Advertisement

ಚಾಂಡಿಮೂಲೆ ವನ ಪ್ರದೇಶಕ್ಕೆ ಪುಟಾಣಿಗಳ ಚಾರಣ

06:45 AM Aug 02, 2017 | Harsha Rao |

ಬದಿಯಡ್ಕ: ಮಾನವ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು ತೆರೆದಿಡುವುದೇ ಮೈಮನಗಳಲ್ಲಿ ನವ ಚೈತನ್ಯ ತುಂಬುವ ಚಾರಣಗಳು. ಪ್ರಕೃತಿಯ ಸೊಬಗನ್ನು ರಮಣೀಯತೆಯನ್ನು ಅನುಭವಿಸುವುದರ ಜತೆಯಲ್ಲಿ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಲು, ಮೈಮರೆತು ಸೌಂದರ್ಯವನ್ನು ತಿಳಿದುಕೊಳ್ಳಲು ಹಾಗೂ ಸೌಂದರ್ಯವನ್ನು ಸವಿಯಲು ಹಿರಿಯ-ಕಿರಿಯ ಮನಸುಗಳಿಗೆ ಅದೇನೋ ಉತ್ಸಾಹ. ಆದುದರಿಂದಲೇ ಶಾಲಾಮಕ್ಕಳು ನಡೆಸುವ ಸಣ್ಣಸಣ್ಣ ಚಾರಣಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ.

Advertisement

ಶಾಲೆಗಳಲ್ಲಿ ಕೈದೋಟಗಳನ್ನು ನಿರ್ಮಿಸಿ ಹಸಿರಾದ ಶಾಲಾ ಪರಿಸರ ಹಾಗೂ ಆರೋಗ್ಯವಂತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸೀಡ್‌ ಮಹತ್ವದ ಹೆಜ್ಜೆಯಾಗಿದೆ. ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಸೀಡ್‌ ಕ್ಲಬ್‌ನ ಸದಸ್ಯರು ಅಧ್ಯಾಪಕರೊಂದಿಗೆ ಚಾಂಡಿಮೂಲೆ ವನ ಪ್ರದೇಶಕ್ಕೆ ಚಾರಣ ನಡೆಸಿದರು.

ಧಾರಾಕಾರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಹೆಚ್ಚಿದ ಬಳ್ಳಿಗಳನ್ನು ಕಡಿದು ದಾರಿಮಾಡುತ್ತಾ ವನಪ್ರದೇಶವನ್ನು ತಲುಪಿದರು. ಈ ಪ್ರದೇಶವು ಇಳಿಜಾರಿನಿಂದ ಕೂಡಿದ್ದು ಕಾಡು, ಬಳ್ಳಿಗಳನ್ನೇ ಆಧರಿಸಿ ಕೆಳಗಿಳಿಯುವ ಪ್ರಯತ್ನ ಮಾಡಿದರು. ಚಾರಣಿಗರಲ್ಲಿ ಪುಟಿಯುತ್ತಿದ್ದ ಉತ್ಸಾಹ ಅವರನ್ನು ಮುನ್ನಡೆಸಿತು. ಕಾಡಿನ ನಡುವೆ ಪಾರೆ ಕಲ್ಲುಗಳ ನಡುವೆ ಕಂಡುಬಂದ ಗುಹಾ ಕವಾಟವು ಮಕ್ಕಳಿಗೊಂದು ಕೌತುಕವಾಗಿತ್ತು. ಅಂತೆಯೇ ಗುಹೆಯ ಎದುರು ಭಾಗದಲ್ಲಿರುವ ವಿಶಾಲವಾದ ಕೊಳವೂ ಚಾರಣಿಗರನ್ನು ತನ್ನತ್ತ ಸೆಳೆಯಿತು.

ವನಪ್ರದೇಶದಲ್ಲಿರುವ ಮರ-ಬಳ್ಳಿಗಳು, ಔಷಧೀಯ ಸಸ್ಯಗಳು ಹಾಗೂ ಬಣ್ಣಬಣ್ಣದ ಚಿಟ್ಟೆಗಳ ಕುರಿತಾದ ಮಾಹಿತಿಯನ್ನು ಸೀಡ್‌ ಕೋರ್ಡಿನೇಟರ್‌ ಪಿ.ವಿ. ಪ್ರದೀಪ್‌ಕುಮಾರ್‌ ನೀಡಿದರು. ಮುಖ್ಯೋಪಾಧ್ಯಾಯರಾದ ಟಿ. ಗೋವಿಂದನ್‌ ನಂಬೂದಿರಿ, ಸ್ಟಾಫ್‌ ಸೆಕ್ರಟರಿ ಎಸ್‌.ಎಸ್‌. ರಾಜ್‌, ಅಧ್ಯಾಪಕರುಗಳಾದ ಆಶಾ ಕಿರಣ್‌, ಸಾವಿತ್ರಿ, ಚಿತ್ರಕಲಾ, ಟಿ.ವಿ. ರಮ್ಯಾ, ಸೀಡ್‌ ಕ್ಯಾಪ್ಟನ್‌ ಅನಸ್‌ ಮುಂತಾದವರು ಚಾರಣದಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next