“ನನಗೆ ಚಿಕ್ಕ ವಯಸ್ಸಿನಿಂದಲೇ ಡ್ಯಾನ್ಸ್, ಆ್ಯಕ್ಟಿಂಗ್…. ಹೀಗೆ ಪಠ್ಯೇತರ ಚಟುವಟಿಕೆಗಳು ಅಂದ್ರೆ ತುಂ ಬಾ ಇಷ್ಟ. ಸಮಯ ಸಿಕ್ಕರೆ ಟಿ.ವಿ ಮುಂದೆ ಹೋಗಿ ಕೂರುತ್ತಿದ್ದೆ. ನನಗೆ ಆಸಕ್ತಿಯಿದ್ದರೂ, ಮುಂದೆ ನಾನು ಕೂಡ ನಟಿಯಾಗುತ್ತೇನೆ ಅಂಥ ಖಂಡಿತ ಅಂದುಕೊಂಡಿರಲಿಲ್ಲ. ಈಗ ಹಿಂತಿರುಗಿ ನೋಡಿದ್ರೆ, ಇದೆಲ್ಲ ನಿಜಾನಾ? ಅಂಥ ಕೆಲವೊಮ್ಮೆ ಅನಿಸುತ್ತದೆ…’ ಇದು ನಟಿ ಬೃಂದಾ ಆಚಾರ್ಯ ಮಾತು.
“ಪ್ರೇಮಂ ಪೂಜ್ಯಂ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನವ ಪ್ರತಿಭೆ ಬೃಂದಾ ಆಚಾರ್ಯ, ಸದ್ಯ ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕಿಯರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ. “ಪ್ರೇಮಂ ಪೂಜ್ಯಂ’ ಸಿನಿಮಾದ ನಂತರ, ಈ ವರ್ಷದ ಆರಂಭದಲ್ಲಿ “ಜ್ಯೂಲಿಯೆಟ್-2′ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಬೃಂದಾ ಆಚಾರ್ಯ, ಸದ್ಯ ಶಶಾಂಕ್ ನಿರ್ದೇಶನದ “ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ನಡುವೆ “ರೀತು’ ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲೂ ಬೃಂದಾ ನಾಯಕಿಯಾಗಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ಆ ಸಿನಿಮಾದ ಚಿತ್ರೀಕರಣ ಕೂಡ ನಡೆಯುತ್ತಿದೆ.
ಇದೇ ವೇಳೆ ಮಾತಿಗೆ ಸಿಕ್ಕ ಬೃಂದಾ ಆಚಾರ್ಯ, ಸ್ಯಾಂಡಲ್‌ವುಡ್‌ನ ತಮ್ಮ ಸಿನಿಮಾ ಜರ್ನಿಯ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. “ಇಂಜಿನಿಯರಿಂಗ್ ಮುಗಿಸಿದ ನಂತರ ಮುಂಬೈನಲ್ಲಿ ಐಟಿ ಕಂಪೆನಿಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದೆ. ಆದರೆ ಆ್ಯಕ್ಟಿಂಗ್ ಕಡೆಗೆ ನನಗಿದ್ದ ಆಸಕ್ತಿಯನ್ನು ಕಂಡು, ನನ್ನ ಸ್ನೇಹಿತರು, ನನ್ನ ಅಕ್ಕ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಕನ್ನಡದಲ್ಲಿಯೇ ಆ್ಯಕ್ಟಿಂಗ್ ಕೆರಿಯರ್ ಶುರು ಮಾಡೋಣ ಎಂಬ ಯೋಚನೆಯಲ್ಲಿ, ಮುಂಬೈ ಬಿಟ್ಟು ಬೆಂಗಳೂರಿಗೆ ಬಂದೆ. ಆದರೆ ಆರಂಭದಲ್ಲಿ ಮನೆಯಲ್ಲಿ ಅಪ್ಪ-ಅಮ್ಮನಿಗೆ ಈ ವಿಷಯ ಹೇಳಲು ತಳಮಳವಿತ್ತು. ಒಳ್ಳೆಯ ಕೆಲಸ ಬಿಟ್ಟು ಆ್ಯಕ್ಟಿಂಗ್ ಮಾಡ್ತೀನಿ ಅಂದ್ರೆ ಏನಂದುಕೊಳ್ಳಬಹುದೋ ಎಂಬ ಆತಂಕವಿತ್ತು. ಕೊನೆಗೂ, ಮನೆಯವರನ್ನು ಒಪ್ಪಿಸಿ ಆ್ಯಕ್ಟಿಂಗ್‌ಗೆ ಬಂದಿದ್ದಾಯಿತು. ಆರಂಭದಲ್ಲಿ “ಮಹಾಕಾಳಿ’ ಮತ್ತು “ಶನಿ’ ಸೀರಿಯಲ್‌ನಲ್ಲಿ ನನಗೆ ಅವಕಾಶ ಸಿಕ್ಕಿತು. ಅದಾಗುತ್ತಿದ್ದಂತೆಯೇ, “ಪ್ರೇಮಂ ಪೂಜ್ಯಂ’ ಸಿನಿಮಾ ಸಿಕ್ಕಿತು’ ಎಂದು ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ ಬೃಂದಾ.
“ಮೊದಲ ಬಾರಿಗೆ ತುಂಬಾ ದೊಡ್ಡ ಕಲಾವಿದರು, ತಂತ್ರಜ್ಞರ ಜೊತೆ ಅಭಿನಯಿಸುವ ಅವಕಾಶ “ಪ್ರೇಮಂ ಪೂಜ್ಯಂ’ ಸಿನಿಮಾದಲ್ಲಿ ಸಿಕ್ಕಿತು. ಈ ಸಿನಿಮಾದಲ್ಲಿ ಕಲಿತಿದ್ದು ಸಾಕಷ್ಟಿದೆ. ಇಂದಿಗೂ ಈ ಸಿನಿಮಾ ನೋಡಿದವರು ನನ್ನನ್ನು “ಏಂಜಲ್’ ಎಂಬ ಪಾತ್ರದಲ್ಲೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ನೋಡುಗರ ಮನಮುಟ್ಟಿತು. ಅದಾದ ನಂತರ “ಜ್ಯೂಲಿಯೆಟ್’ ಸಿನಿಮಾ ಸಿಕ್ಕಿತು. ಇದು ಮೊದಲ ಸಿನಿಮಾದ ಪಾತ್ರಕ್ಕಿಂತ ಸಂಪೂರ್ಣ ತದ್ವಿರುದ್ದವಾಗಿದ್ದ ಪಾತ್ರ. ಆ ಪಾತ್ರ ಕೂಡ ನನಗೆ ತುಂಬ ಚಾಲೆಂಜಿಂಗ್ ಆಗಿತ್ತು. ಕೇವಲ ರೊಮ್ಯಾಂಟಿಕ್, ಗ್ಲಾಮರಸ್ ಪಾತ್ರ ಮಾತ್ರವಲ್ಲ ಆ್ಯಕ್ಷನ್ ಪಾತ್ರಗಳನ್ನು ಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿತು’ ಎನ್ನುತ್ತಾರೆ ಬೃಂದಾ.
“ಸದ್ಯ ಶಶಾಂಕ್ ನಿರ್ದೇಶನದ “ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದ ಬಿಡುಗಡೆ ಎದುರು ನೋಡುತ್ತಿದ್ದೇನೆ. ಶಶಾಂಕ್ ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡಬೇಕೆಂಬ ಕನಸು ಈ ಸಿನಿಮಾದಲ್ಲಿ ನನಸಾಗುತ್ತಿದೆ. ಈಗಿನ ಕಾಲದ ಹುಡುಗರು ನಿರೀಕ್ಷೆ ಮಾಡುವಂಥ, ಸಿಕ್ಕರೆ ಇಂಥ ಹುಡುಗಿ ಸಿಗಬೇಕು ಎನ್ನುವಂಥ ಪಾತ್ರ ನನ್ನದು. ಸಾಕಷ್ಟು ಟರ್ನ್, ಟ್ವಿಸ್ಟ್ ಇರುವಂಥ ಸಬ್ಜೆಕ್ಟ್ ಈ ಸಿನಿಮಾದಲ್ಲಿದೆ. ಖಂಡಿತವಾಗಿಯೂ ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಇದು’ ಎಂದು ತಮ್ಮ ಮುಂಬರುವ ಸಿನಿಮಾ ಮತ್ತದರ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಬೃಂದಾ
ಜಿ.ಎಸ್. ಕಾರ್ತಿಕ ಸುಧನ್