ಕಲಬುರಗಿ: ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗೆ ಆರೋಗ್ಯ ಕಲ್ಪಿಸುವ ಆಯುಷ್ಮಾನ್ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಪಂ ಸದಸ್ಯ ದಿಲೀಪ ಆರ್. ಪಾಟೀಲ ಕರೆ ನೀಡಿದರು.
ಭಾರತ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಪಂ, ತಾಪಂ, ತಾಲೂಕು ಆರೊಗ್ಯ ವೈದ್ಯಾಧಿಕಾರಿಗಳ ಕಾರ್ಯಾಲಯ, ಶಿಶು ಅಭಿವೃದ್ಧಿ ಯೋಜನೆ , ಪ್ರಾಥಮಿಕ ಆರೋಗ್ಯ ಕೇಂದ್ರ, ಫರತಾಬಾದ ಗ್ರಾಪಂ, ಕೌಲಗಾ (ಬಿ) ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಹಾಗರಗುಂಡಗಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಆಯುಷ್ಮಾನ್ ಭಾರತ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರವೀಣಕುಮಾರ ಮಾತನಾಡಿ, ಆಯುಷ್ಮಾನ್ ಭಾರತ ವಿಶ್ವದಲ್ಲಿಯೇ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮವಾಗಿದೆ. ಈ ಯೋಜನೆ ಗ್ರಾಮೀಣ, ನಗರ ಪ್ರದೇಶದ ಬಡ ರೈತರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಉಪಯುಕ್ತವಾಗಲಿದೆ. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತರು ತಾಯಂದಿರ ಸಭೆಯಲ್ಲಿ ಮಾಹಿತಿ ನೀಡಬೇಕು ಎಂದರು.
ಫರತಾಬಾದ ಪ್ರಾಥಮಿಕ ಆರೋಗ್ಯ ಅಧಿಕಾರಿಗಳಾದ ಡಾ| ಪ್ರವೀಣಕುಮಾರ ಮಾತನಾಡಿ, ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಹೃದಯ ಬೈಪಾಸ್, ಸರ್ಜರಿ, ಮಂಡಿ ಚಿಪ್ಪು ಅಳವಡಿಕೆ, ಕ್ಷಯ ರೋಗ ಮುತಾಂದವುಗಳಿಗೆ 5ಲಕ್ಷ ರೂ. ವರೆಗೆ ನೆರವು ಸಿಗಲಿದೆ ಎಂದು ಹೇಳಿದರು.
ಐಸಿಡಿಎಸ್ ಮೇಲ್ವಿಚಾರಕಿ ಗೀತಾ ಚಹ್ವಾಣ, ಕೌವಲಗಾ (ಬಿ) ಪಂಚಾಯತ್ ಅಭಿವೃ ದ್ಧಿ ಅಧಿಕಾರಿಗಳಾದ ಮಾಳಪ್ಪ ನಾಯ್ಕೋಡಿ, ಹಾಗರಗುಂಡಗಿ ಪ್ರೌಢಶಾಲೆ ಮುಖ್ಯಶಿಕ್ಷಕ ರೇವಣಸಿದ್ದಪ್ಪ ಶಿವಸಿಂಪಿ ಆಯುಷ್ಮಾನ ಭಾರತ ಹಾಗೂ ತಾಯಿ ಭಾಗ್ಯ, ಕಿಶೋರಿಯರ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಕೌಲಗಾ (ಬಿ) ಗ್ರಾಪಂ ಅಧ್ಯಕ್ಷೆ ಅಯ್ಯಮ್ಮ ಹಣಮಂತ ಸುಬೇದಾರ ಅಧ್ಯಕ್ಷತೆ ವಹಿಸಿದ್ದರು. ಹಾಗರಗುಂಡಗಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೇಶವಸಿಂಗ್ ರಾಠೊಡ, ಎಸ್‌ಡಿಎಂಸಿ ಅಧ್ಯಕ್ಷ ಭೀಮಾಶಂಕರ ಮರತೂರ ಹಾಗೂ ಗ್ರಾಪಂ ಸದಸ್ಯರು ಇದ್ದರು. ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಸಹಾಯಕ ನಾಗಪ್ಪ ಅಂಬಾಗೋಳ ಸ್ವಾಗತಿಸಿದರು. ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.