ಕಲಬುರಗಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಇ-ಶ್ರಮಿಕ್ ಪೋರ್ಟ್‌ಲ್ ಸದುಪಯೋಗ ಪಡೆದುಕೊಳ್ಳುವಂತೆ ಸಂಸದ ಡಾ| ಉಮೇಶ ಜಾಧವ ಕರೆ ನೀಡಿದರು.
ದೇಶದ 75ನೇ ಸ್ವಾತಂತ್ರ್ಯೋತ್ಸವ ವರ್ಷದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಜಿಲ್ಲಾ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಕೃಷಿ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತ ದಿನಾಚರಣೆಯಲ್ಲಿ 75 ರೈತರಿಗೆ “ಕೃಷಿ ರತ್ನ ಪ್ರಶಸ್ತಿ’ ನೀಡಿ, ಸನ್ಮಾನಿಸಿ ಅವರು ಮಾತನಾಡಿದರು.
ಇ ಶ್ರಮಿಕ ಪೋರ್ಟ್‌ಲ್ ಯೋಜನೆ ರೈತರಿಗೆ ಹಾಗೂ ಕಾರ್ಮಿಕರಿಗೆ ಬಹು ಉಪಯೋಗವಾಗಿದೆ. ಇದರಲ್ಲಿ ವೈದ್ಯಕೀಯ ಸೇರಿದಂತೆ ಇತರ ಸೌಕರ್ಯಗಳಿವೆ. ಜೀವಕ್ಕೆ ಹಾನಿಯಾದಲ್ಲಿ ಎರಡು ಲಕ್ಷ ರೂ. ಪರಿಹಾರವಿದೆ. ಹೀಗೆ ಹಲವಾರು ಯೋಜನೆಗಳು ರೈತರಿಗೆ ಅನುಕೂಲವಾಗುವಂತೆ ಇವೆ. ಇದನ್ನೆಲ್ಲ ರೈತರು ತಿಳಿದುಕೊಳ್ಳಬೇಕು. ಜತೆಗೆ ರೈತ ಮುಖಂಡರು ತಿಳಿ ಹೇಳಬೇಕು ಎಂದರು.
ಕೃಷಿಯಲ್ಲಿ ಉತ್ಪನ್ನ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸ್ವಾವಲಂಬನೆ ಸಾಧಿಸಲು ಅದರಲ್ಲೂ ರೈತರ ಏಳ್ಗೆಗೆ ಪೂರಕವಾಗುವ ಜತೆಗೆ ಅರ್ಥಿಕವಾಗಿ ಬಲವರ್ಧನೆಗೊಳಿಸಲು ದೇಶಾದ್ಯಂತ 10 ಸಾವಿರ ಕೃಷಿ ಉತ್ಪಾದಕರ ಸಂಘ ( ಎಫ್‌ಪಿಒ) ರಚಿಸುತ್ತಿರುವುದರಿಂದ ರೈತರು ಆಸಕ್ತಿಯಿಂದ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಮಾತನಾಡಿ, ಕೃಷಿ ಉದ್ಯಮವಾಗಿಸಲು ಹಾಗೂ ರೈತರ ಏಳ್ಗೆಗೆ ಯೋಜನೆಗಳ ವಿಸ್ತಾರ ಮತ್ತಷ್ಟು ಬಲಗೊಳ್ಳಬೇಕಿದೆ ಎಂದು ಹೇಳಿದರು.
ಪ್ರಶಸ್ತಿ ಪಡೆದ 75 ರೈತರ ಕುರಿತು ಹೊರತರಲಾದ ಕಿರುಪರಿಚಯ ಪುಸ್ತಕ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಸಿಇಒ ದಿಲಿಷ್ ಸಸಿ, ಪಾಲಿಕೆ ಆಯುಕ್ತ ಸುಧಾಕರ ಲೋಖಂಡೆ, ನಿವೃತ್ತ ಕುಲಪತಿ ಡಾ| ಎಸ್.ಎ ಪಾಟೀಲ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಂಟಿ ಕೃಷಿ ನಿರ್ದೇಶಕ ಡಾ| ರತೇಂದ್ರನಾಥ ಸುಗೂರ, ಉಪನಿರ್ದೇಶಕಿ ಡಾ| ಅನುಸೂಯಾ ಹೂಗಾರ, ಸಮದ ಪಟೇಲ್, ಕೃಷಿ ವಿಜ್ಞಾನಿ ಡಾ| ರಾಜು ತೆಗ್ಗಳ್ಳಿ ಮುಂತಾದವರಿದ್ದರು.