Advertisement

ನಗರದ ಸಮಗ್ರ ನೈರ್ಮಲ್ಯಕ್ಕಾಗಿ ಅಭಿಯಾನ

09:13 PM Feb 26, 2020 | Lakshmi GovindaRaj |

ಚಾಮರಾಜನಗರ: ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶುಚಿತ್ವ, ಜಲಮೂಲಗಳ ಸಂರಕ್ಷಣೆ ಸೇರಿದಂತೆ ಸಮಗ್ರ ನೈರ್ಮಲ್ಯ ಕಾರ್ಯಗಳ ಸಮರ್ಪಕ ನಿರ್ವಹಣೆಗೆ ಚೆಲುವ ಚಾಮರಾಜನಗರ ಎಂಬ ಹೆಸರಿನಡಿ ಅಭಿಯಾನ ಆರಂಭಿಸಲು ಅಗತ್ಯ ಸಿದ್ದತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಿರುವ ನೈರ್ಮಲ್ಯ ಹಾಗೂ ರಸ್ತೆ ವಿಸ್ತರಣೆ ಕಾರ್ಯ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಲು ವಿಶೇಷ ಗಮನ ನೀಡಬೇಕು. ಕಸ ಸಂಗ್ರಹಣೆ, ವಿಂಗಡಣೆಯಂತಹ ಪ್ರಕ್ರಿಯೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಲಭ್ಯವಿರುವ ಜಲಮೂಲಗಳ ಮಾಹಿತಿ ಸಂಗ್ರಹಿಸಿ ಅದನ್ನು ಉಳಿಸಿ ಪೋಷಿಸುವುದು ಸೇರಿದಂತೆ ಸಮಗ್ರ ನೈರ್ಮಲ್ಯ ಕಾರ್ಯಕ್ರಮಗಳನ್ನು ಆಂದೋಲನ ಮಾದರಿಯಲ್ಲಿ ಏಕಕಾಲದಲ್ಲಿ ಆರಂಭಿಸಬೇಕು ಎಂದರು.

ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ: ಪಟ್ಟಣದ ಪ್ರತಿ ವೃತ್ತವನ್ನು ಶುಚಿಗೊಳಿಸುವ ಮೂಲಕ ಸುಂದರವಾಗಿ ಇಟ್ಟುಕೊಳ್ಳಬೇಕು. ಪರಿಸರ ಸಂರಕ್ಷಣೆ ಅರಿವಿಗೆ ಜನರನ್ನು ಉತ್ತೇಜಿಸಲು ಸ್ವಸಹಾಯ ಸಂಘಗಳು, ಜನಪ್ರತಿನಿಧಿಗಳು, ಇತರೆ ಸಂಘ ಸಂಸ್ಥೆಗಳ ನೆರವು, ಸಹಕಾರ ಪಡೆದುಕೊಳ್ಳಬೇಕು. ಕೆರೆ ಕಟ್ಟೆ ಕಲ್ಯಾಣಿಗಳಂತಹ ಅಮೂಲ್ಯ ಜಲಮೂಲಗಳನ್ನು ಗುರುತಿಸುವ ಕಾರ್ಯವನ್ನು ಸಹ ಕೈಗೊಳ್ಳುವಲ್ಲಿ ಮುಂದಾಗಬೇಕಿದೆ. ಚೆಲುವ ಚಾಮರಾಜನಗರ ಎಂಬ ಹೆಸರಿನಡಿ ಅಭಿಯಾನ ನಡೆಸುವ ಮೂಲಕ ಸ್ಥಳೀಯ ಸಂಸ್ಥೆಗಳಲ್ಲಿ ನೈರ್ಮಲ್ಯ ಕ್ರಮಗಳಿಗೆ ಒತ್ತು ನೀಡಬೇಕು ಎಂದು ತಿಳಿಸಿದರು.

ಕಸ ಕೊಳೆಯುವುದನ್ನು ತಪ್ಪಿಸಿ: ಜನ ಹಾಗೂ ವಾಹನ ಸಂಚಾರ ದಟ್ಟಣೆ ತಗ್ಗಿದ ರಾತ್ರಿ ವೇಳೆ ಸ್ವಚ್ಚತೆ ಕಾರ್ಯ ನಿರ್ವಹಿಸಲು ಪೌರ ಕಾರ್ಮಿಕರೊಂದಿಗೆ ಸಮಾಲೋಚಿಸಬೇಕು. ಇದರಿಂದ ರಾತ್ರಿಯಿಂದ ಬೆಳಗಿನವರೆಗೆ ಕಸ ಕೊಳೆಯುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ, ಬೆಳಗಿನ ವೇಳೆ ಮನೆ ಮನೆಯಿಂದ ಕಸ ಸಂಗ್ರಹಣೆ ಕಾರ್ಯವನ್ನು ಸುಗಮವಾಗಿ ನಿರ್ವಹಣೆ ಮಾಡಬಹುದಾಗಿದೆ. ಕಾರ್ಮಿಕರಿಗೆ ಹೆಚ್ಚುವರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ನಿಯಮಾನುಸಾರ ಹೆಚ್ಚುವರಿ ಭತ್ಯೆಯನ್ನು ನೀಡುವ ವ್ಯವಸ್ಥೆ ಮಾಡಬೇಕಿದೆ ಎಂದು ಹೇಳಿದರು.

ಸುರಕ್ಷತಾ ಕ್ರಮಗಳ ಪಾಲನೆಗೆ ಸೂಚನೆ: ಪಟ್ಟಣ, ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಅಂಗಡಿಗಳಲ್ಲಿ ಮಾಂಸವನ್ನು ಗಾಜಿನ ಪಟ್ಟಿಗೆಗಳಲ್ಲಿ ಮುಚ್ಚದೆ ತೆರೆದು ಮಾರಾಟ ಮಾಡಲಾಗುತ್ತಿದೆ. ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡದಿರುವುದು ಕಂಡುಬರುತ್ತಿದೆ. ಪಶುಪಾಲನೆ ಅಧಿಕಾರಿಗಳು ಹಾಗೂ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಪರಿಶೀಲನೆ ಕೈಗೊಂಡು ನಿಗದಿಪಡಿಸಿರುವ ಸುರಕ್ಷತಾ ಕ್ರಮಗಳ ಪಾಲನೆಗೆ ಸೂಚನೆ ನೀಡಬೇಕು. ಮಾರಾಟಗಾರರ ಸಭೆ ಕರೆದು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

Advertisement

ಪುಟ್‌ಪಾತ್‌ ಅತಿಕ್ರಮಣ ತೆರವುಗೊಳಿಸಿ: ಬೀದಿ ಬದಿಗಳಲ್ಲಿ ಎಲ್ಲೆಂದರಲ್ಲಿ ವ್ಯಾಪಾರ, ಹೋಟೆಲ್‌ ಇನ್ನಿತರ ಅಂಗಡಿ ಮುಂಗಟ್ಟುಗಳಿಂದ ಸಂಚಾರಕ್ಕೆ ಅಡಚಣೆಯಾಗಬಾರದು. ಆಹಾರ ತಿನಿಸುಗಳ ಮಾರಾಟಕ್ಕಾಗಿ ಫ‌ುಡ್‌ಜೋನ್‌ ಸ್ಥಾಪಿಸಲು ಪ್ರತ್ಯೇಕ ಜಾಗ ಗುರುತಿಸಿ ನೀಡಬೇಕು. ಪುಟ್‌ಪಾತ್‌ ಅತಿಕ್ರಮಣವನ್ನು ತೆರವುಗೊಳಿಸಬೇಕು. ಅನಧಿಕೃತ ಅಂಗಡಿಗಳ ಅಂಗಡಿಗಳನ್ನು ತೆರವುಗೊಳಿಸಬೇಕು. ಮುನಿಪಾಲಿಟಿ ಕಾಯ್ದೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಕೈಗೊಂಡಿರುವ ರಸ್ತೆ ವಿಸ್ತರಣೆ ಕಾಮಗಾರಿ ಕುರಿತು ಪರಿಶೀಲಿಸಿದ ಜಿಲ್ಲಾಧಿಕಾರಿಯವರು, ಪ್ರತಿ ಪಟ್ಟಣಗಳಲ್ಲಿ ಒಳಚರಂಡಿ, ಪುಟ್‌ಪಾತ್‌ಗೆ ಅವಕಾಶವಿರಬೇಕು. ಖಾಸಗಿ ವಾಹನಗಳು ನಿಗದಿತ ಸ್ಥಳದಲ್ಲಿ ಮಾತ್ರ ನಿಲುಗಡೆ ಮಾಡಲು ಸೂಚಿಸಬೇಕು. ಜನಸಂದಣಿ, ವಾಹನ ಸಂಚಾರ ದಟ್ಟಣೆಯಿಂದ ತೊಂದರೆಯಾಗದಂತೆ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.

ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲಿ: ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ನಾಗರಿಕರ ದೂರು, ಸಮಸ್ಯೆ ಆಲಿಸಲು ಮಾಹಿತಿ ಕೇಂದ್ರ, ದೂರು ನಿವಾರಣಾ ಕೇಂದ್ರಗಳನ್ನು ತೆರೆಯಬೇಕು. ಈಗಾಗಲೇ ತೆರೆಯಲಾಗಿರುವ ಕೇಂದ್ರಗಳಲ್ಲಿ ಪರಿಣಾಮಕಾರಿಯಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ಅಧಿಕಾರಿಗಳು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಜನರ ಕೆಲಸವನ್ನು ಹಗುರವಾಗಿ ಪರಿಗಣಿಸಿ ನಿರ್ಲಕ್ಷ್ಯ ತೋರುವ ಅಧಿಕಾರಿ ಸಿಬ್ಬಂದಿ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಕೆ. ಸುರೇಶ್‌, ಡಿ.ವೈ.ಎಸ್‌.ಪಿ ಅನ್ಸರ್‌ ಅಲಿ, ನಗರಸಭೆ ಆಯುಕ್ತರಾದ ರಾಜಣ್ಣ, ನಾಗಶೆಟ್ಟಿ, ಪಶುಪಾಲನೆ ಇಲಾಖೆ ಉಪನಿರ್ದೇಶಕರಾದ ವೀರಭದ್ರಯ್ಯ, ಜಿಲ್ಲಾ ಪರಿಸರ ಅಧಿಕಾರಿ ರಘುರಾಮ್‌, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು.

ಕಸದ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ತೆರೆದ ವಾಹನಗಳಲ್ಲಿ ಕಸ, ತ್ಯಾಜ್ಯವನ್ನು ಸಾಗಣೆ ಮಾಡಬಾರದು. ಮುಚ್ಚಿದ ವಾಹನಗಳಲ್ಲಿ ಮಾತ್ರವೇ ತ್ಯಾಜ್ಯ ಸಾಗಣೆ ಮಾಡಬೇಕು. ಎಲ್ಲಿಯಾದರೂ ತೆರೆದ ವಾಹನಗಳಲ್ಲಿ ಕಸ, ತ್ಯಾಜ್ಯವನ್ನು ಸಾಗಿಸುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಬೇಕು.
-ಡಾ. ಎಂ.ಆರ್‌. ರವಿ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next