ನವದೆಹಲಿ: ವಿಚ್ಚೇದಿತ ಮುಸ್ಲಿಂ ಮಹಿಳೆಯು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125ರ ಅಡಿ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಬಹುದು. ಇದು ಪತ್ನಿಯ ಜೀವನಾಂಶಕ್ಕೆ ಸಂಬಂಧಿಸಿದ ಕಾಯ್ದೆಯಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ (ಜುಲೈ 10) ಮಹತ್ವದ ತೀರ್ಪು ನೀಡಿದೆ.
ಇದನ್ನೂ ಓದಿ:ವಿದೇಶಿ ಪ್ರವಾಸ ಕಥನ 3: ಅಬುಧಾಬಿಯಲ್ಲಿ ಟ್ರಾಫಿಕ್ ಪೊಲೀಸರೇ ಇಲ್ಲ, ಗುಣಮಟ್ಟದ ಹೆದ್ದಾರಿ..
ವಿಚ್ಛೇದನದ ನಂತರ ಪತ್ನಿಗೆ ಜೀವನಾಂಶ ನೀಡಬೇಕೆಂಬ ಕೋರ್ಟ್ ನಿರ್ದೇಶನವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ಜಸ್ಟೀಸ್ ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.
“ ಸೆಕ್ಷನ್ 125 ಕೇವಲ ವಿವಾಹಿತ ಮಹಿಳೆಯರಿಗೆ ಮಾತ್ರವಲ್ಲ, ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ ಎಂಬ ಪ್ರಮುಖ ತೀರ್ಮಾನದೊಂದಿಗೆ ನಾವು ಈ ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸಿದ್ದೇವೆ ಎಂದು ಜಸ್ಟೀಸ್ ನಾಗರತ್ನ ಹೇಳಿದರು. ಜಸ್ಟೀಸ್ ಮಸಿಹ್ ಕೂಡಾ ಪ್ರತ್ಯೇಕ ಆದೇಶ ಪ್ರಕಟಿಸಿದ್ದರು. ಆದರೆ ಇಬ್ಬರು ಒಮ್ಮತದ ತೀರ್ಪನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಜೀವನಾಂಶ ಕೋರುವ ಕಾನೂನು ಎಲ್ಲಾ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಪರಿಗಣಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ. ಸೆಕ್ಷನ್ 125ರ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಪತ್ನಿ, ಮಕ್ಕಳು ಅಥವಾ ಪೋಷಕರಿಗೆ ಜೀವನಾಂಶವನ್ನು ನಿರಾಕರಿಸುವಂತಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.
ಜೀವನಾಂಶ ಎಂಬುದು ದಾನದ ವಿಷಯವಲ್ಲ, ಅದು ವಿವಾಹಿತ ಮಹಿಳೆಯರ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಹಕ್ಕು ಧಾರ್ಮಿಕ ಗಡಿಗಳನ್ನು ಮೀರಿದೆ, ಎಲ್ಲಾ ವಿವಾಹಿತ ಮಹಿಳೆಯರಿಗೆ ಲಿಂಗ ಸಮಾನತೆ ಮತ್ತು ಆರ್ಥಿಕ ಭದ್ರತೆಯನ್ನು ನೀಡುವುದಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.