ಬೆಂಗಳೂರು: ಪ್ರಿಯಕರನ ಜತೆ ಐಷಾರಾಮಿ ಜೀವನ ನಡೆಸಲು ಸ್ವಂತ ಮನೆಯಲ್ಲಿಯೇ ಕಳ್ಳತನ ಮಾಡಿದ ಮಹಿಳೆ ಹಾಗೂ ಆಕೆಯ ಪ್ರಿಯಕರ ಅಮೃತಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಕ್ಕೂರು ಲೇಔಟ್ ನಿವಾಸಿ ದೀಪ್ತಿ (24) ಮತ್ತು ಆಕೆಯ ಪ್ರಿಯಕರ ಅಮೃತಹಳ್ಳಿಯ ಓಲ್ಡ್ ಪೊಲೀಸ್ ಬಿಲ್ಡಿಂಗ್ ನಿವಾಸಿ ಸಿ.ಎನ್.ಮದನ್ (27) ಬಂಧಿತರು. ಅವರಿಂದ 36 ಲಕ್ಷ ರೂ. ಮೌಲ್ಯದ 725 ಗ್ರಾಂ ಚಿನ್ನಾಭರಣ, ಆರು ಲಕ್ಷ ರೂ. ಮೌಲ್ಯದ 3 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ದೀಪ್ತಿಗೆ ಈಗಾಗಲೇ ಮದುವೆಯಾಗಿದ್ದು, ಪತಿಯಿಂದ ದೂರವಾಗಿ ತಾಯಿ ಜತೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಜಕ್ಕೂರು ಲೇಔಟ್‌ನಲ್ಲಿ ವಾಸವಾಗಿದ್ದರು. ಈ ಮಧ್ಯೆ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಮದನ್ ಪರಿಚಯವಾಗಿದ್ದು, ಆತನ ಜತೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ತಾಯಿ ಎಷ್ಟೇ ಬುದ್ಧವಾದ ಹೇಳಿದರೂ ಆಕೆ ಸರಿ ಹೋಗಿರಲಿಲ್ಲ. ಹೀಗಾಗಿ ಆಕೆಯ ವಿಚಾರದಲ್ಲಿ ತಾಯಿ ಹೆಚ್ಚು ಗಮನ ಹರಿಸಿರಲಿಲ್ಲ ಎಂದು ಪೊಲೀಸರು ಹೇಳಿದರು.
ನಕಲಿ ಚಿನ್ನಾಭರಣ ಇಟ್ಟಿದ್ದ ಆರೋಪಿಗಳು!
ಮನೆಯಲ್ಲಿದ್ದ ಚಿನ್ನಾಭರಣಗಳ ಬಗ್ಗೆ ತಿಳಿದುಕೊಂಡಿದ್ದ ದೀಪ್ತಿ, ತನ್ನ ಪ್ರಿಯಕರನಿಗೆ ಈ ವಿಚಾರ ತಿಳಿಸಿ ಕಳವು ಮಾಡಲು ಸಂಚು ರೂಪಿಸಿದ್ದಳು. ಅದರಂತೆ ತಾಯಿ ಕಾರ್ಯನಿಮಿತ್ತ ಹೊರಗಡೆ ಹೋದಾಗ, ಮನೆಯಲ್ಲಿದ್ದ ಎಲ್ಲ ಚಿನ್ನಾಭರಣಗಳನ್ನು ಕೊಂಡೊಯ್ದು ಅದೇ ಮಾದರಿಯ ನಕಲಿ ಚಿನ್ನಾಭರಣಗಳನ್ನು ಇಟ್ಟಿದ್ದಳು. ಅಸಲಿ ಚಿನ್ನಾಭರಣಗಳನ್ನು ವಿವಿಧೆಡೆ ಮಾರಾಟ ಮಾಡಿ, 3 ಕಾರುಗಳನ್ನು ಖರೀದಿಸಿದ್ದಾರೆ. ಈ ಹಣದಲ್ಲಿ ವಿವಿಧೆಡೆ ಸುತ್ತಾಡಿ ಹಣ ಖರ್ಚು ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ಉಡುಪಿ: ಮದುವೆ ನಿಶ್ಚಿತಾರ್ಥಕ್ಕೆ ಬಂದಿದ್ದ ತಾಯಿ, ಮಗು ನಾಪತ್ತೆ
ತಾಯಿಂದಲೇ ದೂರು
ಕೆಲ ದಿನಗಳ ಹಿಂದೆ ಮನೆಯಲ್ಲಿದ್ದ ಚಿನ್ನಾಭರಣಗಳ ಪರಿಶೀಲನೆ ವೇಳೆ ನಕಲಿ ಚಿನ್ನಾಭರಣ ಎಂಬುದು ದೀಪ್ತಿ ತಾಯಿಗೆ ಗೊತ್ತಾಗಿದ್ದು, ಈ ಬಗ್ಗೆ ಪುತ್ರಿಯನ್ನು ಪ್ರಶ್ನಿಸಿದಾಗ ಸಮಂಜಸವಾದ ಉತ್ತರ ನೀಡಿಲ್ಲ. ಅದರಿಂದ ಅನುಮಾನಗೊಂಡ ತಾಯಿ, ಅಮೃತಹಳ್ಳಿ ಪೊಲೀಸ್ ಠಾಣೆಗೆ ಪುತ್ರಿ ದೀಪ್ತಿ ಮತ್ತು ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಆಕೆಯ ಸ್ನೇಹಿತ ಮದನ್ ವಿರುದ್ಧ ದೂರು ನೀಡಿದ್ದರು. ಬಳಿಕ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಐಷಾರಾಮಿ ಜೀವನಕ್ಕಾಗಿ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.