ನವದೆಹಲಿ: ಕ್ಯಾಡ್ಬರಿ ಉತ್ಪನ್ನಗಳಲ್ಲಿ ಗೋವಿನ ಪ್ರೋಟಿನ್ ಬಳಸುತ್ತಿದ್ದಾರೆ ಆರೋಪಕ್ಕೆ ಬ್ರಿಟಿಷ್ ಬಹುರಾಷ್ಟ್ರೀಯ ಚಾಕೋಲೇಟ್ ಕಂಪನಿ, ಇದೊಂದು ಊಹಾಪೋಹದ ವರದಿ. ಇಂತಹ ನೆಗೆಟಿವ್ ಪೋಸ್ಟ್ ಗಳಿಂದಾಗಿ ಕಂಪನಿಯ ಗೌರವಕ್ಕೆ ಧಕ್ಕೆ ತಂದಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಸೈಕಲ್ ನಲ್ಲಿ ಆಗಮಿಸಿದ ಟಿಎಂಸಿ ಸಂಸದರು
ಟ್ವೀಟ್ ನಲ್ಲಿ ಶೇರ್ ಮಾಡಲಾದ ಸ್ಕ್ರೀನ್ ಶಾಟ್ ಗಳು ಭಾರತದಲ್ಲಿ ತಯಾರಾದ ಮಾಂಡೆಲೆಜ್/ಕ್ಯಾಡ್ಬರಿ ಉತ್ಪನ್ನಗಳಿಗೆ ಸಂಬಂಧಿಸಿದ್ದಲ್ಲ. ಭಾರತದಲ್ಲಿ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಉತ್ಪನ್ನಗಳು ಶೇ.100ರಷ್ಟು ಸಸ್ಯಹಾರಿಯಾಗಿದೆ. ಚಾಕೋಲೇಟ್ ಹೊದಿಕೆ ಮೇಲಿನ ಹಸಿರು ಚುಕ್ಕೆ ಇದನ್ನು ಸೂಚಿಸುತ್ತದೆ ಎಂದು ಕ್ಯಾಡ್ಬರಿ ಸ್ಪಷ್ಟನೆ ನೀಡಿರುವುದಾಗಿ ವರದಿ ವಿವರಿಸಿದೆ.
ನಮ್ಮ ಉತ್ಪನ್ನಗಳ ಬಗ್ಗೆ ಈ ರೀತಿಯ ನೆಗೆಟಿವ್ ಪೋಸ್ಟ್ ಗಳು ಬಂದಾಗ ಗ್ರಾಹಕರ ವಿಶ್ವಾಸವನ್ನು ಹಾಳು ಮಾಡುತ್ತದೆ. ಜತೆಗೆ ನಮ್ಮ ಬ್ರ್ಯಾಂಡ್ ಗೌರವಕ್ಕೆ ಧಕ್ಕೆ ತರಲಿದೆ. ಇನ್ಮುಂದೆ ನಮ್ಮ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಇಂತಹ ಪೋಸ್ಟ್ ಗಳು ಬಂದಾಗ ಅದನ್ನು ಗ್ರಾಹಕರು ಪರಿಶೀಲಿಸಬೇಕಾಗಿ ವಿನಂತಿಸಿಕೊಳ್ಳುವುದಾಗಿ ಕ್ಯಾಡ್ಬರಿ ಕಂಪನಿ ತಿಳಿಸಿದೆ.
ಕ್ಯಾಡ್ಬರಿ ಚಾಕೋಲೇಟ್ (ಉತ್ಪನ್ನಗಳಲ್ಲಿ) ಗೋವಿನ ಕೊಬ್ಬನ್ನು ಉಪಯೋಗಿಸಲಾಗುತ್ತಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಕ್ಯಾಡ್ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ನೂರಾರು ಬಳಕೆದಾರರು ಕರೆ ಕೊಟ್ಟ ನಂತರ ಕಂಪನಿ ಈ ಸ್ಪಷ್ಟನೆಯನ್ನು ನೀಡಿರುವುದಾಗಿ ವರದಿ ಹೇಳಿದೆ.