ಆತ ಆರು ಅಡಿ ಎಂಟು ಇಂಚು ಎತ್ತರದ ಆಜಾನಬಾಹು. ಭೀಕರ ಬೌಲಿಂಗ್ ನಿಂದ ಎದುರಾಳಿಯ ಎದೆ ನಡುಗಿಸುತ್ತಿದ್ದ ವೆಸ್ಟ್ ಇಂಡೀಸ್ ಲೈನಪ್ ಗೆ ಈತ ಹೇಳಿ ಮಾಡಿಸಿದಂತಿದ್ದ. ಜೋಯಲ್ ಗಾರ್ನರ್, ಕರ್ಟ್ಲಿ ಆ್ಯಂಬ್ರೋಸ್ ರಂತಹ ದೊಡ್ಡ ಜೀವದ ವೇಗಿಗಳ ಬಳಿಕ ವೆಸ್ಟ್ ಇಂಡೀಸ್ ತಂಡದ ಭವಿಷ್ಯ ಎಂದೇ ಕೊಂಡಾಡಲಾಗಿತ್ತು. ಆದರೆ ತನ್ನ ಘಾತಕ ವೇಗದಿಂದ ವಿಕೆಟ್ ಚೆಲ್ಲಾಡಿ ಪ್ರಸಿದ್ದಿ ಪಡೆಯಬೇಕಿದ್ದ ಈತ ಈಗಲೂ ನೆನಪಿನಲ್ಲಿ ಉಳಿದಿರುವುದು ಒಂದು ಪಂದ್ಯಶ್ರೇಷ್ಠ ಪ್ರಶಸ್ತಿಯ ಕಾರಣ. ಹೌದು ಆತನೇ ವೆಸ್ಟ್ ಇಂಡೀಸ್ ನ ಮಾಜಿ ಬೌಲರ್ ಕ್ಯಾಮರೂನ್ ಕಫಿ.
ಕೆರಿಬಿಯನ್ ದ್ವೀಪ ಸೈಂಟ್ ವಿನ್ಸೆಂಟ್ ಮತ್ತು ಗ್ರೆನೆಡೀನ್ಸ್ ನ ಕ್ಯಾಮರೂನ್ ಕಫಿ 1994ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ. ತನ್ನ ಎತ್ತರದ ಗಾತ್ರದಿಂದಲೇ ಆರಂಭದಲ್ಲಿ ಗುರುತಿಸಿಕೊಂಡಿದ್ದ ಕಫಿ ತನ್ನ ಬೌಲಿಂಗ್ ನಿಂದಲೂ ಮೋಡಿ ಮಾಡಿದ್ದ.
ವೆಸ್ಟ್ ಇಂಡೀಸ್ ಪರವಾಗಿ 15 ಟೆಸ್ಟ್ ಪಂದ್ಯ, 41 ಏಕದಿನ ಪಂದ್ಯಗಳಲ್ಲಿ ಕಫಿ ಕಣಕ್ಕಿಳಿದಿದ್ದ. ಅದರಲ್ಲಿ ಕ್ರಮವಾಗಿ 43 ಮತ್ತು 41 ವಿಕೆಟ್ ಗಳನ್ನು ಈತ ಕಿತ್ತಿದ್ದ.
ತನ್ನ ಟೆಸ್ಟ್ ವೃತ್ತಿ ಜೀವನದಲ್ಲಿ ಈತ ಮೂರು ಬಾರಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಕೆಟ್ ಪಡೆದು ಮೆರೆದಿದ್ದ. ಇದು ಅಂತಾರಾಷ್ಟ್ರೀಯ ಕ್ರಿಕೆಟ್ ನ ಸಾಧನೆಗಳಲ್ಲಿ ಒಂದು. ಸದಾ ತಂಡದಿಂದ ಒಳಗೆ ಹೊರಗೆ ಹಾರುತ್ತಿದ್ದ ಕಫಿಯ 1994ರಿಂದ 2002ರವರೆಗಿನ ವೃತ್ತಿ ಜೀವನದಲ್ಲಿ ಬೇರೆ ಹೇಳಿಕೊಳ್ಳುವ ದೊಡ್ಡ ಸಾಧನೆಯೇನು ಮಾಡಿಲ್ಲ. ಇದೀಗ ಈ ಲೇಖನದ ವಿಷಯವೂ ಅದೇ, ಏನೂ ಮಾಡದೆ ಪುರಸ್ಕಾರ ಪಡೆದ ವಿಚಾರ.
ಅದು 2001ರ ಕೋಕಾ ಕೋಲಾ ಕಪ್ ತ್ರಿಕೋನ ಸರಣಿ. ಭಾರತ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ನಡುವಿನ ಸರಣಿಯದು. ಜಿಂಬಾಬ್ವೆಯಲ್ಲಿ ನಡೆದ ಆ ಕೂಟ ಹಲವು ವಿಚಿತ್ರ ಸಂಗತಿಗಳಿಂದ ಆ ಮೊದಲೇ ಗಮನ ಸೆಳೆದಿತ್ತು. ಈ ತ್ರಿಕೋನ ಸರಣಿಗೂ ಮೊದಲು ನಡೆದ ನಡೆದ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್, ಜಾವಗಲ್ ಶ್ರೀನಾಥ್ ರಂತಹ ಘಟಾನುಘಟಿಗಳಿದ್ದ ಫುಲ್ ಸ್ಟ್ರೆಂಥ್ ಭಾರತ ತಂಡವು ಜಿಂಬಾಬ್ವೆ ವಿರುದ್ಧ ಸೋಲನುಭವಿಸಿತ್ತು.
ಅಷ್ಟೇ ಅಲ್ಲದೆ ಅತ್ತ ಕ್ರಿಸ್ ಗೇಲ್, ಮಾರ್ನಲ್ ಸ್ಯಾಮುವೆಲ್ಸ್, ಶಿವನಾರಾಯಣ್ ಚಂದ್ರಪಾಲ್ ರಂತಹ ಬಲಿಷ್ಠ ಆಟಗಾರರಿದ್ದ ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆಯ ಸಾಮಾನ್ಯ ಕ್ಲಬ್ ತಂಡದ ಎದುರು ಅಭ್ಯಾಸ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿತ್ತು. ಟೆಸ್ಟ್ ಸೋತ ಭಾರತ, ಕ್ಲಬ್ ತಂಡದ ವಿರುದ್ಧ ಸೋತ ವೆಸ್ಟ್ ಇಂಡೀಸ್ ಬದಲಿಗೆ ತ್ರಿಕೋನ ಸರಣಿಯ ಗೆಲ್ಲುವ ಫೇವರೇಟ್ ಜಿಂಬಾಬ್ವೆ ಎಂದು ಪತ್ರಿಕೆಗಳು ವರದಿ ಮಾಡಿದ್ದವು. ಮತ್ತೊಂದು ವಿಚಿತ್ರ ಎಂದರೆ ಆ ಸರಣಿ ಮೊದಲ ಮೂರು ಪಂದ್ಯಗಳಲ್ಲಿ ಜಿಂಬಾಬ್ವೆ ತಂಡವನ್ನು ಮೂರು ನಾಯಕರು ಮುನ್ನಡೆಸಿದ್ದರು. ಅಂತಹ ವಿಚಿತ್ರ ಸರಣಿಯದು. ಅಂತಹ ಸರಣಿಯಲ್ಲೊಂದು ಈ ಪಂದ್ಯ.
ಅದು ಹರಾರೆಯಲ್ಲಿ ನಡೆದ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ಗೆ ಡ್ಯಾರೆನ್ ಗಂಗಾ, ಕ್ರಿಸ್ ಗೇಲ್ ಮತ್ತು ಚಂದ್ರಪಾಲ್ ಅರ್ಧಶತಕ ಸಿಡಿಸಿ ನೆರವಾಗಿದ್ದರು. ಹೀಗಾಗಿ ವಿಂಡೀಸ್ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತ್ತು.
ವೆಸ್ಟ್ ಇಂಡೀಸ್ – ಭಾರತ ತಂಡವಿದ್ದೂ ಕೂಟ ಗೆಲ್ಲುವ ಫೇವರೇಟ್ ಆಗಿದ್ದ ಜಿಂಬಾಬ್ವೆ ಗೆಲುವಿಗೆ 267 ರನ್ ಗುರಿ ನೀಡಲಾಗತ್ತು. ಆರಂಭಿಕ ಆಟಗಾರ ಅಲಿಸ್ಟರ್ ಕ್ಯಾಂಪ್ ಬೆಲ್ ಅರ್ಧಶತಕ ದ ಬಾರಿಸಿದರೂ ಜಿಂಬಾಬ್ವೆ ಗಳಿಸಿದ್ದು 239 ರನ್ ಮಾತ್ರ. ವೆಸ್ಟ್ ಇಂಡೀಸ್ 27 ರನ್ ಗಳ ವಿಜಯ ಸಾಧಿಸಿತ್ತು. ವಿಂಡೀಸ್ ಪರ ಮಾರ್ಲನ್ ಸ್ಯಾಮುವೆಲ್ಸ್ ಮತ್ತು ಮೆರ್ವಿನ್ ಡಿಲೋನ್ ತಲಾ ಮೂರು ವಿಕೆಟ್ ಕಿತ್ತು ತಂಡದ ಗೆಲುವಿಗೆ ಸಹಕಾರಿಯಾಗಿದ್ದರು.
ಆದರೆ ಪಂದ್ಯದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನಮ್ಮ ಕಥೆಯ ಹೀರೋ ಕ್ಯಾಮರೂನ್ ಕಫಿಗೆ ನೀಡಲಾಯಿತು. ನಿರೂಪಕ ಹೀಗೆ ಕಫಿ ಹೆಸರು ಘೋಷಣೆ ಮಾಡುತ್ತಲೇ ಎಲ್ಲರಿಗೂ ಅಚ್ಚರಿ. ಯಾಕೆಂದರೆ ಕಫಿ ಬ್ಯಾಟಿಂಗ್ ಮಾಡಿರಲಿಲ್ಲ, ಬೌಲಿಂಗ್ ನಲ್ಲಿ ಒಂದೇ ಒಂದು ವಿಕೆಟ್ ಕಿತ್ತಿರಲಿಲ್ಲ, ಅಲ್ಲದೆ ಒಂದೇ ಒಂದು ಕ್ಯಾಚ್ ಕೂಡಾ ಪಡೆದಿರಲಿಲ್ಲ. ಏನೂ ಇಲ್ಲದ ಕಫಿಗೆ ಯಾಕೆ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ಎಂದು ಎಲ್ಲರೂ ಹುಬ್ಬೇರಿಸಿದ್ದರು.
ಆದರೆ ಅದಕ್ಕೆ ಸಂಬಂಧಪಟ್ಟವರು ಉತ್ತರ ನೀಡಿದ್ದರು. ಅಂದರೆ ಹತ್ತು ಓವರ್ ಬೌಲಿಂಗ್ ಮಾಡಿದ್ದ ಕ್ಯಾಮರೂನ್ ಕಫಿ ಒಂದೇ ಒಂದು ವಿಕೆಟ್ ಪಡೆಯದಿದ್ದರೂ ನೀಡಿದ್ದು ಕೇವಲ 20 ರನ್ ಮಾತ್ರ. ಉಳಿದ ಬೌಲರ್ ಗಳು ಕನಿಷ್ಠ ಐದರ ಎಕಾನಮಿಯಲ್ಲಿ ರನ್ ನೀಡಿದ್ದರೂ, ಕಫಿ ಮಾತ್ರ ಕೇವಲ ಎರಡರ ಎಕಾನಮಿಯಲ್ಲಿ ಚೆಂಡೆಸೆದಿದ್ದ. ಕಫಿಯ ಈ ಅಗ್ಗದ ಬೌಲಿಂಗ್ ಕಾರಣದಿಂದಲೇ ವೆಸ್ಟ್ ಇಂಡೀಸ್ ಪಂದ್ಯ ಗೆದ್ದುಕೊಂಡಿತು ಎಂದು ತೀರ್ಮಾನಿಸಿ ಆತನಿಗೆ ಪುರಸ್ಕರಿಸಲಾಗಿತ್ತು.
ಹೀಗಾಗಿ ಒಂದೇ ಒಂದು ರನ್ ಮಾಡದೆ, ವಿಕೆಟ್ ಪಡೆಯದೆ, ಕ್ಯಾಚ್ ಹಿಡಿಯದೆ ಕ್ಯಾಮರೂನ್ ಕಫಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದ.
ಕೀರ್ತನ್ ಶೆಟ್ಟಿ ಬೋಳ