Advertisement

ಧನಾತ್ಮಕವಾದ ಯೋಚನೆಯನ್ನು ನಾನೂ ಮಾಡಬಹುದೇ?

01:43 AM Oct 14, 2021 | Team Udayavani |

ಧನಾತ್ಮಕವಾದ ಚಿಂತನೆಯು ವ್ಯಕ್ತಿಯೊಬ್ಬನಿಗೆ ತನ್ನ ಹುಟ್ಟಿನಿಂದಲೇ ಬರುವುದಂತೂ ಖಂಡಿತಾ ಅಲ್ಲ. ಅದೇ ರೀತಿ ಧನಾತ್ಮಕ ಚಿಂತನೆಯ ವ್ಯಕ್ತಿ ಗಳು ಹುಟ್ಟಿನಿಂದಲೇ ಧನಾತ್ಮಕ ಚಿಂತಕ ರಾಗಿ ಹುಟ್ಟಿರುವುದಿಲ್ಲ. ಅದು ಅವರ ಹೆತ್ತವರು, ಗುರುಗಳು ಅಥವಾ ಜೀವನವು ಕಲಿಸಿಕೊಟ್ಟ ಒಂದು ಪಾಠವಾಗಿರುತ್ತದೆ. ಧನಾತ್ಮಕ ಚಿಂತನೆಯು ಸಾಮಾನ್ಯವಾಗಿ ಎಲ್ಲರ ತರ್ಕ ಅಥವಾ ಮನೋಭಾವ ಎಂದರೆ ತಪ್ಪಾಗಲಾರದು. ಹಾಗೆಯೇ ವ್ಯಕ್ತಿಯೊಬ್ಬ ಯಾವುದೇ ಒಂದು ಸನ್ನಿವೇಶವನ್ನು ನೋಡುವ ಮತ್ತು ಅದನ್ನು ಸ್ವೀಕರಿಸುವ ರೀತಿಯೇ ಆಗಿದೆ. ಧನಾತ್ಮಕ ಚಿಂತನೆ ಯಾರಲ್ಲಿ ಇದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದೆಯೋ ಅವರನ್ನು ಆಧರಿಸಿರುತ್ತದೆ.

Advertisement

ನಾನು ಮಾಡುವ ಯಾವ ಕೆಲಸವೂ ಯಶಸ್ವಿ ಆಗುವುದಿಲ್ಲ, ನನ್ನಿಂದ ನನ್ನ ಮುಂದೆ ಇರುವ ಗುರಿಯನ್ನು ತಲುಪಲು ಸಾಧ್ಯ ವಾಗುವುದಿಲ್ಲ. ನಾನು ಯಾವುದಕ್ಕೂ ಲಾಯಕ್ಕಲ್ಲ ಎನ್ನುವಂತಹ ಋಣಾತ್ಮಕವಾಗಿ (ನೆಗೆಟಿವ್‌) ಯೋಚನೆ ಮಾಡುವ ಬದಲಿಗೆ ಈ ಎಲ್ಲ ಸನ್ನಿವೇಶಗಳನ್ನು ತದ್ವಿರುದ್ಧವಾಗಿ ಯೋಚಿಸುವುದೇ ಧನಾತ್ಮಕ ಚಿಂತನೆ. ಮನಸ್ಸಿನಲ್ಲಿ ಬರುವ ಋಣಾತ್ಮಕ ಚಿಂತನೆಯನ್ನು ತೊಡೆದು ಹಾಕಿ ಧನಾತ್ಮಕ ಚಿಂತನೆಯನ್ನು ನಮ್ಮಲ್ಲಿ ಹುಟ್ಟುಹಾಕಲು ಕೆಲ ವೊಂದು ಸಲಹೆಗಳು ಇಲ್ಲಿವೆ.

-ವರ್ತನೆಗಳನ್ನು ನಿಗ್ರಹಿಸಿ ಅಥವಾ ನಿಯಂತ್ರಿಸಿಕೊಳ್ಳ ಬೇಕು: ಕೆಲವೊಂದು ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಋಣಾತ್ಮಕವಾದ ಚಿಂತನೆಯನ್ನು ಮಾಡದೇ, ನನ್ನ ಈ ನಿರ್ಧಾರದಿಂದ ಒಳ್ಳೆಯದೇ ಆಗುತ್ತದೆ ಎನ್ನುವ ನಂಬಿಕೆಯು ವ್ಯಕ್ತಿಯ ಜೀವನದ ದೃಷ್ಟಿಕೋನವನ್ನು ರೂಪಿಸುತ್ತದೆ. ಒಂದಷ್ಟು ಮಂದಿಯು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಪ್ಪುಗಳನ್ನು ಮಾಡುತ್ತಾರೆ. ಅಥವಾ ತಮ್ಮ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವಾಗ ಅವುಗಳನ್ನು ಸಮರ್ಪಕವಾಗಿ ನಿರ್ದೇಶಿಸುವಲ್ಲಿ ತಾವೇ ಎಡವುತ್ತಾರೆ. ಹಾಗಾಗಿ ವ್ಯಕ್ತಿಯು ಇಂತಹ ತಪ್ಪುಗಳು ತಾನು ತೆಗೆದು ಕೊಳ್ಳುವ ನಿರ್ಧಾರಗಳಲ್ಲಿ ಆಗದಂತೆ ಕಾಳಜಿ ವಹಿಸಬೇಕು.

ಧ್ಯಾನವು ಚಿಂತನಾ ಲಹರಿಯನ್ನು ಬದಲಾಯಿಸುತ್ತದೆ: ವೇದಗಳ ಕಾಲದಲ್ಲಿ ಋಷಿ ಮುನಿಗಳು ನಿರ್ದಿಷ್ಟ ವಿಚಾರದಲ್ಲಿನ ಯಶಸ್ಸಿಗಾಗಿ ವರ್ಷಾನುಗಟ್ಟಲೆ ಧ್ಯಾನದಲ್ಲಿ ತೊಡಗಿರುತ್ತಿದ್ದರು. ಆಧುನಿಕ ಹಿಂದಿನ ಯುಗದಲ್ಲೂ ವೇದಗಳ ಕಾಲದ ಪದ್ಧತಿಯನ್ನೇ ಅನುಸರಿಸುವ ಅಗತ್ಯವಿದ್ದು, ಧ್ಯಾನದ ಮೊರೆ ಹೋಗುವುದು ಆವಶ್ಯಕವಾಗಿದೆ. ಅಧ್ಯಯನಗಳ ಪ್ರಕಾರ ಧ್ಯಾನವನ್ನು ಮಾಡಿದಾಗ ಮನುಷ್ಯನ ಮನಸ್ಸಿನ ಚಿಂತನೆಯು ನಿರ್ದಿಷ್ಟವಾದ ವಿಚಾರದಲ್ಲೆ ಕೇಂದ್ರೀಕೃತವಾಗಿ ಇರುತ್ತದೆ. ಇದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸಿನೊಳಗೆ ನಿರ್ದಿಷ್ಟವಾದ ಶಕ್ತಿಯ ಪಸರಿಸುವಿಕೆ ಆರಂಭ ವಾಗುತ್ತದೆ. ಈ ವಿಶೇಷ ಶಕ್ತಿಯು ವ್ಯಕ್ತಿಯ ಜೀವನದಲ್ಲಿ ಬರುವ ಸಮಸ್ಯೆಗಳ ಪರಿಣಾಮಗಳನ್ನು ತಡೆದುಕೊಳ್ಳುವ ಮತ್ತು ಸಮಸ್ಯೆ ಗಳನ್ನು ಗೆಲ್ಲುವಲ್ಲಿ ಸಹಾಯ ಮಾಡುತ್ತದೆ. ದಿನದಲ್ಲಿ ಸುಮಾರು 10-15 ನಿಮಿಷಗಳ ಕಾಲ ಏಕಾಂತವಿರುವ ಮತ್ತು ಶಾಂತವಾದ ಕೊಠಡಿಯಲ್ಲಿ ಕಣ್ಣು ಮುಚ್ಚಿ ಕುಳಿತು ಉಸಿರನ್ನು ಶ್ವಾಸಕೋಶದಒಳಗೆ ನಿಧಾನವಾಗಿ ಎಳೆದುಕೊಂಡು ಸಾಧ್ಯವಾದಷ್ಟು ಹೊತ್ತು ಉಸಿರನ್ನು ಶ್ವಾಸಕೋಶದ ಒಳಗೆ ಹಿಡಿದಿಟ್ಟುಕೊಂಡು ನಿಧಾನ ವಾಗಿ ಶ್ವಾಸವನ್ನು ಹೊರಬಿಡುವ ಕ್ರಿಯೆಯನ್ನು ಮಾಡಬೇಕು. ಪ್ರಾರಂಭದಲ್ಲಿ ತುಸು ಕಷ್ಟ ಎಂದು ಎನಿಸಿದರೂ ಅನಂತರ ಅಭ್ಯಾಸವಾಗಿ ಬಿಡುತ್ತದೆ.

ಧನಾತ್ಮಕ ಚಿಂತನೆಗಳು ತುಂಬಿ
ರುವ ವ್ಯಕ್ತಿಗಳ ಭೇಟಿ: ಈ ಭೂಮಿಯಲ್ಲಿ ಇರುವ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಕಲಿಯಬ
ಹುದಾದ ಮತ್ತು ಅಳವಡಿಸಿಕೊಳ್ಳಬಹು ದಾದ ವಿಷಯಗಳು ಇರುತ್ತವೆ. ಹೀಗಿ ರುವಾಗ ಧನಾತ್ಮಕವಾದ ಚಿಂತನೆಗಳು ಮತ್ತು ಧನಾತ್ಮಕವಾಗಿ ಬದುಕುತ್ತಿರುವ ವ್ಯಕ್ತಿಗಳನ್ನು ಆಗಾಗ ಭೇಟಿ ಮಾಡಿ, ನಮ್ಮ ಬದುಕಿನ ಗುರಿಗಳನ್ನು ಸಾಧಿಸಲು ಯಾವ ರೀತಿಯಾಗಿ ಧನಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಅವರಲ್ಲಿ ಚರ್ಚೆಯನ್ನು ಮಾಡಬೇಕು. ಎಲ್ಲವನ್ನೂ ಋಣಾತ್ಮಕವಾಗಿ ನೋಡುವವರು, ಯೋಚಿಸುವವರು ನಮ್ಮಲ್ಲಿರುವ ಸಕಾರಾತ್ಮಕ ಮನೋಭಾವವನ್ನೂ ಕಿಂಚಿತ್ತೂ ಹಾಳು ಮಾಡಬಹುದು. ಆದ್ದರಿಂದ ವ್ಯಕ್ತಿಗಳ ಆಯ್ಕೆ ಯಲ್ಲಿ ಎಚ್ಚರ ವಹಿಸಬೇಕು.

ಇದನ್ನೂ ಓದಿ:ರಾಜನಾಥ ಸಿಂಗ್ ಗೆ ಸುಳ್ಳು ಹೇಳಲು ಹೇಳಿಕೊಟ್ಟಿದ್ಯಾರು: ಓವೈಸಿ

Advertisement

ಜೀವನದ ಗುರಿಗೆ ಸದಾ ಬದ್ಧರಾಗಿ ಇರಬೇಕು: ವ್ಯಕ್ತಿಯೊಬ್ಬನ ಜೀವನದ ಗುರಿಯು ಸ್ಪಷ್ಟವಾಗಿ ಇರಬೇಕಲ್ಲದೇ ಆ ಗುರಿಯನ್ನು ತಲುಪುವುದು ಕಷ್ಟ ಎಂಬ ವಿಚಾರವನ್ನು ಮನಸ್ಸಿನ ಮೂಲೆಯಲ್ಲೂ ತಂದುಕೊಳ್ಳಬಾರದು. ಗುರಿಯನ್ನು ತಲುಪುವುದಕ್ಕಾಗಿ ಸತತವಾದ ಪ್ರಯತ್ನವನ್ನು ಮಾಡುತ್ತಾ ಇರಬೇಕು. ಇದರಿಂದ ಬದುಕಿನ ದೃಷ್ಟಿ ಕೋನವೂ ಧನಾತ್ಮಕವಾಗಿ ಬದಲಾಗುತ್ತದೆ. ಒಂದು ಪ್ರಯತ್ನದಲ್ಲಿ ವಿಫ‌ಲರಾದರೆ ಮತ್ತೂಂದು ಬಾರಿ, ಮಗದೊಂದು ಬಾರಿ ಹೀಗೆ ನಿರಂತರವಾದ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ಇದರಿಂದ ಸೋಲುವ ಭಯವು ದೂರವಾಗಿ ಗೆಲ್ಲುವ ಛಲವು ಮೂಡಿ ಗುರಿ ಯನ್ನು ಸುಲಭವಾಗಿ ಸಾಧಿಸಬಹುದು.

ಬದುಕಿನ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು: ಹಲವು ರೀತಿಯ ಸಂದರ್ಭ ಮತ್ತು ಸನ್ನಿವೇಶಗಳಿಗೆ ನಾವು ಪ್ರತಿಕ್ರಿಯಿ ಸುವ ರೀತಿಯು ನಮ್ಮ ಚಿಂತನೆಯನ್ನು ಅವಲಂಬಿಸಿ ಇರುತ್ತದೆ. ಎಲ್ಲ ವಿಷಯಗಳಿಗೂ ಧನಾತ್ಮಕವಾಗಿಯೇ ಪ್ರತಿಕ್ರಿಯಿಸುವು ದರಿಂದ ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವುದಲ್ಲದೇ ಕೈಗೆತ್ತಿಕೊಳ್ಳುವ ಯಾವುದೇ ಕೆಲಸವಿರಲಿ ಅದು ಸಲೀಸಾಗಿ ಆಗುವಂತೆ ಮಾಡುತ್ತದೆ. ಋಣಾತ್ಮಕವಾದ ಯೋಚನೆಗಳು ಭವಿಷ್ಯದ ಎಲ್ಲ ಕೆಲಸಗಳನ್ನು ಕಠಿನವಾಗುವಂತೆ ಮಾಡುತ್ತದೆ. ಆದ್ದರಿಂದ ಬದುಕಿನ ದೃಷ್ಟಿಕೋನವನ್ನು ಬದಲಾಯಿಸಿ ಕೊಂಡು ಪ್ರತಿಯೊಂದನ್ನೂ ವಿನೂತನವಾಗಿ ನೋಡಿದಾಗ ನಮ್ಮ ಯೋಚನೆಗಳನ್ನು ಧನಾತ್ಮಕ ಮಾಡಿಕೊಳ್ಳಬಹುದು.

ಆಗಿಂದಾಗ್ಗೆ ವರ್ತನೆಯನ್ನು ವಿಮರ್ಶಿಸಿಕೊಳ್ಳಬೇಕು: ಮನುಷ್ಯನ ಪ್ರಮುಖ ಗುಣಗಳ ಪೈಕಿ ಹೊಸ ಬದಲಾವಣೆಯನ್ನು ವಿರೋಧಿಸುವುದೂ ಒಂದು. ಅದೇ ರೀತಿ ವ್ಯಕ್ತಿಯೊಬ್ಬನು ತನ್ನ ಪ್ರತಿ ಯೊಂದು ವರ್ತನೆಯನ್ನೂ ಪ್ರಶ್ನಿಸುತ್ತಾ ವಿಮರ್ಶೆ ಮಾಡಿದರೆ ನಮ್ಮಲ್ಲಿ ಧನಾತ್ಮಕವಾದ ಚಿಂತನೆಗಳು ಮೂಡುತ್ತವೆ. ಇದರಿಂದ ವ್ಯಕ್ತಿಯ ಹಲವು ಆಂತರಿಕ ಸಮಸ್ಯೆ ಮತ್ತು ದುಗುಡಗಳು ನಿವಾರಣೆಯಾಗಿ ನಮ್ಮನ್ನು ಮತ್ತಷ್ಟು ಉತ್ಸಾಹದಿಂದ ಇರುವಂತೆ ಮಾಡಿ ಸದಾ ನಮ್ಮನ್ನು ಧನಾತ್ಮಕವಾಗಿ ಚಿಂತಿಸುವಂತೆ ಪ್ರೇರೇಪಿಸುತ್ತದೆ.

ಧನಾತ್ಮಕವಾದ ಯೋಚನೆಯು ಧನಾತ್ಮಕ ವಾತಾವರಣವನ್ನು, ಋಣಾತ್ಮಕವಾದ ಯೋಚನೆಯು ಋಣಾತ್ಮಕ ವಾತಾವರಣವನ್ನು ನಮ್ಮ ಸುತ್ತಲೂ ನಿರ್ಮಿಸುತ್ತದೆ ಎನ್ನುವುದನ್ನು ಮರೆಯಬಾರದು. ಪ್ರತಿಯೊಂದು ಸಂದರ್ಭಗಳಲ್ಲೂ ಧನಾತ್ಮಕವಾಗಿ ಯೋಚನೆ ಮಾಡು ವುದರಿಂದ ಬದುಕಿನ ಎಲ್ಲ ಕಠಿನ ಕೆಲಸಗಳನ್ನು ಪೂರೈಸಿಕೊಂಡು, ಸವಾಲುಗಳನ್ನು ಸುಲಭವಾಗಿ ಮೆಟ್ಟಿನಿಂತು ಕೊನೆಗೆ ಮೌಲ್ಯಯುತ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ.

-ಸಂತೋಷ್‌ ರಾವ್‌ ಪೆರ್ಮುಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next