ವಿದಾನಸಭೆ: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದು ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಕಾನೂನು ಬಾಹಿರ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಸಿಎಜಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಆರ್ಥಿಕ ಮತ್ತು ರಾಜಸ್ವ ವಲಯದ ಲೆಕ್ಕಪರಿಶೋಧನೆ ನಡೆಸಿ ಮಹಾಲೇಖಪಾಲರು ನೀಡಿರುವ ವರದಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸರ್ಕಾರಕ್ಕೆ ಸುಳಿವನ್ನು ನೀಡಿದೆ. ಅಷ್ಟೇ ಅಲ್ಲ, ಇದರ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ತನಿಖೆ ನಡೆಸುವ ಅಗತ್ಯತೆಯಿದೆಯೆಂದೂ ಸಿಎಜಿ ತನ್ನ ವರದಿಯಲ್ಲಿ ಪ್ರತಿಪಾದಿಸಿದೆ.
ಕಳೆದ ವರ್ಷ 2017ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ರಾಜಸ್ವ ಸಂಗ್ರಹ ಕುರಿತಂತೆ ಸಿಎಜಿ ನೀಡಿದ ವರದಿಯನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಗಿದ್ದು, ಪರವಾನಿಗೆ ಇಲ್ಲದೇ ಖನಿಜ ರವಾನೆ ಮಾಡಲಾದ ಪ್ರಕರಣಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 51.45 ಕೋಟಿ ರೂ. ದಂಡ ವಿಧಿಸಲಾಗಿಲ್ಲವೆಂದು ತಿಳಿಸಲಾಗಿದೆ.
ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಕಷ್ಟು ಖನಿಜವನ್ನು ಸಾಗಾಣಿಕೆ ಮಾಡಲಾಗಿದೆ ಖಾಸಗಿ ಗಣಿಕಂಪನಿಗಳ ಗಣಿಗಾರಿಕೆಯ ಮೂಲಗಳನ್ನು ಖಚಿತಪಡಿಸಿಕೊಳ್ಳದೆಯೇ ಗಣಿ ಇಲಾಖೆ ರಾಜಧನ ವಿಧಿಸುತ್ತಿರುವುದು ಕಾನೂನು ಬಾಹಿರ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿರುವುದನ್ನು ಚಿತಪಡಿಸುವಂತಿದೆ ಎಂದು ಮಹಾಲೇಖಪಾಲರ ವರದಿಯಲ್ಲಿ ಹೇಳಲಾಗಿದೆ.
ಮೌಲ್ಯವರ್ಧಿತ ತೆರಿಗೆ,ರಾಜ್ಯ ಅಬಕಾರಿ, ವಾಹನಗಳ ಮೇಲಿನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ, ಭೂ ಕಂದಾಯ ನಿಗದಿಯಲ್ಲಿ 440.95 ಕೋಟಿ ರೂ.ಗಳಷ್ಟು ಕಡಿಮೆ ಪ್ರಮಾಣದ ತೆರಿಗೆ ವಿಧಿಸಲಾಗಿದೆ. ತೆರಿಗೆ ಸಂಗ್ರಹದ ವಿವಾದ ಕುರಿತ ಸುಮಾರು 2 ಸಾವಿರ ಕೋಟಿ ರೂ. ಮೊತ್ತದ ಪರೀಕ್ಷಣಾ ವರದಿಗೂ 2017 ರ ಜೂನ್ ತಿಂಗಳ ಅಂತ್ಯದಲ್ಲಿ ಇತ್ಯರ್ಥಗೊಳ್ಳದೆ ಬಾಕಿ ಉಳಿದಿದ್ದವು ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಿದೆ. ಡಿಸ್ಟಿಲರಿಗಳಲ್ಲಿ ಶುದಿಟಛೀಕರಿಸಲ್ಪಟ್ಟ ರೆಕ್ಟೀಫೈಡ್ ಸ್ಪಿರಿಟ್‌ಉತ್ಪತ್ತಿಗೆ ಸಂಬಂಧಿಸಿದಂತೆ ಪ್ರಮಾಣಕಗಳ ಪರಿಷ್ಕರಣೆಯನ್ನು ವಿಳಂಬ ಮಾಡಿದ್ದಕ್ಕೆ ( ಏಪ್ರಿಲ್ 2012 ರಿಂದ ಸೆಪ್ಟಂಬರ್ 2015 ರ ತನಕ) 12 ಡಿಸ್ಟಿಲರಿಗಳಿಂದ ರಾಜ್ಯ ಸರ್ಕಾರಕ್ಕೆ 64.84 ಕೋಟಿ ರೂ. ರಾಜಸ್ವದ ಸಂಭಾವ್ಯ ನಷ್ಟವನ್ನು ಸೂಚಿಸುತ್ತಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.