ್ಷೆ ಕೈಗೊಳ್ಳಲು ಸಂಶೋಧಕರು ನಿರ್ಧರಿಸಿದ್ದಾರೆ. ಧೂಮಪಾನ ಮಾಡದವರೂ ಈಗ ಕೋವಿಡ್ ತಡೆಯಲೆಂದು ಧೂಮಪಾನಿಗಳಾಗಬೇಡಿ. ನಿಕೋಟಿನ್‌ನಿಂದ ಅಡ್ಡಪರಿಣಾಮಗಳನ್ನು ಅವಗಣಿಸುವಂತಿಲ್ಲ ಎಂದು ಎಚ್ಚರಿಸಿದ್ದಾರೆ ತಜ್ಞರು.

ಫ್ರಾನ್ಸ್‌ನಲ್ಲಿ ವಾರ್ಷಿಕ ಸುಮಾರು 75 ಸಾವಿರ ಮಂದಿ ತಂಬಾಕು ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪುತ್ತಿರುವುದನ್ನು ಮರೆಯುವಂತಿಲ್ಲ. ಫ್ರಾನ್ಸ್‌ನಲ್ಲೂ 1.55 ಲಕ್ಷ ಮಂದಿ ಸೋಂಕಿತರಿದ್ದು, 21,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next