ಹುಣಸೂರು: ಶೌಚಾಲಯ ನಿರ್ಮಿಸಿಕೊಳ್ಳದ ಮನೆಗಳಿಗೆ “ಶೌಚಾಲಯ ನಿರ್ಮಿಸಿಕೊಡಿ – ನಮ್ಮ ಗೌರವ ಕಾಪಾಡಿ’ ಎಂಬ ಘೋಷ ವಾಕ್ಯದೊಂದಿಗೆ ಜೆಸಿಬಿಯೊಂದಿಗೆ ತೆರಳಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ತಿಳಿಸಿದ್ದಾರೆ.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಘೋಷಣೆಯ ಭಿತ್ತಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಯೋಜನೆ ಕುರಿತು ಮಾಹಿತಿ ನೀಡಿದರು. ತಾಲೂಕಿನಲ್ಲಿ ಈವರೆಗೆ 49,428 ಕುಟುಂಬಗಳು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಪಡೆದಿವೆ.
ಇನ್ನು 5,797 ಶೌಚಾಲಯ ನಿರ್ಮಿಸಿಕೊಳ್ಳಬೇಕಿದೆ. ಈ ಪೈಕಿ 1,450 ಶೌಚಾಲಯಗಳು ಪ್ರಗತಿಯಲ್ಲಿವೆ. ಇನ್ನುಳಿದ 4,347 ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಹೊಸ ಆಲೋಚನೆಯೊಂದಿಗೆ ಆಗಸ್ಟ್ 7ರಿಂದ 23ರ ವರೆಗೆ ಸ್ವತ್ಛ ಭಾರತ ಮಿಶನ್ ಯೋಜನೆಯಡಿ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದಕ್ಕಾಗಿ 8 ಮಂದಿಯ ಅಧಿಕಾರಿಗಳ ತಂಡ ರಚಿಸಲಾಗಿದೆ. ಪ್ರತಿ ತಂಡ 5 ಗ್ರಾಪಂಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿ ವರದಿ ನೀಡುವರು. ಶಾಲೆಗಳಲ್ಲಿ ಶೌಚಾಲಯ ನಿರ್ಮಾಣದ ಬಗ್ಗೆ ಅರಿವು ಕಾರ್ಯಕ್ರಮ, ಜೊತೆಗೆ ಜಾಥಾ, ಪ್ರಬಂಧ ಸ್ಪರ್ಧೆ ನಡೆಸುವರು. ಮನೆ-ಮನೆಗೆ ಭೇಟಿ ನೀಡಿ, ಇನ್ನೂ ಶೌಚಾಲಯ ನಿರ್ಮಿಸಿಕೊಳ್ಳದ ಕುಟುಂಬದವರ ಮನವೊಲಿಸುವರು ಎಂದರು.
33 ಹಳ್ಳಿಗಳಿಗೆ ಜೆಸಿಬಿ: ಆಗಸ್ಟ್ 20ರೊಳಗೆ ಶೌಚಾಲಯ ನಿರ್ಮಿಸಿಕೊಳ್ಳಬೇಕಿದೆ. ಇದಕ್ಕಾಗಿ ಹೆಚ್ಚು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಈ 33 ಹಳ್ಳಿಗಳಿಗೆ ತಾಪಂ ವತಿಯಿಂದ ಜೆಸಿಬಿ ಕೊಂಡೊಯ್ದು ಶೌಚಾಲಯ ಗುಂಡಿಯನ್ನು ಸಹ ನಿರ್ಮಿಸಿಕೊಡಲಾಗುವುದು ಎಂದರು.
ಜಿಪಂ ಸದಸ್ಯೆ ಡಾ.ಪುಷ್ಪಾ ಮಾತನಾಡಿ, ರಾಜ್ಯದಲ್ಲೇ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಶೌಚಾಲಯ ನಿರ್ಮಾಣದಲ್ಲಿ ಪ್ರಗತಿ ಸಾಧಿಸಿರುವ ಹುಣಸೂರು ಮೈಸೂರು ವಿಭಾಗ ಮಟ್ಟದಲ್ಲೇ ಪ್ರಥಮ ಸ್ಥಾನ ಗಿಟ್ಟಿಸುವ ನಿಟ್ಟಿನಲ್ಲಿ ಸಾಗಿರುವುದು ಹೆಮ್ಮೆ ಎನಿಸಿದೆ. ಜಿಲ್ಲಾ ಪಂಚಾಯ್ತಿ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಈ ಯೋಜನೆಗೆ ತಾಲೂಕಿನ ಎಲ್ಲ ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪದ್ಮಮ್ಮ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಅನಂತರಾಜೇ ಅರಸ್ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಸ್ವತ್ಛ ಭಾರತ್ ಮಿಶನ್ ಸಂಯೋಜಕ ದಿನೇಶ್, ಸಹಾಯಕ ನಿರ್ದೇಶಕ ಲಿಂಗಯ್ಯ, ಪಿಡಿಒ ನರಹರಿ, ಸಾಕ್ಷರ ಭಾರತ್ ಮಿಶನ್‌ನ ಶಶಿಕುಮಾರ್ ಇದ್ದರು.