ಯಾದಗಿರಿ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ್ 24 ಮತ್ತು 25ರಂದು ಹಿಂದಿ ಪ್ರಚಾರ ಸಭಾ ಆವರಣದಲ್ಲಿ ನಡೆಯಲಿರುವ 4ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಾಹಿತಿ ಅಯ್ಯಣ್ಣ ಹುಂಡೇಕಾರ ಬಿಡುಗಡೆಗೊಳಿಸಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ
ಪತ್ರಿಕಾಗೋಷ್ಠಿಯಲ್ಲಿ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಗಡಿ ಭಾಗದ ಜಿಲ್ಲೆಯಲ್ಲಿ ಕನ್ನಡ ಡಿಂಡಿಮ ಮೊಳಗಿಸಿ ನಾಡು ನುಡಿಯ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಶಹಾಪುರ ಸಾಹಿತಿ ಸಿದ್ದರಾಮ ಹೊನ್ಕಲ್ ಸರ್ವಾಧ್ಯಕ್ಷರಾಗಿರುವ ಈ ಸಮ್ಮೇಳನವನ್ನು ನಾಡಿನ ಹೆಸರಾಂತ ಸಾಹಿತಿ ಡಾ| ಸೋಮಶೇಖರ ಉದ್ಘಾಟಿಸಲಿದ್ದು, ಪ್ರಸ್ತುತ ವಿದ್ಯಾಮಾನಗಳು, ವರ್ತಮಾನದ ಸಮಸ್ಯೆಗಳು, ಮಹಿಳಾ ಪರ ಚಿಂತನೆಗಳು, ಮಾಧ್ಯಮಗಳ ಪ್ರಸ್ತುತತೆ ಜಿಲ್ಲೆಯ ಮತ್ತು ಹೈಕ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಮತ್ತು
ನಾಡಿನ ಅನೇಕ ವಿದ್ವಾಂಸರನ್ನು ಆಹ್ವಾನಿಸಲಾಗಿದೆ ಎಂದರು.
ಕವಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಎರಡು ಕವಿಗೋಷ್ಠಿ ಏರ್ಪಡಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ದುಡಿದ ಮಹನೀಯರನ್ನು ಸತ್ಕರಿಸಲಾಗುವುದು. ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಸಮ್ಮೇಳನದ ಮೆರಗು ಹೆಚ್ಚಿಸಲಿವೆ ಎಂದರು.
ಜಿಲ್ಲೆಯ ಮಠಾಧಿಧೀಶರು, ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗಿದ್ದು, ಆಮಂತ್ರಣ ಪತ್ರಿಕೆ ಅಂತಿಮ ಹಂತದಲ್ಲಿದೆ. ಬೃಹತ್ ವೇದಿಕೆ ಸಿದ್ಧಪಡಿಸಲಾಗುತ್ತಿದ್ದು, ಎರಡು ದಿನಗಳ ಕಾಲ ರುಚಿಕರ ಊಟೋಪಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಮ್ಮೇಳನ ಯಶಸ್ವಿಗೆ ಮಾಧ್ಯಮದವರು ಒಳಗೊಂಡಂತೆ ಎಲ್ಲರೂ ಸಹಕರಿಸಲು ಮನವಿ ಮಾಡಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ| ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ನುಡಿ ಜಾತ್ರೆಯನ್ನು ಸ್ಮರಣೀಯವಾಗಿಸಲು ಶ್ರಮಿಸಲಾಗುತ್ತಿದ್ದು, ಸಮ್ಮೇಳನದ ಲಾಂಛನ ಚಿಂತನಳ್ಳಿಯ ಗವಿಸಿದ್ಧಲಿಂಗೇಶ್ವರ, ಗುರುಮಠಕಲ್ ಜಲಪಾತ, ಯಾದಗಿರಿ ಐತಿಹಾಸಿಕ ಕೋಟೆ, ಶಹಾಪುರದ ಬುದ್ಧ ಮಲಗಿದ ದೃಶ್ಯ, ಗೋಗಿಯ ಚಂದಾ ಹುಸೇನಿ, ಸುರಪುರದ ವೇಣುಗೋಪಾಲ ಸ್ವಾಮಿ ಗುಡಿ, ಜಿಲ್ಲೆಯ ಪ್ರಮುಖ ಬೆಳೆ ಭತ್ತ ಹೀಗೆ ನಮ್ಮ ಜಿಲ್ಲೆಯ ಹಿರಿಮೆಯನ್ನು ಸಾರುವ ಪರಿಯಲ್ಲಿ ಅದನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ, ಡಾ| ಭೀಮರಾಯ ಲಿಂಗೇರಿ, ನಾಗೇಂದ್ರ ಜಾಜಿ, ನೂರಂದಪ್ಪ ಲೇವಡಿ, ಬಸವಂತ್ರಾಯಗೌಡ ಮಾಪಾ ಸಿಎಂ ಪಟ್ಟೇದಾರ, ಬಸವರಾಜ ಮೋಟ್ನಳ್ಳಿ, ದೇವರಾಜ ವರ್ಕನಳ್ಳಿ, ಆರ್. ಮಹಾದೇವಪ್ಪ ಅಬ್ಬೆತುಮಕೂರು, ಚನ್ನಪ್ಪ ಠಾಣಾಗುಂದಿ, ಡಾ| ಎಸ್. ಎಸ್. ನಾಯಕ, ಲಾಂಛನವನ್ನು ವಿನ್ಯಾಸಗೊಳಿಸಿದ ಈ ಭಾಗದ ಖ್ಯಾತ ಚಿತ್ರ ಕಲಾವಿದ ಸಂಗಣ್ಣ ದೋರನಳ್ಳಿ ಇದ್ದರು.
ಈ ಸಂದರ್ಭದಲ್ಲಿ ಸಮ್ಮೇಳನ ಕಾರ್ಯಕಾರಿ ಸಮಿತಿ ಸದಸ್ಯರಾದ ಅಯ್ಯಣ್ಣ ಹುಂಡೇಕಾರ, ಬಸವಂತರಾಯಗೌಡ, ನಾಗೇಂದ್ರ ಜಾಜಿ ಇದ್ದರು.