Advertisement

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

02:30 AM Oct 20, 2021 | Team Udayavani |

ಉಡುಪಿ: ಕಾಂಗ್ರೆಸ್‌ನ ಹಿರಿಯ ನಾಯಕ ಆಸ್ಕರ್‌ ಫೆರ್ನಾಂಡಿಸ್‌ ತಿಂಗಳ ಹಿಂದೆ ನಿಧನ ಹೊಂದಿರುವುದರಿಂದ ಅವರು ಹೊಂದಿರುವ ರಾಜ್ಯಸಭಾ ಸದಸ್ಯ ಸ್ಥಾನ ತೆರವಾಗಿದ್ದು ಅದರ ಭರ್ತಿಗೆ ಮಧ್ಯಾಂತರ ಚುನಾವಣೆ ನಡೆಯಲಿದೆಯೋ ಅಥವಾ ಅವಧಿ ಮುಗಿದ ಬಳಿಕ ಸಾಮಾನ್ಯ ಚುನಾವಣೆ ನಡೆಯಲಿದೆಯೋ ಎಂಬ ಚರ್ಚೆಗಳು ಆರಂಭವಾಗಿವೆ.

Advertisement

1980ರಿಂದ 2 ದಶಕ 5 ಬಾರಿ ಲೋಕಸಭೆಗೆ ಆಯ್ಕೆಯಾದ ಆಸ್ಕರ್‌ 2000ರ ಬಳಿಕ 2 ದಶಕ 4 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈಗ ಚಾಲ್ತಿಯಲ್ಲಿರುವ ರಾಜ್ಯಸಭಾ ಸದಸ್ಯತ್ವಕ್ಕೆ 2016 ಜೂ. 11ರಂದು ಚುನಾವಣೆ ನಡೆದಿತ್ತು. ಇದು ಕರ್ನಾಟಕದ ವಿಧಾನಸಭೆ ಸದಸ್ಯರಿಂದ ಆಯ್ಕೆಯಾಗಿರುವುದು. ಆಗ ಇವರೊಂದಿಗೆ ಕಾಂಗ್ರೆಸ್‌ನ ಜೈರಾಂ ರಮೇಶ್‌, ಕೆ.ಸಿ. ರಾಮಮೂರ್ತಿ, ಬಿಜೆಪಿಯ ನಿರ್ಮಲಾ ಸೀತಾರಾಮನ್‌ ಆಯ್ಕೆಯಾಗಿದ್ದರು. ಅದು ನಿಗದಿತ (ರೆಗ್ಯುಲರ್‌) ಚುನಾವಣೆಯಾಗಿದ್ದು ಆಗ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

8 ತಿಂಗಳಿಗೆ ಉಪಚುನಾವಣೆ?
ರಾಜ್ಯಸಭಾ ಸದಸ್ಯತ್ವದ ಅವಧಿ 6 ವರ್ಷಗಳದ್ದು. ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಅವಧಿ ನಿಗದಿಯಾಗುತ್ತದೆ. 2022ರ ಜೂ. 20ರ ವರೆಗೆ ಆಸ್ಕರ್‌ ಅವರ ಅವಧಿ ಇದೆ. ಆರು ತಿಂಗಳೊಳಗೆ ಸ್ಥಾನ ತೆರವಾದರೆ ಚುನಾವಣೆಯನ್ನು ಆಯೋಗ ನಡೆಸುವುದಿಲ್ಲ. ಈಗ ಅವಧಿ ಪೂರ್ಣಗೊಳ್ಳಲು ಸುಮಾರು 8 ತಿಂಗಳು ಇರುವುದರಿಂದ ಚುನಾವಣ ಆಯೋಗ ಚುನಾವಣೆ ನಡೆಸಲೂಬಹುದು. ಕೊರೊನಾ ಕಾರಣದಿಂದ ಇತರ ಚುನಾವಣೆಗಳ ಮೇಲೆ ಪರಿಣಾಮ ಬೀರಿದಂತೆ ಈ ಚುನಾವಣೆಗೂ ಅನ್ವಯವಾದರೆ ಕೇವಲ 8 ತಿಂಗಳಿಗೆ ಚುನಾವಣೆ ಸೂಕ್ತವಲ್ಲ ಎಂಬ ನಿರ್ಧಾರವನ್ನೂ ಕೈಗೊಳ್ಳಬಹುದು. ಇಂತಹ ಸಂದರ್ಭ ಚುನಾವಣೆಯನ್ನು ನಡೆಸುವುದೇ ಇಲ್ಲ ಎನ್ನಲಾಗದು. ಮಂಡ್ಯ ಲೋಕಸಭಾ ಸ್ಥಾನಕ್ಕೆ 2013ರಲ್ಲಿ ನಡೆದ ಉಪಚುನಾವಣೆಯಲ್ಲಿ ಚಿತ್ರ ನಟಿ ರಮ್ಯಾ ಆಯ್ಕೆಯಾಗಿದ್ದರು. ಆಗ ಇದ್ದ ಅವಧಿ ಕೇವಲ 10 ತಿಂಗಳು.

ಇದನ್ನೂ ಓದಿ:ಬಾಂಗ್ಲಾ ಹಿಂದುಗಳ ರಕ್ಷಣೆಗೆ ಸಿಎಎ ಬೇಕು: ಕಾಂಗ್ರೆಸ್‌ ನಾಯಕ ಮಿಲಿಂದ್‌ ದೇವ್ರಾ!

ಸೋಲು ಗೆಲುವಿನ ಲೆಕ್ಕ
ಈ ಸ್ಥಾನದ ಮತದಾರರು ಕೇವಲ ವಿಧಾನಸಭೆಯ ಸದಸ್ಯರು ಮಾತ್ರ. ಒಟ್ಟು 224 ಸದಸ್ಯರುಮತದಾರರು. ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದರೆ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಲು 45ಕ್ಕೂ ಹೆಚ್ಚು ಮತಗಳು ಬೇಕು. ಒಂದು ವೇಳೆ ಮಧ್ಯಾಂತರ ಉಪ ಚುನಾವಣೆ ನಡೆದರೆ ಅದು ತೆರವಾದ ಒಂದು ಸ್ಥಾನಕ್ಕೆ ಮಾತ್ರ ನಡೆಯುತ್ತದೆ. ಇವರೊಂದಿಗೆ ಆಯ್ಕೆಯಾದ ಇತರರ ಅವಧಿ ಇನ್ನೂ ಪೂರ್ಣಗೊಂಡಿಲ್ಲ. ಒಂದು ಸ್ಥಾನಕ್ಕೆ ಚುನಾವಣೆ ನಡೆದರೆ ಒಟ್ಟು 224 ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆದವರು ಗೆಲುವು ಸಾಧಿಸುತ್ತಾರೆ. ಹೀಗಾದರೆ ಕಾಂಗ್ರೆಸ್‌ನ 76 ಸದಸ್ಯರ ಬಲ ಅಭ್ಯರ್ಥಿಯ ಗೆಲುವು ಸಾಧಿಸಲು ಸಾಕಾಗುವುದಿಲ್ಲ. ಜೂನ್‌ನಲ್ಲಿ ನಿಗದಿತಸಮಯಕ್ಕೆ ಚುನಾವಣೆ ನಡೆದಾಗ ಕಾಂಗ್ರೆಸ್‌ನಿಂದ ಒಬ್ಬರು ಖಂಡಿತವಾಗಿ ಗೆಲುವು ಸಾಧಿಸಲಿದ್ದು ಇನ್ನೊಬ್ಬರು ಗೆಲುವು ಸಾಧಿಸಬೇಕಾದರೆ ಇತರರ ಮತ ಗಳಿಸಬೇಕಾಗುತ್ತದೆ. ಆದರೆ ಉಪಚುನಾವಣೆ ನಡೆದು ಯಾರೇ ಒಬ್ಬರು ಗೆದ್ದರೂ ಅವರ ಅವಧಿ 9 ತಿಂಗಳು ಮಾತ್ರ. ಆದ್ದರಿಂದ ಈ ಗೆಲುವು ಮಹತ್ವಪೂರ್ಣವಲ್ಲವಾದರೂ ರಾಜಕೀಯ ವರಸೆಗಳಲ್ಲಿ ಇದೂ ಮಹತ್ವ ಗಳಿಸುವ ಸಾಧ್ಯತೆಗಳಿವೆ. ನಿಗದಿತ ಸಮಯದಲ್ಲಿ ಚುನಾವಣೆ ನಡೆದರೆ ವಿಧಾನಸಭಾ ಸದಸ್ಯರ ಸಂಖ್ಯೆ ಮೇಲೆ ಫ‌ಲಿತಾಂಶ ಆಧರಿಸಿರುತ್ತದೆ. ಒಟ್ಟಾರೆ ಐದು ದಶಕಗಳಲ್ಲಿ ಆಸ್ಕರ್‌ ಇಲ್ಲದ ಮೊದಲ ಚುನಾವಣೆ ಇದಾಗುತ್ತದೆ.

Advertisement

ಅಭ್ಯರ್ಥಿ ಆದರೆ ಯಾರಾಗಬಹುದು?
ಆಸ್ಕರ್‌ ಅವರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂಬುದು ಈಗಲೇ ಹೇಳಲಾಗದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಅವರ ಮಗ ಅಥವಾ ಮಗಳು ಸ್ಪರ್ಧಿಸಲು ಪಕ್ಷ ಅವಕಾಶ ಕೊಡಬಹುದೆ ಎಂಬ ಪ್ರಶ್ನೆಯೂ ಏಳುತ್ತದೆ. ಆದರೆ ರಾಜ್ಯಸಭಾ ಸ್ಥಾನದ ಟಿಕೆಟನ್ನು ಪಕ್ಷದ ಹಿರಿಯ ನಾಯಕರಿಗೆ ಕೊಡುವುದು ಸಂಪ್ರದಾಯ. ಕಾಂಗ್ರೆಸ್‌ನಲ್ಲಿ ಸಾಕಷ್ಟು ಹಿರಿಯರು ಇರುವುದರಿಂದ ಯಾರೂ ಅಭ್ಯರ್ಥಿಯಾಗಬಹುದು.

ಆಸ್ಕರ್‌ ಫೆರ್ನಾಂಡಿಸ್‌ ಅವರು ಮೃತಪಟ್ಟ ಶೋಕದಲ್ಲಿ ನಾವಿದ್ದೇವೆ. ನಾವು ಇತರ ವಿಷಯಗಳ ಬಗ್ಗೆ ಗಮನ ಹರಿಸಿಲ್ಲ. ಜತೆಗೆ ನಮ್ಮ ಮಕ್ಕಳಿಗೂ ಇದರಲ್ಲಿ ಆಸಕ್ತಿ ಇಲ್ಲ.
– ಬ್ಲೋಸಮ್‌ ಫೆರ್ನಾಂಡಿಸ್‌,
ಆಸ್ಕರ್‌ ಅವರ ಪತ್ನಿ

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next