Advertisement

ಕಲ್ಲರ್ಪೆ ಶ್ಮಶಾನ ಕಾಮಗಾರಿಯಲ್ಲಿ ಅವ್ಯವಹಾರ

06:30 AM Jul 21, 2017 | Harsha Rao |

ನರಿಮೊಗರು:ಆರ್ಯಾಪು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕಲ್ಲರ್ಪೆ ಸಮೀಪ ಗ್ರಾ.ಪಂ.ನಿಂದ ನಿರ್ಮಾಣವಾಗುವ ಶ್ಮಶಾನ ಕಾಮಗಾರಿಯಲ್ಲಿ ಅವ್ಯವಾಹರ ನಡೆದಿದೆ ಎಂದು ಗ್ರಾಮಸ್ಥರೋರ್ವರು ಆರೋಪಿಸಿದ ಘಟನೆ ಆರ್ಯಾಪು ಗ್ರಾಮ ಸಭೆಯಲ್ಲಿ ನಡೆದಿದೆ.

Advertisement

ಸಭೆಯು ಆರ್ಯಾಪು ಗ್ರಾಮ ಪಂಚಾಯತ್‌ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಮರಿಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥ ಕೇಶವ ಅವರು, ಶ್ಮಶಾನಕ್ಕೆ ಕಾದಿರಿಸಿದ ಜಾಗದಲ್ಲಿ ಹತ್ತು ವರ್ಷಗಳ ಹಿಂದೆಯೇ ಸಮತಟ್ಟು ಮಾಡಲಾಗಿದೆ. ಇದೀಗ ಮತ್ತೆ ಅದೇ ಜಾಗದಲ್ಲಿ ಅಲ್ಪಸ್ವಲ್ಪ ಕಾಮಗಾರಿ ನಡೆಸಿ, ಬೋಗಸ್‌ ಬಿಲ್‌ ಮಾಡಿ ಅಭಿವೃದ್ದಿ ಕಾಮಗಾರಿಗಾಗಿ ಮೀಸಲಿರಿಸಿದ ಹಣವನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಆರೋಪಿಸಿದರು ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್‌ ಎಂಜಿನಿಯರ್‌ ಇಲಾಖೆಯ ಅಧಿಕಾರಿ, ಶ್ಮಶಾನದ ಕಾಮಗಾರಿಯಲ್ಲಿ ಹಣ ದುರುಪಯೋಗವಾಗಿಲ್ಲ.ಸರಿಯಾದ ರೀತಿಯಲ್ಲಿ ನಿಯಾಮನುಸಾರ ಕಾಮಗಾರಿಗೆ ಬಿಲ್‌ ಪಾವತಿಸಲಾಗಿದೆ ಎಂದರು. 

ಗ್ರಾ.ಪಂ. ಸದಸ್ಯ ಜಯಂತ ಶೆಟ್ಟಿ ಮಾತನಾಡಿ, ಶ್ಮಶಾನದ ಜಾಗದ ಭದ್ರತೆ ಹಾಗೂ ವ್ಯವಸ್ಥೆಯ ಹಿತದೃಷ್ಟಿಯಲ್ಲಿ ಕಾಮಗಾರಿ ನಡೆಸಲಾಗಿದೆ. ವೃಥಾ ಆರೋಪ ಸರಿಯಲ್ಲ ಎಂದರು. 

ಗ್ರಾ.ಪಂ. ಉಪಾಧ್ಯಕ್ಷ ವಸಂತ್‌ ಮಾತನಾಡಿ, ಶ್ಮಶಾನಕ್ಕೆ ಸಂಬಂಧಪಟ್ಟ ಜಾಗವನ್ನು ಅಳತೆ ಮಾಡಿ, ಗಡಿಗುರುತು ಮಾಡಿ ಭದ್ರಪಡಿಸಲಾಗಿದೆ. ಕಟ್ಟಡ ಕಾಮಗಾರಿ ಆರಂಭವಾಗಬೇಕಿದೆ ಎಂದರು.

Advertisement

ಚರ್ಚಾ ನಿಯಂತ್ರಣಾಧಿಕಾರಿ ನರೇಗಾದ ಸಹಾಯಕ ನಿರ್ದೇಶಕ  ನವೀನ್‌ ಭಂಡಾರಿ ಮಾತನಾಡಿ, ಅವ್ಯವಹಾರ ನಡೆದಿದ್ದರೆ ಕಾನೂನು ಮೂಲಕ ಹೋರಾಟ ನಡೆಸಬಹುದು ಎಂದರು.

ಜಾಗಕ್ಕೆ ಅಕ್ರಮ ಎಂದು ನೋಟಿಸ್‌
ಪಟ್ಟಾ ಜಾಗವನ್ನು ಅಕ್ರಮ ಎಂದು ಗ್ರಾಮ ಪಂಚಾಯತ್‌ ನಿಂದ ಗ್ರಾಮಸ್ಥರೊಬ್ಬರಿಗೆ  ನೋಟಿಸ್‌ ನೀಡಿದ ವಿಚಾರ ಗ್ರಾಮ ಸಭೆಯಲ್ಲಿ  ತೀವ್ರ ಕೋಲಾಹಲ, ಗದ್ದಲಕ್ಕೆ ಎಡೆಮಾಡಿತು. ಗ್ರಾಮಸ್ಥ  ರಿಯಾಜ್‌ ಎಂಬವರಿಗೆ  ಗ್ರಾಮ ಪಂಚಾಯತ್‌ನಿಂದ ನೋಟಿಸ್‌ ನೀಡಿ, ಅವರ ಜಾಗವನ್ನು ಅಕ್ರಮ ಎಂದು ಸಾಮಾನ್ಯ ಸಭೆಯಲ್ಲಿ  ನಿರ್ಣಯಿಸಿ, ಒತ್ತುವರಿ ಮಾಡಿರುವ 5 ಸೆಂಟ್ಸ್‌ ಜಾಗವನ್ನು ಬಿಟ್ಟುಕೊಡುವಂತೆ, ಅಲ್ಲಿ ಕಂಪೌಂಡ್‌ ಕಟ್ಟದಂತೆ ನೋಟಿಸ್‌ ಕಳುಹಿಸಲಾಗಿತ್ತು. ಈ ವಿಚಾರ ಸಾಕಷ್ಟು ಗದ್ದಲವನ್ನು ಉಂಟುಮಾಡಿತ್ತು.

ಸುಮಾರು 40 ವರ್ಷಗಳಿಂದ ತಾನು ವಾಸವಿರುವ  10 ಸೆಂಟ್ಸ್‌ ನಿವೇಶನದ ಪಹಣಿ ಪತ್ರವೂ ತನ್ನ  ಹೆಸರಿನಲ್ಲಿದೆ. ಆದರೂ ಯಾರೋ ಪಂಚಾಯತ್‌ಗೆ ಸುಳ್ಳುದೂರು ನೀಡಿದ್ದಾರೆ. ಅದನ್ನು  ಪರಾಮರ್ಶಿಸದೇ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಅಕ್ರಮ ಎಂದು ನೋಟಿಸ್‌ ನೀಡಿದ್ದು ಸರಿಯಲ್ಲ ಎಂದು ಗ್ರಾಮಸ್ಥ ರಿಯಾಝ್ ಸಭೆಯ ಗಮನ ಸೆಳೆದರು.
ಈ ವಿಚಾರವಾಗಿ ಗದ್ದಲ, ಚರ್ಚೆ, ಪ‌ರ ವಿರೋಧ ಕಂಡುಬಂತು. ಬಳಿಕ ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷೆ ಗೀತಾ ಅವರು, ಸಾರ್ವಜನಿಕ ದೂರಿನ ಮೇರೆಗೆ ತಪ್ಪಾಗಿ ನೋಟಿಸ್‌ ನೀಡಿರಬಹುದು. ವಾರದಲ್ಲಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು.

ಮೆಸ್ಕಾಂ ಜೆಇ ರಾಜೇಶ್‌, ಪುತ್ತೂರು ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯ ಅವರು ಇಲಾಖಾವಾರು ಮಾಹಿತಿ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯತ್‌ ಸ‌ದಸ್ಯ ಸಾಜ ರಾದಾಕೃಷ್ಣ ಆಳ್ವ, ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ವಸಂತ್‌, ಸದಸ್ಯರಾದ ವಿಜಯ ಬಿ.ಎಸ್‌., ಸೂರ್ಯನಾರಯಣ,ರಮೇಶ್‌, ವಿಶ್ವನಾಥ ಗೌಡ, ರೇಖಾನಾಥ ರೈ, ಅಬ್ದುಲ್‌ ಜಬ್ಟಾರ್‌, ಭಾರತಿ, ವಿನಯ ನಾೖಕ್‌, ಕುಸುಮಾ, ಜಯಂತಿ, ಜಯಲಕ್ಷ್ಮೀ ಕೊಲ್ಯ, ಸರಸ್ವತಿ, ಗಣೇಶ್‌ ಎಂ., ನಳಿನಿ ಕಾಂತಪ್ಪ ಸವಿತಾ ಉಪಸ್ಥಿತರಿದ್ದರು. 

ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಗದೀಶ್‌ ಸ್ವಾಗತಿಸಿ, ಕಾರ್ಯದರ್ಶಿ ಪದ್ಮಾ ಕುಮಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next