Advertisement

ಆರೋಗ್ಯ ಸೇವೆ ಮಾಹಿತಿಗೆ ಶಿಬಿರ

11:53 AM Jul 13, 2018 | Team Udayavani |

ಬೆಂಗಳೂರು: ಯಶಸ್ವಿನಿ ಯೋಜನೆಯು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ವಿಲೀನವಾಗಿರುವುದರಿಂದ ಯಶಸ್ವಿನಿ ಅಡಿ ಆರೋಗ್ಯ ಸೇವೆ ಪಡೆಯುತ್ತಿದ್ದ ಸಹಕಾರ ಸಂಘಗಳ ಸದಸ್ಯರು ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಸೇವೆ ಪಡೆಯುವ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಲು ಶಿಬಿರ, ಕಾರ್ಯಾಗಾರ ಆಯೋಜಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

Advertisement

ರಾಜ್ಯದ ಸಮಸ್ತ ಜನರಿಗೆ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರೂಪುಗೊಂಡ ಆರೋಗ್ಯ ಕರ್ನಾಟಕ ಯೋಜನೆಗೆ ಕಳೆದ ಮಾ.2ರಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ವಾಜಪೇಯಿ ಆರೋಗ್ಯಶ್ರೀ, ರಾಜೀವ್‌ಗಾಂಧಿ ಆರೋಗ್ಯ ಭಾಗ್ಯ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್‌ ಯೋಜನೆ ಹಾಗೂ ಇಂದಿರಾ ಸುರಕ್ಷಾ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಗೊಳಿಸಲಾಗಿತ್ತು.

ತಕ್ಷಣ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗದಂತೆ ತಡೆಯುವ ಸಲುವಾಗಿ ಯಶಸ್ವಿನಿ ಯೋಜನೆಯನ್ನು 2018ರ ಮೇ 31ರವರೆಗೆ ವಿಸ್ತರಿಸಿ ನಂತರ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನಗೊಳಿಸಲಾಯಿತು. ಹಾಗಾಗಿ ಯಶಸ್ವಿನಿ ಫ‌ಲಾನುಭವಿಗಳು ಇನ್ನು ಮುಂದೆ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯಬೇಕಾಗುತ್ತದೆ.

ರಾಜ್ಯದ 6.5 ಕೋಟಿ ಜನರಿಗೆ 1516 ನಿರ್ದಿಷ್ಟ ಚಿಕಿತ್ಸಾ ಸೌಲಭ್ಯಗಳನ್ನು ಈ ಯೋಜನೆ ಒದಗಿಸಲಿದೆ. ಸಹಕಾರ ಸಂಘಗಳ ಸದಸ್ಯರು, ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರು ಕೂಡ ಯೋಜನೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಹಾಗಾಗಿ ಯೋಜನೆ ಪ್ರಯೋಜನ ಪಡೆಯುವ ಬಗೆ ಕುರಿತು ಅರಿವು ಮೂಡಿಸಲು, ಗೊಂದಲ ನಿವಾರಿಸಲು ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆ: ಮೊದಲಿಗೆ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಮಾಹಿತಿ ಶಿಬಿರ ಆಯೋಜಿಸಬೇಕು. ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಶಿಬಿರ ನಡೆಸಿ ಮಾಹಿತಿ ನೀಡಬೇಕು.

Advertisement

ಈ ಶಿಬಿರದ ನಡಾವಳಿಯನ್ನು ಸರ್ಕಾರಕ್ಕೆ ಕಳುಹಿಸಬೇಕು ಎಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್‌ ಸೇs… ಸುತ್ತೋಲೆಯಲ್ಲಿ ಸೂಚಿಸಿದ್ದಾರೆ. ನಂತರದ ಹಂತದಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಕಾರ್ಯದರ್ಶಿಗಳು ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳು ತಮ್ಮ ಸಂಘ, ಒಕ್ಕೂಟಗಳ ಸದಸ್ಯರಿಗೆ ಸ್ಥಳೀಯ ಮಟ್ಟದಲ್ಲಿ ಶಿಬಿರ ಆಯೋಜಿಸಿ ಎಲ್ಲ ಸದಸ್ಯರಿಗೆ ಯೋಜನೆ ಬಗ್ಗೆ ಮಾಹಿತಿ ನೀಡಬೇಕು.

ಯಶಸ್ವಿನಿ ಯೋಜನೆ ವಿಲೀನವಾಗಿರುವುದರಿಂದ ಹಾಗೂ ಈಗಾಗಲೇ ವಂತಿಗೆ ಅವಧಿ ಮುಕ್ತಾಯಗೊಂಡಿರುವುದರಿಂದ ಪ್ರಸಕ್ತ ವರ್ಷದಲ್ಲಿ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಸಾಲ ನೀಡುವಾಗ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗಳು ಸಹಾಯಧನ ವಿತರಿಸುವ ಸಂದರ್ಭದಲ್ಲಿ ಸದಸ್ಯತ್ವ ವಂತಿಗೆಯನ್ನು ಕಡಿತಗೊಳಿಸುವಂತಿಲ್ಲ ಎಂದು ಸೂಚಿಸಿದ್ದಾರೆ.

ಸಹಕಾರ ಸಂಘಗಳ ಕಾರ್ಯದರ್ಶಿಗಳು, ಹಾಲು ಉತ್ಪಾದಕ ಸಹಕಾರ ಸಂಘಗಳ ಕಾರ್ಯದರ್ಶಿಗಳು ಇಲ್ಲವೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಮಾಹಿತಿಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ನೇಮಿಸಿರುವ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೋರಿದ್ದಾರೆ.

ಆರೋಗ್ಯ ಕರ್ನಾಟಕ ಯೋಜನೆಯಡಿ ಬೆಂಗಳೂರು ಸೇರಿದಂತೆ ಒಂಬತ್ತು ಜಿಲ್ಲೆಗಳ 11 ಪ್ರಮುಖ ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್‌ ವಿತರಿಸಲಾಗುತ್ತಿದೆ. ಉಳಿದ ಎಲ್ಲ ಜಿಲ್ಲಾಸ್ಪತ್ರೆಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆ.31ರೊಳಗೆ ಆರೋಗ್ಯ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

2.50 ಲಕ್ಷಕ್ಕೂ ಹೆಚ್ಚು ಕಾರ್ಡ್‌ ವಿತರಣೆ: ಸದ್ಯ 11 ಆಸ್ಪತ್ರೆಗಳಲ್ಲಿ ಈವರೆಗೆ 2,50, 203 ಮಂದಿ ಆರೋಗ್ಯ ಕಾರ್ಡ್‌ ಪಡೆದಿದ್ದಾರೆ. ಯೋಜನೆಯಡಿ 480 ಖಾಸಗಿ ಆಸ್ಪತ್ರೆಗಳು ನೋಂದಣಿಯಾಗಿವೆ. ಏಪ್ರಿಲ್‌ನಿಂದ ಈವರೆಗೆ 6000ಕ್ಕೂ ಹೆಚ್ಚು ಮಂದಿ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ. 10 ರೂ. ನೀಡಿ ಆರೋಗ್ಯ ಕಾರ್ಡ್‌ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಕಾರ್ಡ್‌ ವಿತರಿಸುತ್ತಿರುವ ಆಸ್ಪತ್ರೆಗಳು: ಬೆಂಗಳೂರಿನ ಕೆ.ಜಿ. ಜನರಲ್‌ ಆಸ್ಪತ್ರೆ, ಬಿಎಂಸಿಆರ್‌ಐನ ಪಿಎಂಎಸ್‌ಎಸ್‌ವೈ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (ವಿಕ್ಟೋರಿಯಾ ಆಸ್ಪತ್ರೆ ಆವರಣ), ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ; ಬಳ್ಳಾರಿಯ ವಿಮ್ಸ್‌ ವೈದ್ಯಕೀಯ ಕಾಲೇಜು; ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆ; ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ; ಕಲಬುರ್ಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ; ಕೋಲಾರ ಜಿಲ್ಲಾಸ್ಪತ್ರೆ; ಮಂಡ್ಯದ ವೈದ್ಯಕೀಯ ಕಾಲೇಜು ಮತ್ತು ಆಸ್ಪತೆ; ಶಿವಮೊಗ್ಗದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ; ಮೈಸೂರಿನ ಟಿ.ನರಸೀಪುರ ಆಸ್ಪತ್ರೆ.

Advertisement

Udayavani is now on Telegram. Click here to join our channel and stay updated with the latest news.

Next