Advertisement

ಬತ್ತದ ಕೆರೆಗೆ ಮೊರೆ ಹೋಗಲು ಕರೆ

01:00 AM Mar 14, 2019 | Harsha Rao |

ಬೆಳ್ಮಣ್‌: ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮ ಪಂಚಾಯತ್‌ನಲ್ಲಿ ನೀರಿನ ಕೊರತೆ ಬಾಧಿಸುತ್ತಿದ್ದು, ಜನರ ಬವಣೆ ನೀಗಿಸಲು ಪಂಚಾಯತ್‌ ಆಡಳಿತ ಸೂಕ್ತ ಕ್ರಮ ಕೈಗೊಳ್ಳುವತ್ತ ಮನ ಮಾಡಿದೆ.

Advertisement

ಪಂಚಾಯತ್‌ನ ಮಾವಿನಕಟ್ಟೆ ಪರಿಸರಕ್ಕೆ ಸುಮಾರು 12 ದಿನಗಳಲ್ಲಿ ಟ್ಯಾಂಕರ್‌ ಮೂಲಕ ನೀರು ನೀಡಲಾಗಿದೆ. ಆ ಬಳಿಕ ನೂತನ ಬೋರ್‌ವೆಲ್‌ ಒಂದನ್ನು ನಿರ್ಮಿಸಿದ್ದು ನೀರಿನ ಸಮಸ್ಯೆಗೆ ಮುಕ್ತಿ ನೀಡಿದೆ.  ಇನ್ನೂ ಕೆಲವೊಂದು ಪ್ರದೇಶದಲ್ಲಿ ಬಹುಬೇಗನೇ ನೀರಿನ ಸಮಸ್ಯೆ ತಲೆದೋರುವ ಸಂಭವವಿದ್ದು ಪೂರ್ವಭಾವಿಯಾಗಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಅಲೋಚನೆಗಳನ್ನು ನಡೆಸುತ್ತಿದೆ.

ಕೆರೆಗಳಿಗೆ ಕಾಯಕಲ್ಪ ನೀಡಲು ಆಗ್ರಹ
ನಂದಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಕೆರೆಗಳಿದ್ದು ಸರಿಯಾದ ನಿರ್ವಹಣೆಯನ್ನು ಮಾಡಿದಲ್ಲಿ ಸಂಪೂರ್ಣ ಗ್ರಾಮದ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಬಲ್ಲದೆಂಬುದು ಇಲ್ಲಿನ ಜನರ ಅಭಿಪ್ರಾಯ. ಈ ಪ್ರದೇಶದಲ್ಲಿ ಸರಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ಒಟ್ಟು 22ಕ್ಕೂ ಅಧಿ ಕ ಕೆರೆಗಳಿವೆ. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಬಹುಬೇಗನೆ ಬತ್ತಿ ಹೋಗಿವೆ. ಗೋಳಿಕಟ್ಟೆ, ಕಕ್ಕೆಪದವು, ಆರ್ಯಾಡ್‌, ಕೆದಿಂಜೆ ಪಕಲ, ಮಾವಿನಕಟ್ಟೆ ಪ್ರದೇಶಗಳಿಗೆ ಪ್ರತೀ ಬೇಸಗೆ  ಹಾಗೂ ಮಳೆಗಾಲದ ಸಂದರ್ಭ ಪಂ. ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದೆ.

ಬೋರ್‌ವೆಲ್‌ ಕೂಡಾ ಬೋರ್‌ ಹೊಡೆಸಿದೆ
ಮಾವಿನಕಟ್ಟೆಗೆ ನೀರು ಪೂರೈಸುವ ಬೋರ್‌ವೆಲ್‌ನಲ್ಲಿ ಅಂತರ್ಜಲ ಮಟ್ಟ ಕುಸಿತಗೊಂಡಿರುವ ಹಿನ್ನೆಲೆಯಲ್ಲಿ  ಈ ಭಾಗದಲ್ಲಿ ನೀರಿನ ತೊಂದರೆ ಉಂಟಾಗಿತ್ತು. ಆದರೆ ಸಕಾಲಿಕವಾಗಿ ಸ್ಪಂದಿಸಿದ ಸ್ಥಳೀಯಾಡಳಿತ ಇದೀಗ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದೆ. ಆದರೂ ಕೆಲವೊಂದು ಸಂದರ್ಭದಲ್ಲಿ ಸರಿಯಾದ ವೇಳೆಯಲ್ಲಿ ಗ್ರಾಮಸ್ಥರಿಗೆ ನೀರು ಪೂರೈಕೆಯಾಗುತ್ತಿಲ್ಲ. ನೀರು ತಲುಪುವಾಗ ರಾತ್ರಿ 10 ಗಂಟೆಯಾಗುತ್ತದೆ ಎಂಬ ಅಳಲು ಇಲ್ಲಿನ ಜನರದ್ದು.

ಕೆರೆಗಳಿಗೆ ಮೊರೆ ಹೋಗಲು ಕರೆ
ನೀರಿನ ಸಮಸ್ಯೆಗಳಿಗೆ ಶಾಶ್ವತ  ಪರಿಹಾರಕ್ಕಾಗಿ ಈ ಭಾಗದ ಕೆರೆಗಳ ನಿರ್ವಹಣೆಯತ್ತ ಗಮನ ಹರಿಸಿ ಎಂದು ಜನರು ಮನವಿ ಮಾಡಿದ್ದಾರೆ.  ಬಹುದೊಡ್ಡ ಕೆರೆಗಳ ಪೈಕಿ ಮಜಲ ಕೆರೆ ವಿಸ್ತಾರವಾಗಿದ್ದು ನೀರಿನ ಒರತೆಯೂ ಹೆಚ್ಚಿದೆ. ಇಲ್ಲಿ  ವರ್ಷ ಪೂರ್ತಿ ನೀರು ತುಂಬಿರುತ್ತದೆ. ಸುಮಾರು 12 ವರ್ಷಗಳ ಹಿಂದೆ ಹೂಳೆತ್ತುವ ಕಾರ್ಯ ಮಾಡಿದ್ದು ಆ ಬಳಿಕ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಇದೀಗ ಮತ್ತೆ ಹೂಳು ತುಂಬಿದ್ದು, ನೀರಿನ ಪ್ರಮಾಣವೂ ಕಡಿಮೆಯಾಗುತ್ತಿದೆ. ಮಜಲ ಕೆರೆಯಿಂದಾಗಿ ಇಲ್ಲಿನ ಕೃಷಿಕರಿಗೆ ಹಾಗೂ ಪರಿಸರದ ಮನೆಯ ಬಾವಿಗಳಲ್ಲಿ ನೀರಿನ ಒರತೆಯೂ ಹೆಚ್ಚಿತ್ತು. ಇದೀಗ ನಿರ್ವಹಣೆಯ ಕೊರತೆಯಿಂದಾಗಿ ಮತ್ತೆ ಸಮಸ್ಯೆ ಉಂಟಾಗಿದೆ. ಈ ಕೆರೆಯನ್ನು ಸಂಬಂ ಧಿಸಿದ ಇಲಾಖೆ ಸರಿಯಾಗಿ ಅಭಿವೃದ್ದಿ ಪಡಿಸಿದ್ದಲ್ಲಿ ಇಡೀ ನಂದಳಿಕೆ ಗ್ರಾಮಕ್ಕೆ ನೀರು ಪೂರೈಕೆಯನ್ನು ಮಾಡುವ ಯೋಜನೆಯನ್ನು ಇಲ್ಲಿ ಅಳವಡಿಸಬಹುದಾಗಿದೆ. 

Advertisement

ನಂದಳಿಕೆ ಗೋಳಿಕಟ್ಟೆಯ ಬಳಿಯಲ್ಲಿರುವ ಗುರುಬೆಟ್ಟು ಕೆರೆ , ಕೆದಿಂಜೆ ಮುಜಲೊಟ್ಟು ಕೆರೆಗಳು ಈಗಾಗಲೇ ಬತ್ತಿ ಹೋಗಿದ್ದು ನೀರಿನ ಸಮಸ್ಯೆ ಕಾಡುವ ಬಗ್ಗೆ ಆತಂಕ ಎದುರಾಗಿದೆ. 

ನದಿಯಿಲ್ಲದ ನಾಡು ನಂದಳಿಕೆ
ನಂದಳಿಕೆ ಗ್ರಾಮದ ಸುತ್ತಮುತ್ತ ಎಲ್ಲೂ ನದಿಯ ಮೂಲಗಳು ಇಲ್ಲದ ಪರಿಣಾಮ ಕೇವಲ ಕೊಳವೆ ಬಾವಿ, ತೆರೆದ ಬಾವಿ ಹಾಗೂ ಕೆರೆಗಳಿಂದ ಮಾತ್ರ ನೀರಿನ ಸಮಸ್ಯೆಯನ್ನು ದೂರಮಾಡಬಹುದಾಗಿದೆ. ಇಡೀ ಗ್ರಾಮದಲ್ಲಿನ ಸಮಗ್ರ ಕೆರೆಗಳ ನಿರ್ವಹಣೆ ಹಾಗೂ ಅಭಿವೃದ್ದಿಯಲ್ಲಿ ಜನಪ್ರತಿನಿಧಿಗಳು ಹಾಗೂ ಖಾಸಗಿ ಮಾಲಕರು ಹಾಗೂ ಇಲಾಖಾಧಿಕಾರಿಗಳು ಗಮನಹರಿಸಬೇಕಾಗಿದೆ.

ನೀರಿನ ಸಮಸ್ಯೆಗೆ ಮೊದಲ ಆದ್ಯತೆ
ದೊಡ್ಡ ಪ್ರಮಾಣದಲ್ಲಿ  ಅಲ್ಲದಿದ್ದರೂ ಇಲ್ಲಿ ನೀರಿನ ಸಮಸ್ಯೆ ಇದೆ. ಆದರೂ ಶ್ರಮ ವಹಿಸಿ ಪಂಚಾಯತ್‌ ವತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಸ್ಥರಿಗೆ ನೀರು ಪೂರೈಕೆಯಾಗುವಂತೆ ಮಾಡಲಾಗುತ್ತಿದೆ. ತೊಂದರೆಯಾದ ಕಡೆ ಟ್ಯಾಂಕರ್‌ ಮೂಲಕ ನೀರನ್ನು ನೀಡಿದ್ದೇವೆ. ಪಂಚಾಯತ್‌ ವತಿಯಿಂದ ನೀರಿನ ಸಮಸ್ಯೆಗೆ ಮೊದಲ ಆದ್ಯತೆ ನೀಡಲಾಗುವುದು.
-ಜಯಂತಿ,,  ನಂದಳಿಕೆ  ಗ್ರಾಮ ಪಂಚಾಯತ್‌ ಅಧ್ಯಕ್ಷೆ.

ಸೂಕ್ತ ಸ್ಪಂದನೆ
ನಮ್ಮೂರ ಕೆರೆಗಳ ಪುನಶ್ಚೇತನದಿಂದ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯ. ಈ ಬಗ್ಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ. ಪಂಚಾಯತ್‌ ಆಡಳಿತ ಸೂಕ್ತ ಸ್ಪಂದನೆ ನೀಡಿದೆ.
-ಪ್ರದೀಪ್‌,  ನಂದಳಿಕೆ

Advertisement

Udayavani is now on Telegram. Click here to join our channel and stay updated with the latest news.

Next