Advertisement

ಸಿಗಬಹುದೇ ಎಪಿಎಂಸಿ ಸೇತುವೆ ಸಮಸ್ಯೆಗೆ ಮುಕ್ತಿ ?

11:54 AM Sep 23, 2018 | |

ನಗರ: ನಗರಸಭೆ ಹಾಗೂ ಎಪಿಎಂಸಿ ನಡುವಿನ ಹೊಯ್ದಾಟಕ್ಕೆ ಕಾರಣವಾಗಿದ್ದ ಎಪಿಎಂಸಿ ರಸ್ತೆ ಸೇತುವೆಯ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸಿವೆ. ಸೇತುವೆಗೆ ತಡೆಗೋಡೆ ನಿರ್ಮಿಸಲು 3.90 ಲಕ್ಷ ರೂ. ಅನುದಾನ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೆ ಸಲ್ಲಿಸಿರುವ ಅಂದಾಜು ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಈ ಅಂದಾಜು ಪಟ್ಟಿ ಅನುಮೋದನೆಗೊಂಡ ಬಂದರೆ, ಕಾಮಗಾರಿಯ ಪ್ರಕ್ರಿಯೆಗಳು ಆರಂಭ ಆಗಬಹುದು. ಕೆಲಸ ಪೂರ್ಣಗೊಂಡರೆ ಹಲವು ದಿನಗಳಿಂದ ಜೀವಂತ ಆಗಿರುವ ಸಮಸ್ಯೆಯೊಂದಕ್ಕೆ ಮುಕ್ತಿ ನೀಡಿದಂತಾಗುತ್ತದೆ.

Advertisement

ಪುತ್ತೂರು ಮುಖ್ಯರಸ್ತೆಯಿಂದ ಎಪಿಎಂಸಿ ಸಂಪರ್ಕಿಸುವ ನಡುವೆ ರೈಲ್ವೇ ಹಳಿಯ ಕೆಳಭಾಗದಲ್ಲಿ ರಸ್ತೆ ಬದಿಯ ಸೇತುವೆ ತಡೆಗೋಡೆ ಕುಸಿದಿತ್ತು. ತಿರುವು ಇರುವುದರಿಂದ ಮೇಲ್ಭಾಗದಿಂದ ಬರುವ ಪ್ರಯಾಣಿಕರಿಗೆ ಸಮಸ್ಯೆಯ ಬಗ್ಗೆ ಅರಿವೇ ಇರುವುದಿಲ್ಲ. ಅಪಾಯ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ ಎಂದು ನಗರಸಭೆ, ಎಪಿಎಂಸಿ, ಸಹಾಯಕ ಆಯುಕ್ತ, ಜಿಲ್ಲಾಧಿಕಾರಿ ಗಮನ ಸೆಳೆಯಲಾಗಿತ್ತು. ಕಾಮಗಾರಿ ಆರಂಭಕ್ಕೆ ಅಧಿಕಾರಿಗಳ ನಡುವಿನ ಗೊಂದಲ ತಡೆಯಾಗಿತ್ತು.

ಎಪಿಎಂಸಿ ರಸ್ತೆಯ ಸೇತುವೆ ಇದಾಗಿರುವ ಕಾರಣ ಎಪಿಎಂಸಿಯೇ ಇದರ ಹೊಣೆ ಹೊರಬೇಕು ಎಂದು ನಗರಸಭೆ ವಾದಿಸಿತ್ತು. ಎಪಿಎಂಸಿಯೂ ಮುತುವರ್ಜಿ ವಹಿಸಿಕೊಳ್ಳುವ ಉಮೇದು ಮಾಡಲಿಲ್ಲ. ಈಗ ಮಳೆ ದೂರವಾಗಿದೆ. ಬಿರು ಬಿಸಿಲು ಮೈ ಸುಡುತ್ತಿದೆ. ಮಳೆ ಕಣ್ಮರೆ ಆಗುತ್ತಿದ್ದಂತೆ ಅಧಿಕಾರಿಗಳು ಸೇತುವೆ ವಿಷಯವನ್ನು ಮರೆತೇ ಬಿಟ್ಟರೇ ಎಂಬ ಗುಮಾನಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿ, ಶಾಸಕರ ಗಮನ ಸೆಳೆಯಲಾಗಿತ್ತು. ಇನ್ನೊಂದೆಡೆ ಪೊಲೀಸ್‌ ಇಲಾಖೆಯೂ ಸೇತುವೆ ಸಮಸ್ಯೆಯ ಗಂಭೀರತೆಯ ಬಗ್ಗೆ ವರದಿ ಮಾಡಿತ್ತು.

ಮಾಹಿತಿ ಹಕ್ಕು
ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಉತ್ತರಿಸಿದ ಪುತ್ತೂರು ನಗರಸಭೆ ಅಧಿಕಾರಿಗಳು, ಸೇತುವೆ ಕಾಮಗಾರಿಯನ್ನು ಪ್ರಕೃತಿ ವಿಕೋಪದಡಿ ಸೇರಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಗರಸಭೆ 3.90 ಲಕ್ಷ ರೂ. ಅಂದಾಜು ಪಟ್ಟಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಲಾಗಿದೆ.

ಜಿಲ್ಲಾಧಿಕಾರಿ ಖಡಕ್‌ ಸೂಚನೆ
ಮಳೆಗಾಲದ ಭಾರೀ ಮಳೆಗೆ ನೀರು ಉಕ್ಕೇರಿ ಹರಿಯಿತು. ಆ ಸಂದರ್ಭ ದೇವರಮಾರು ಗದ್ದೆಯ ಆಸುಪಾಸಿನ ಮನೆಗಳಿಗೆ ನೀರು ನುಗ್ಗಿತು. ಅಧಿಕಾರಿಗಳು ಸಮಾರೋಪಾದಿಯಲ್ಲಿ ಕಾರ್ಯ ಪ್ರವೃತ್ತರಾದರು. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ ಜಿಲ್ಲಾಧಿಕಾರಿ, ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಯಾರೇನೂ ಮಾಡಲು ಸಾಧ್ಯವಿಲ್ಲ. ದುರಂತ ಸಂಭವಿಸುವ ಮೊದಲೇ ಮುಂಜಾಗ್ರತೆ ಕೈಗೊಳ್ಳಬೇಕು. ನಗರಸಭೆ- ಎಪಿಎಂಸಿ ಎಂಬ ಬಿಗುಮಾನ ಬೇಡ. ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಘಟನೆ ನಡೆದರೂ ಅದಕ್ಕೆ ಸ್ಥಳೀಯಾಡಳಿತವೇ ಜವಾಬ್ದಾರಿ. ಈ ಸೇತುವೆಯನ್ನು ಪ್ರಕೃತಿ ವಿಕೋಪದಡಿ ಸೇರಿಸಿ, ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದ್ದರು. ಅವರ ಸೂಚನೆ ಹಿನ್ನೆಲೆಯಲ್ಲಿ ಇದೀಗ ಪುತ್ತೂರು ನಗರಸಭೆ, ಅಂದಾಜು ಪಟ್ಟಿ ಸಿದ್ಧಪಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next