Advertisement

ವಿಶೇಷ ಆಯುಕ್ತರನ್ನು ವಾಪಸ್‌ ತರಲು ಅಭಿಯಾನ

11:58 AM Dec 04, 2018 | |

ಬೆಂಗಳೂರು: ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾಗಿದ್ದ ರಂದೀಪ್‌ ಅವರನ್ನು ವರ್ಗಾಹಿಸಿದ ಸರ್ಕಾರದ ಆದೇಶಕ್ಕೆ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಅವರನ್ನು ಬಿಬಿಎಂಪಿಗೆ ವಾಪಸ್‌ ಕರೆತರಬೇಕೆಂದು ಒತ್ತಾಯಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ.

Advertisement

ನಗರದಲ್ಲಿ ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಅವರು, ಈ ಬಾರಿಯ ಸ್ವತ್ಛ ಸರ್ವೆಕ್ಷಣ್‌ ಅಭಿಯಾನದಲ್ಲಿ ಬೆಂಗಳೂರಿಗೆ ಉತ್ತಮ ರ್‍ಯಾಂಕ್‌ ದೊರಯಬೇಕೆಂಬ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಜತೆಗೆ ನಾಗರಿಕ ಕ್ಷೇಮಾಭಿವೃದ್ಧಿ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಅವರು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದರು.

ಸ್ವತ್ಛ ಸರ್ವೆಕ್ಷಣ್‌ ಅಭಿಯಾನಕ್ಕೆ ಕೆಲವೇ ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಅವರ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಇದರಿಂದಾಗಿ ಮತ್ತೆ ನಗರದಲ್ಲಿ ತ್ಯಾಜ್ಯ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆಯಿದ್ದು, ಮತ್ತೂಮ್ಮೆ ಬೆಂಗಳೂರು ಸ್ವತ್ಛತಾ ಅಭಿಯಾನದಲ್ಲಿ ಕಳಪೆ ಸಾಧನೆ ಮಾಡಲಿದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀನಾಕ್ಷಿ ಪ್ರಭು ಎಂಬುವವರು “ವಿ ವಾಟ್‌ ಅಡಿಷನಲ್‌ ಕಮಿಷನರ್‌ ರಂದೀಪ್‌ ಬ್ಯಾಕ್‌’ ಎಂಬ ಹೆಸರಿನಲ್ಲಿ ಚೇಂಜ್‌ ಡಾಟ್‌ ಒಆರ್‌ಜಿ ವೆಬ್‌ಸೈಟ್‌ನಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಯವರಿಗೆ ದೂರು ಸಲ್ಲಿಸಿದ್ದು, ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.

ಅವರ ಅರ್ಜಿಯನ್ನು ಬೆಂಬಲಿಸಿ 1400ಕ್ಕೂ ಹೆಚ್ಚಿನ ಜನರು ಸಹಿ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಪ್ರಮಾಣಿಕವಾಗಿ ಕೆಲಸ ಮಾಡುವಂತಹ ಅಧಿಕಾರಿಗಳಿಗೆ ಏಕೆ ತೊಂದರೆ ಕೊಡುತ್ತೀರಾ, ನಗರದ ಸ್ವತ್ಛತೆ ಮುಂದಾಗುವ ಅಧಿಕಾರಿಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ವರ್ಗಾವಣೆ ಹಿಂದೆ ಮನೇಕಾ ಗಾಂಧಿ?: ತಾವು ಸೂಚಿಸಿದ ಸಂಸ್ಥೆಗೆ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ವಿಚಾರದಲ್ಲಿ ಕೇಂದ್ರ ಸಚಿವರಾದ ಮನೇಕಾ ಗಾಂಧಿ ಹಾಗೂ ವಿಶೇಷ ಆಯುಕ್ತರಾಗಿದ್ದ ರಂದೀಪ್‌ ನಡುವೆ ಇ-ಮೇಲ್‌ ಸಮರ ನಡೆದಿತ್ತು. ಆ ಹಿನ್ನೆಲೆಯಲ್ಲಿ ರಂದೀಪ್‌ ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಕಳೆದ ತಿಂಗಳು ನೇರವಾಗಿ ರಂದೀಪ್‌ ಅವರಿಗೆ ಇ-ಮೇಲ್‌ ಮಾಡಿದ್ದ ಮನೇಕಾ ಗಾಂಧಿ, “ನೀವು ಟೆಂಡರ್‌ ಕರೆದು ನೀಡಿರುವ ಸಂಸ್ಥೆಗಳು ಸಮರ್ಪಕವಾಗಿ ಎಬಿಸಿ ಮಾಡುತ್ತಿಲ್ಲ. ಇದರಿಂದ ನೂರಾರು ನಾಯಿಗಳು ಸಾಯುತ್ತಿದ್ದು, ಕೂಡಲೇ ಟೆಂಡರ್‌ ರದ್ದುಪಡಿಸಿ, ಕ್ಯೂಪ ಸಂಸ್ಥೆಗೆ ಜವಾಬ್ದಾರಿ ನೀಡಿ’ ಎಂದು ಒತ್ತಡ ಹೇರಿದ್ದರು. 

ಅದಕ್ಕೆ ರಂದೀಪ್‌ ಅವರು, “ಪಾಲಿಕೆಯಿಂದ ಎಬಿಸಿ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ನೀವು ಆರೋಪದ ಮಾಡಿದ ಸಂಸ್ಥೆಗಳ ಟೆಂಡರ್‌ ರದ್ದುಪಡಿಸಿದ್ದೇವೆ. ಆದರೆ, ಕೆಪಿಟಿಟಿ ಕಾಯ್ದೆ ಪ್ರಕಾರ ನೀವು ಸೂಚಿಸಿದ ಸಂಸ್ಥೆಗೆ ನೇರವಾಗಿ ಟೆಂಡರ್‌ ನೀಡಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಅಥವಾ ಪಶುಸಂಗೋಪನೆ ಇಲಾಖೆಯೊಂದಿಗೆ ಸಂಪರ್ಕಿಸಿ ಅಥವಾ ಮುಂದೆ ಟೆಂಡರ್‌ ಆಹ್ವಾನಿಸಿದಾಗ ಕ್ಯೂಪ ಸಂಸ್ಥೆ ಬಿಡ್ಡಿಂಗ್‌ನಲ್ಲಿ ಭಾಗವಹಿಸಲಿ’ ಎಂದು ಉತ್ತರಿಸಿದ್ದರು. 

ರಂದೀಪ್‌ ಅವರ ಉತ್ತರಕ್ಕೆ ಕೆಂಡಾಮಂಡಲರಾಗಿದ್ದ ಮನೇಕಾ ಗಾಂಧಿ ಅವರು ಬಿಬಿಎಂಪಿ ಆಯುಕ್ತರಿಗೆ ಈ-ಮೇಲ್‌ ಮಾಡಿ, “ಅಸಮರ್ಪಕ ಎಬಿಸಿಯಿಂದ ನಾಯಿಗಳು ಸಾಯುವುದನ್ನು ತಡೆಯಲು ಬಿಬಿಎಂಪಿ ವಿಫ‌ಲವಾಗಿದೆ. ರಂದೀಪ್‌ ಕ್ರಮಕೈಗೊಳ್ಳುವುದಾಗಿ ತಿಳಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಅವರನ್ನು ವರ್ಗಾವಣೆ ಮಾಡಿ ಅಥವಾ ಅವರ ವಿರುದ್ಧ ಕ್ರಮಕೈಗೊಳ್ಳಿ’  ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next