Advertisement

BJP ಕರಾವಳಿಯ ಬಿಜೆಪಿ ಶಾಸಕರಿಂದ ತೆಲಂಗಾಣ ವಿಧಾನಸಭಾ ಚುನಾವಣೆಗೆ ಪ್ರಚಾರ

11:53 PM Aug 22, 2023 | Team Udayavani |

ಉಡುಪಿ: ಕರ್ನಾಟಕದ ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್‌ ಪೂರ್ಣ ಬಹುಮತ ದೊಂದಿಗೆ ಅಧಿಕಾರ ಹಿಡಿದಿದೆ. ಈಗ ತೆಲಂಗಾಣದಲ್ಲಿ ಚುನಾವಣೆ ಕಾವು ಏರುತ್ತಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಅಲ್ಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಪರ ಪ್ರಚಾರ ನಿರತರಾಗಿದ್ದಾರೆ.

Advertisement

ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಎಲ್ಲ ಪಕ್ಷಗಳು ಈಗಿಂದಲೇ ಸಿದ್ಧತೆ ಆರಂಭಿಸಿವೆ. ಚುನಾವಣೆ ಸಂಘಟನೆ ಹಾಗೂ ಪ್ರಚಾರದ ಭಾಗವಾಗಿ ಬಿಜೆಪಿಯು ಕರ್ನಾಟಕದ ಶಾಸಕರನ್ನು ತೆಲಂಗಾಣದಲ್ಲಿ ಪ್ರಚಾರ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿ ಸಿಕೊಳ್ಳುತ್ತಿದೆ. ಇದರ ಮೊದಲ ಭಾಗವಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ತೆಲಂಗಾಣದ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಭೇಟಿ, ಕಾರ್ಯಕರ್ತರ ಸಭೆ, ಮೋರ್ಚಾಗಳ ಸಭೆ ನಡೆಸುತ್ತಿದ್ದಾರೆ.

ತರಬೇತಿ/ ಅಧ್ಯಯನ ಪ್ರವಾಸ
ಬಿಜೆಪಿ ಶಾಸಕರಿಗೆ ತೆಲಂಗಾಣದಲ್ಲಿ ಚುನಾವಣೆ ಸಿದ್ಧತೆ ಅಧ್ಯಯನ ಪ್ರವಾಸ ಹಾಗೂ ತರಬೇತಿಯನ್ನು ಕೇಂದ್ರ ಬಿಜೆಪಿಯಿಂದ ಆಯೋಜಿಸಲಾಗಿತ್ತು. ಅನಂತರ ಎಲ್ಲ ಶಾಸಕರಿಗೂ ಒಂದೊಂದು ಕ್ಷೇತ್ರದಲ್ಲಿ ಪ್ರಚಾರ ಹಾಗೂ ಸಂಘನಾತ್ಮಕ ಕಾರ್ಯ ಜೋಡಿಸಲಾಗಿದೆ. ಈ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯಲಿದ್ದು, ಒಂದು ವಾರಗಳ ವರೆಗೂ ಶಾಸಕರು ಅಲ್ಲೇ ಇದ್ದು ವಿವಿಧ ಮೋರ್ಚಾಗಳ ಸಭೆ ನಡೆಸುವುದು, ಸಂಘ ಪರಿವಾರದ ಹಿರಿಯರ ಭೇಟಿ, ಮನೆ ಮನೆ ಭೇಟಿ, ಕೇಂದ್ರ ಸರಕಾರದ ಸಾಧನೆ ತಿಳಿಸುವುದು, ಸಾರ್ವಜನಿಕ ಕಾರ್ಯಕ್ರಮ ಹೀಗೆ ಚುನಾವಣೆ ಪ್ರಚಾರದ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದರು.

ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಶಾಸಕರಿಗೆ ತಲಾ ಒಂದು ವಾರದ ಎರಡು ಪ್ರವಾಸ ಆಯೋಜನೆ ಮಾಡಲಾಗಿದೆ. ಮೊದಲ ಸುತ್ತಿನ ಪ್ರವಾಸವು ಈಗ ಆರಂಭವಾಗಿದೆ. ದೇಶದ ಬಿಜೆಪಿ ಆಡಳಿತದ ವಿವಿಧ ರಾಜ್ಯದ ಸುಮಾರು 600 ಶಾಸಕರನ್ನು ನಿಯೋಜನೆ ಮಾಡಲಾಗಿದೆ. ಇದ ರಲ್ಲಿ ಕರ್ನಾಟಕದ ಶಾಸಕರು, ವಿಧಾನ
ಪರಿಷತ್‌ ಸದಸ್ಯರು ಇದ್ದಾರೆ.

ಕರಾವಳಿ ಶಾಸಕರು
ಉಡುಪಿ ಜಿಲ್ಲೆಯ ಶಾಸಕರಾದ ವಿ. ಸುನಿಲ್‌ ಕುಮಾರ್‌, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕೊಡ್ಗಿ, ಗುರುವಾಜ ಗಂಟಿಹೊಳೆ, ದ.ಕ. ಜಿಲ್ಲೆಯ ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಯು. ರಾಜೇಶ್‌ ನಾೖಕ್‌, ಹರೀಶ್‌ ಪೂಂಜಾ, ಭಾಗೀರಥಿ ಮುರುಳ್ಯ ಅವರು ತೆಲಂಗಾಣದ ಸಾದ್‌, ಕಲ್ವಕುರ್ತಿ, ಕೊಲ್ಲಾಪುರ, ಯಕತು³ರ, ನಾಗರಕುರ್ನೂಲು ಸಹಿತ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕೆಲವು ಶಾಸಕರು ಈಗಾಗಲೇ ಒಂದು ಹಂತದ ಪ್ರಚಾರ ಪ್ರಕ್ರಿಯೆ ಪೂರ್ಣಗೊಳಿಸಿ ವಾಪಸಾಗಿದ್ದಾರೆ.

Advertisement

ಅಧ್ಯಕ್ಷರ ಬದಲಾವಣೆ
ಇತ್ತೀಚೆಗಷ್ಟೆ ತೆಲಂಗಾಣ ರಾಜ್ಯದ ಬಿಜೆಪಿ ಅಧ್ಯಕ್ಷರನ್ನು ಬದಲಾಯಿಸಲಾಗಿದೆ. ಕೇಂದ್ರ ಸಚಿವ ಜಿ. ಕಿಶನ್‌ ರೆಡ್ಡಿ ಅವರಿಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ. ಸಂಸದ ಬಂಡಿ ಸಂಜಯ್‌ ಕುಮಾರ್‌ ಅವರು 2020ರಿಂದ ತೆಲಂಗಾಣ ಬಿಜೆಪಿ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲಿ ಸಂಘಟನಾತ್ಮಕ ಕಾರ್ಯಗಳು ಹೆಚ್ಚು ವೇಗವಾಗಿ ನಡೆದಿತ್ತು. ಚುನಾವಣೆ ಹೊಸ್ತಿಲಲ್ಲಿ ಅಧ್ಯಕ್ಷರ ಬದಲಾವಣೆ ಮಾಡಿರುವುದು ಮತ್ತು ಹೊಸ ಅಧ್ಯಕ್ಷರ ಪ್ರವಾಸ, ಪಕ್ಷ ಸಂಘಟನೆ ಇತ್ಯಾದಿ ಕೆಲವು ಅಂಶಗಳು ಚುನಾವಣೆ ತಯಾರಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಪ್ರವಾಸ ಮುಗಿಸಿ ಬಂದಿರುವ ಕೆಲವು ಶಾಸಕರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next