Advertisement

ಕರೆ ಮಾಡಿ ಚಿಕಿತ್ಸೆಗಾಗಿ ಅಂಗಲಾಚಿದರೂ ಸ್ಪಂದನೆಯಿಲ್ಲ

08:53 AM Jul 19, 2020 | Suhan S |

ಬೆಂಗಳೂರು: ಸಕಾಲಕ್ಕೆ ಬಾರದ ಆ್ಯಂಬುಲೆನ್ಸ್‌, ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೆ ಚಿಕಿತ್ಸೆಗಾಗಿ ನಿಲ್ಲದ ರೋಗಿಗಳ ಪರದಾಟ, ಶವಗಳನ್ನು ಹೊತ್ತು ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತ ಆ್ಯಂಬುಲೆನ್ಸ್‌ಗಳು..! ನಗರದಲ್ಲಿ ಶನಿವಾರ ಕಂಡುಬಂದ ದೃಶ್ಯಗಳಿವು.

Advertisement

ಪಾಲಿಕೆ ಸಹಾಯವಾಣಿ ಆರಂಭಿಸಿದೆ. ಆದರೆ, ಅದು ಹೆಸರಿಗೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಅದನ್ನು ನಂಬಿ ಆ್ಯಂಬುಲೆನ್ಸ್ ಗೆ ಕರೆ ಮಾಡಿದರೆ, “ಬೆಡ್‌ ಖಾಲಿ ಇಲ್ಲ’ ಎಂಬ ಉತ್ತರ ಬರುತ್ತದೆ. ಹೀಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದವರ ಅಂತ್ಯಸಂಸ್ಕಾರಕ್ಕೂ ಸಂಬಂಧಿಕರಿಗೆ ಅವಕಾಶ ಸಿಗುತ್ತಿಲ್ಲ. ಹಲವು ದಿನ ಗಳಿಂದ ಈ ಸ್ಥಿತಿ ಪುನರಾವರ್ತನೆಯಾಗುತ್ತಿದೆ. ವಿವಿ ಪುರದ ಮನೆಯೊಂದರಲ್ಲಿರುವ ಎಲ್ಲ ಮೂವರಿಗೂ ಸೋಂಕು ತಗುಲಿದೆ. “ಮಂಗಳವಾರದಿಂದ ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದರೂ ಯಾರೂ ಸ್ಪಂದಿಸುತ್ತಿಲ್ಲ. ಇದರಿಂದ ನಮ್ಮ ತಾಯಿ ಅಸುನೀಗಿ ದ್ದಾರೆ. ಉಳಿದವರಿಗೆ ಸೋಂಕು ಇದ್ದು, ದಯವಿಟ್ಟು ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಂಗಲಾಚಿದರೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಯೂ ಕರೆಗೆ ಸ್ಪಂದಿಸುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್‌ ಖಾಲಿ ಇಲ್ಲ, ವೆಂಟಿಲೇಶನ್‌ ಇಲ್ಲ ಎಂದು ಸಬೂಬು ಹೇಳಿ, ನಾಲ್ಕು ದಿನ ಸತಾಯಿಸಿದ್ದಾರೆ’ ಎಂದು ಆ ಕುಟುಂಬದ ಸದಸ್ಯರು ಅಲವತ್ತುಕೊಂಡರು. “ಸೋಂಕು ಇದ್ದ ಕಾರಣ ಕೊನೆಗೆ ಬಿಬಿಎಂಪಿ ಅಧಿಕಾರಿಗಳೇ ಮೃತದೇಹ ವನ್ನು ಸಂಸ್ಕಾರ ಮಾಡಿದ್ದಾರೆ. ಬಿಬಿಎಂಪಿ ಹಾಗೂ ಸರ್ಕಾರ ಎಚ್ಚೆತ್ತುಕೊಂಡರೆ ನಮ್ಮ ತಾಯಿ ಬದುಕುತ್ತಿದ್ದರು’ ಎಂದು ಮಗ ಆಕ್ರೋಶ ವ್ಯಕ್ತಪಡಿಸಿದರು.

ಅಂತ್ಯಸಂಸ್ಕಾರಕ್ಕೆ ವಿದ್ಯುತ್‌ ಚಿತಾಗಾರಗಳಲ್ಲೂ ಸಮಸ್ಯೆ ಎದುರಾಗಿದೆ. ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವಸಂಸ್ಕಾರಕ್ಕೆ ಕನಿಷ್ಠ ಒಂದು ಗಂಟೆ ಸಮಯ ಹಿಡಿಯುತ್ತದೆ. ಇದರಿಂದ ವಿಲ್ಸನ್‌ ಗಾರ್ಡನ್‌, ಬನಶಂಕರಿ ಚಿತಾಗಾರ, ಸುಮ್ಮನಹಳ್ಳಿ, ಹೆಬ್ಟಾಳ ಚಿತಾಗಾರಗಳ ಮುಂದೆ ಕೋವಿಡ್‌ ಮೃತ ದೇಹ ಹೊತ್ತ ಆ್ಯಂಬುಲೆನ್ಸ್ ಗಳ ಸಾಲು ದಿನೇ ದಿನೆ ಹೆಚ್ಚುತ್ತಲೇ ಇದೆ. ಈ ಮಧ್ಯೆ “ವಿಕ್ಟೋರಿಯಾ ಆಸ್ಪತ್ರೆಗೆ ಬಂದರೆ ಕೋವಿಡ್ ಗುಣವಾಗುವುದಿಲ್ಲ. ಮತ್ತಷ್ಟು ಹೆಚ್ಚಾಗುತ್ತದೆ’ ಎಂದು ದಾಖಲಾಗಿರುವ ಸೋಂಕಿತೆಯೊಬ್ಬರು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕರೆ ಸ್ವೀಕರಿಸದ ಅಧಿಕಾರಿಗಳು :  ಆಸ್ಪತ್ರೆ ಬೆಡ್‌ ಮತ್ತು ಆ್ಯಂಬುಲೆನ್ಸ್ ಗಳ ಕೊರತೆ ಮುಂದುವರಿದಿದೆ. ಇದರಿಂದ ಹಲವಾರು ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಬಾಣಸವಾಡಿಯ 45 ವರ್ಷದ ಮಹಿಳೆಗೆ ಶುಕ್ರವಾರ ಸೋಂಕು ದೃಢಪಟ್ಟಿದ್ದು, ಪಾಲಿಕೆ ಅಧಿಕಾರಿಗಳು ಶನಿವಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ಸಂಜೆಯಾದರೂ ಆ್ಯಂಬುಲೆನ್ಸ್ ಬಂದಿಲ್ಲ. ಅದಕ್ಕಾಗಿ ಕರೆ ಮಾಡಿದರೆ, ಕರೆ ಸ್ವೀಕರಿಸುತ್ತಿಲ್ಲ ಎಂದು ಸೋಂಕಿತ ಮಹಿಳೆಯ ಸಹೋದರ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next