ಸಿಂಧನೂರು: ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಇಲ್ಲವೆಂದು ಯರ್ರಾಬಿರ್ರಿ ವಾಹನ ಚಲಾಯಿಸಿದರೆ ಮನೆ ಬಾಗಿಲಿಗೇ ನೋಟಿಸ್ ಬರಲಿದೆ!
ಹೌದು. ಇಲಾಖೆ ಕಚೇರಿಯಲ್ಲೇ ಕುಳಿತು ನಿಯಮ ಉಲ್ಲಂಘಿಸುವ ಸವಾರರನ್ನು ಪತ್ತೆ ಹಚ್ಚಲು ಪೊಲೀಸರು ಈ ಹೊಸ ವಿಧಾನ ಕಂಡುಕೊಂಡಿದ್ದಾರೆ. ನಗರದ ಪ್ರಮುಖ ವೃತ್ತಗಳು, ಜನನಿಬಿಡ ಸ್ಥಳಗಳಲ್ಲಿ 20 ಸಿಸಿ ಕ್ಯಾಮೆರಾಗಳನ್ನು ಕಳೆದ 4 ದಿನದ ಹಿಂದೆ ಅಳವಡಿಸಲಾಗಿದೆ. ವಾಗ್ವಾದ, ಚರ್ಚೆಗೆ ಅವಕಾಶವಿಲ್ಲದಂತೆ ನೇರವಾಗಿ ವಾಹನ ಮಾಲೀಕರನ್ನು ಪತ್ತೆ ಹಚ್ಚಿ ದಂಡ ವಿ ಧಿಸಲು ಇಲಾಖೆ ನಿರ್ಧರಿಸಿದೆ.
ಏನಿದು ವ್ಯವಸ್ಥೆ?: ನಗರದ ಚನ್ನಮ್ಮ ಸರ್ಕಲ್ ನಲ್ಲಿ 3, ಮಹಾತ್ಮ ಗಾಂಧಿ ಸರ್ಕಲ್‌ನಲ್ಲಿ 4, ಬಸ್ ನಿಲ್ದಾಣದಲ್ಲಿ 4 ಕಡೆ, ಬಸವೇಶ್ವರ ಸರ್ಕಲ್‌ನಲ್ಲಿ 3, ಟಿಪ್ಪು ಸುಲ್ತಾನ್‌ಸರ್ಕಲ್‌ನಲ್ಲಿ 2, ಹಳೇ ಬಜಾರ್‌ನಲ್ಲಿ 2, ಪಿಡಬ್ಲ್ಯುಡಿ ಕ್ಯಾಂಪಿನ ಅಂಬೇಡ್ಕರ್ ವೃತ್ತದಲ್ಲಿ 2 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈಗಾಗಲೇ 16 ಕ್ಯಾಮೆರಾಗಳಿಗೆ ಕೇಬಲ್ ಸಂಪರ್ಕ ಕಲ್ಪಿಸಲಾಗಿದ್ದು, ಪೊಲೀಸ್ ವೃತ್ತ ನಿರೀಕ್ಷಕರ (ಸಿಪಿಐ) ಕಚೇರಿಯ ದೊಡ್ಡ ಸ್ಕ್ರಿನ್ ನಲ್ಲಿ ದೃಶ್ಯಾವಳಿ ವೀಕ್ಷಿಸಲಾಗುತ್ತದೆ. ಇಬ್ಬರು ಸಂಚಾರಿ ಠಾಣೆಯ ಸಿಬ್ಬಂದಿ ಮಾನಿಟರ್‌ಮಾಡಲಿದ್ದು, ನಿಯಮ ಉಲ್ಲಂಘನೆ ಕಂಡುಬರುತ್ತಿದ್ದಂತೆ ವಾಹನದ ನಂಬರ್ ಆಧರಿಸಿ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಬೃಹತ್ ಮಹಾನಗರಗಳಲ್ಲಿ ಜಾರಿಯಲ್ಲಿರುವ ಈ ವ್ಯವಸ್ಥೆಯನ್ನು ನಗರದಲ್ಲಿ ಅಳವಡಿಸಿದ್ದು, ಎಸ್ಪಿ ನಿಕ್ಕಮ್ ಪ್ರಕಾಶ್ ಅಮ್ರಿತ್ ಅವರಿಂದ ಅಧಿಕೃತವಾಗಿ ಚಾಲನೆ ಕೊಡಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಹಲವರು ಪತ್ತೆ: ಮೂರ್‍ನಾಲ್ಕು ದಿನದಲ್ಲೇ ವಿವಿಧ ರೀತಿಯ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಯಾಗಿವೆ. ಟ್ರಾμಕ್‌ನಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುವುದು, ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ನಿಲುಗಡೆ, ಸಿಗ್ನಲ್ ಜಂಪ್ ಸೇರಿ ಇತರೆ ಅಪರಾಧಗಳನ್ನುಗುರುತಿಸಲಾಗಿದೆ. ಡಿ.4ರಂದು-25, ಡಿ.5ರಂದು-26, ಡಿ.6ರಂದು-25 ಪ್ರಕರಣಗಳು ಪತ್ತೆಯಾಗಿದ್ದು, ಮಾಲೀಕರ ಹೆಸರು ಗುರುತಿಸಲಾಗಿದೆ. ಸಂಚಾರಿ ಪೊಲೀಸರಿಗೆ ತಮಗೆ ಲಭ್ಯವಿರುವ ವಾಹನ ಸಮನ್ವಯ ತಂತ್ರಾಂಶದಲ್ಲಿ ಗಾಡಿ ನಂಬರ್ ನಮೂದಿಸಿ, ಮಾಲೀಕರನ್ನು ಪತ್ತೆ ಹಚ್ಚುತ್ತಿದ್ದಾರೆ. ನಿಯಮ ಉಲ್ಲಂಘಿಸಿದ ದೃಶ್ಯ ಕಣ್ಣಿಗೆ ಬೀಳುತ್ತಿದ್ದಂತೆ ಠಾಣೆಯಲ್ಲೇ ಜೂಮ್ ಮಾಡುವ ವಾಹನದ ನಂಬರ್, ಮಾಲೀಕನ ಚಿತ್ರ ಬರುವಂತೆ ಸ್ಕ್ರಿನ್ ಶಾಟ್‌ತೆಗೆಯಲಾಗುತ್ತದೆ. ಕ್ಯಾಮೆರಾವನ್ನು ಬೇಕಾದ ರೀತಿಯಲ್ಲಿ ಜೂಮ್ ಮಾಡುವ ಅವಕಾಶವಿರುವುದರಿಂದ ಸವಾರರು ಸಿಕ್ಕಿ ಬೀಳಲಿದ್ದಾರೆ.
ಸುಲಭ ಮಾರ್ಗ: ಬೆಳಗ್ಗೆ 8ರಿಂದ ರಾತ್ರಿ 8 ರ ತನಕ ಇಬ್ಬರು ಸಿಬ್ಬಂದಿ ಬಿಗ್ ಸ್ಕ್ರಿನ್‌ನಲ್ಲಿ 20 ಪ್ರದೇಶಗಳನ್ನು ವೀಕ್ಷಿಸುತ್ತಿದ್ದು, ನಿಯಮ ಉಲ್ಲಂಘಿಸುತ್ತಿದ್ದಂತೆ ಪ್ರಿಂಟ್ ಟಿಂಟ್ ಜೂಮ್ (ಪಿಟಿಝಡ್)ತಂತ್ರಜ್ಞಾನ ಬಳಸಿ ಸ್ಕ್ರಿನ್ ಶಾಟ್ ತೆಗೆದು ಫೋಟೋ ತೆಗೆದಿಡಲಾಗುತ್ತದೆ. ಈ ಹಿಂದೆ 2018ರಲ್ಲಿ 7.50 ಲಕ್ಷ ರೂ. ವ್ಯಯಿಸಿ ವೈರ್‌ಲೆಸ್ ಸಿಸಿ ಕ್ಯಾಮೆರಾ ಹಾಕಿದ್ದರೂ ತಾಂತ್ರಿಕ ತೊಂದರೆಯಿಂದ ಹಾಳಾಗಿದ್ದವು. ಇದೀಗ ಹೊಸ ತಂತ್ರಜ್ಞಾನ ಬಳಸಿಕೊಂಡು ಕೇಬಲ್ ಸಂಪರ್ಕದಿಂದ ಸಿಪಿಐ ಕಚೇರಿಯಲ್ಲೇ ಕುಳಿತು ನೋಡಲು ವ್ಯವಸ್ಥೆ ಮಾಡಲಾಗಿದೆ. ಕೇಬಲ್ ಸಂಪರ್ಕ ಕಡಿತವಾದರೂ ತಕ್ಷಣವೇ ಗುರುತಿಸಿ ಸರಿಪಡಿಸಲಿಕ್ಕೆ ಅವಕಾಶವಿದೆ. ಯಾರು ನೋಡಿಲ್ಲವೆಂದು ಓಡಿ ಹೋದರೂ ಅವರನ್ನು ಬೆನ್ನತ್ತಿ ನೋಟಿಸ್ ಬರುವುದರಿಂದ ವಾಹನಸವಾರರು ಸಂಚಾರಿ ನಿಯಮ ಉಲ್ಲಂಘಿ ಸುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.
ಅನುಮಾನಾಸ್ಪದ ವ್ಯಕ್ತಿಗಳು, ವಾಹನ, ಹಿಟ್ ಆ್ಯಂಡ್ ರನ್, ಸಂಚಾರಿ ನಿಯಮ ಉಲ್ಲಂಘನೆ ಮೇಲೆ ನಿಗಾ ಇಡಲು ಕ್ಯಾಮೆರಾ ಅಳವಡಿಸಿದ್ದು, ಇನ್ನು 4 ಕಡೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.
– ಜಿ.ಚಂದ್ರಶೇಖರ್, ಸಿಪಿಐ, ಸಿಂಧನೂರು ವೃತ
–ಯಮನಪ್ಪ ಪವಾರ