Advertisement
ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಬಲ್ ಗ್ರಾಹಕರಿಗೆ ಹಾಗೂ ಡೈರೆಕ್ಟ್ ಟು ಹೋಮ್ ಬಳಕೆದಾರರಿಗಾಗಿ ಹೊಸ ದರ ಪಟ್ಟಿಯನ್ನು ಪ್ರಕಟಿಸಿದೆ. ಈ ಚಾನೆಲ್‌ಗಳ ಆಯ್ಕೆ ಮತ್ತು ದರ ನೀತಿ ಇದೇ ಡಿಸೆಂಬರ್ 29ರಿಂದಲೇ ಅನ್ವಯವಾಗಲಿದೆ. ಇದರಿಂದ ಈವರೆಗೆ 250, 300 ರೂ. ಮಾಸಿಕ ಚಂದಾ ಪಾವತಿಸುತ್ತಿರುವವರು ಇನ್ನು ಮುಂದೆ ತಿಂಗಳಿಗೆ ಸಾವಿರ ರೂ.ಗಳಷ್ಟು ತೆರಬೇಕಾಗುತ್ತದೆ ಎಂಬ ಗಾಳಿ ಸುದ್ದಿ ಎದ್ದಿದೆ. ಅದಕ್ಕಿಂತ ಮುಖ್ಯವಾಗಿ, 30ರಿಂದ ಚಾನೆಲ್, ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳದ ಚಂದಾದಾರರಿಗೆ ಒಂದೇ ಒಂದು ಚಾನೆಲ್ ಸಹ ಲಭ್ಯವಾಗುವುದಿಲ್ಲ ಎಂದೂ ಪ್ರತಿಪಾದಿಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ದೊಡ್ಡ ಮಟ್ಟದ ನಷ್ಟ ಎಂಬ ವ್ಯಾಖ್ಯಾನ ಒಂದೆಡೆ ನಡೆಯುತ್ತಿದ್ದರೆ, ಕೇಬಲ್ ಆಪರೇಟರ್‌ಗಳು ದರ ಪಟ್ಟಿಯ ವಿರುದ್ಧ ಮತ್ತು ಇದನ್ನು ಸಮಯಾವಕಾಶ ಕೊಡದೆ ಜಾರಿಗೆ ತರಲಾಗುತ್ತಿದೆ ಎಂದು ಆರೋಪಿಸಿ ಹಲವೆಡೆ ಪ್ರತಿಭಟನೆಗಿಳಿದಿದ್ದಾರೆ. ಗ್ರಾಹಕ ಪರ, ಸೇವಾದಾತರ ಪರ ಎಂಬ ಎರಡು ಪ್ರತಿಪಾದನೆಗಳ ನಡುವೆ ಸತ್ಯ ಎಲ್ಲೋ ಒಂದು ಕಡೆ ಸಿಕ್ಕಿಹಾಕಿಕೊಂಡಿದೆ!
2017ರ ಮಾರ್ಚ್ ವೇಳೆಗೆ ಟ್ರಾಯ್ ಜಾರಿಗೆ ತಂದ ಮೂರು ನಿಯಮ ನಿರ್ದೇಶನಗಳ ಅನ್ವಯ ಕೇಬಲ್ ಸೇವೆ ಕೂಡ ಸೆಟಪ್‌ಬಾಕ್ಸ್ ಅಳವಡಿಕೆಯ ನಂತರ ಸಂಪೂರ್ಣ ಡಿಜಿಟಲ್ ಎನಿಸಿಕೊಂಡಿತು. ಕೇಬಲ್‌ನಲ್ಲಿ ಆಪರೇಟರ್ ಹಾಗೂ ಡೈರೆಕ್ಟ್ ಟು ಹೋಮ್‌ನಲ್ಲಿ ಸೇವಾದಾತ ಸೇವೆ ಕೊಡುತ್ತಾನೆ ಎಂಬುದರ ಹೊರತು ಈಗ ಈ ಎರಡೂ ಮಾದರಿಗಳು ಒಂದೇ ಎನ್ನುವಂತಿವೆ. ಈ ಸೂತ್ರದ ಆಧಾರದಲ್ಲಿಯೇ ಟ್ರಾಯ್ 2018ರ ಜುಲೈ ಮೂರರಂದೇ ಚಾನೆಲ್‌ಗಳ ಆಯ್ಕೆಯಲ್ಲಿ ಹೊಸ ದರ ಪಟ್ಟಿಯನ್ನು ಜಾರಿಗೆ ತಂದು, ಇದರ ಅಳವಡಿಕೆಗೆ 180 ದಿನಗಳ ಅವಕಾಶವನ್ನು ಕಲ್ಪಿಸಿತು. ಹೊಸ ನಿಯಮಗಳನ್ನು ತರಾತುರಿಯಲ್ಲಿ ಟ್ರಾಯ್ ಜಾರಿಗೆ ತಂದಿದೆ ಎಂದು ಆರೋಪಿಸುವವರಿಗೆ ಈ ಮೂಲ ವಿಷಯ ಗೊತ್ತೇ ಇಲ್ಲ ಎಂದರ್ಥ. ಅಷ್ಟಕ್ಕೂ, ಈ ದರ ಪಟ್ಟಿಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಹಾಗಾಗಿಯೇ ಕೇಬಲ್ ಆಪರೇಟರ್‌ಗಳು ಪ್ರತಿಭಟನೆ ನಡೆಸುತ್ತಿದ್ದಾರೆ! ಈ ಸಂದರ್ಭದಲ್ಲೇ ಒಂದು ಗುಲ್ಲನ್ನು ಪ್ರಜಾnಪೂರ್ವಕವಾಗಿ ಮಾಧ್ಯಮಗಳ ಮೂಲಕ ಹರಡಲಾಗುತ್ತಿದೆ. ಒಂದು ಕುಟುಂಬ ಪ್ರಸ್ತುತ 250 ಚಾನೆಲ್‌ಗಳನ್ನು ನೋಡುತ್ತಿದೆ ಎಂತಾದರೆ ಅವರು ಹೊಸ ದರ ನೀತಿಯಡಿ ಈಗಿನ 350 ರೂ. ಬದಲು ಸಾವಿರ ರೂ. ತೆರಬೇಕಾಗುತ್ತದೆ. ಇಡೀ ನೀತಿ ಉದ್ಯಮ ಪರ ಎನ್ನಲಾಗುತ್ತಿದೆ. ಗಮನಿಸಬೇಕು, ದೇಶದಲ್ಲಿ ಬ್ರಾಡ್‌ಕಾಸ್ಟ್ ಆಡಿಯೆನ್ಸ್ ರೀಸರ್ಚ್ ಕೌನ್ಸಿಲ್ ಎಂಬ ವ್ಯವಸ್ಥೆ ಇದೆ. ಇದನ್ನು ಸಂಕ್ಷಿಪ್ತವಾಗಿ ಬಾರ್ಕ್(BARC) ಎನ್ನುತ್ತಾರೆ. ಇದು ಟಿ.ವಿ. ವೀಕ್ಷಕರ ಕುರಿತಾಗಿ ಸಮಗ್ರ ಅಧ್ಯಯನ ನಡೆಸುತ್ತದೆ. ಇದರ ವರದಿಯ ಪ್ರಕಾರ, ಶೇ. 90ರಷ್ಟು ಕುಟುಂಬಗಳು ಮನೆಯಲ್ಲಿನ ಟಿ.ವಿಯಲ್ಲಿ ಅಬ್ಬಬ್ಟಾ ಎಂದರೂ 50 ಅಥವಾ ಅದಕ್ಕಿಂತ ಕಡಿಮೆ ಚಾನೆಲ್‌ಗಳನ್ನು ವೀಕ್ಷಿಸುತ್ತವೆ. ವೀಕ್ಷಣೆ ಎಂಬುದಕ್ಕಿಂತ ಚಾನೆಲ್ ಸುತ್ತಾಡುತ್ತವೆ ಎಂಬುದೇ ಹೆಚ್ಚು ಸಮ್ಮತ.
Related Articles
ಚಾನೆಲ್‌ಗಳಲ್ಲಿ ಎರಡು ಮಾದರಿಯ ಸೇವೆಗಳಿವೆ. ಉಚಿತವಾಗಿ ಪ್ರಸಾರ ಮಾಡುತ್ತಿರುವುದು ಮತ್ತು ಚಂದಾ ಆಧಾರಿತವಾಗಿ ಲಭ್ಯವಾಗುವಂತದು. ಕೇಬಲ್ ಅಥವಾ ಡಿಶ್ ಸೇವಾದಾತರು ನೂರಾರು ಚಾನೆಲ್‌ಗಳನ್ನು ಕೊಟ್ಟೂ ನಮಗೆ ಅತಿ ಕಡಿಮೆ ದರ ಅನ್ವಯಿಸುತ್ತೇವೆ ಎಂಬುದು ಅವರ ತಂತ್ರಗಾರಿಕೆಯಷ್ಟೇ. 2018ರ ಡಿಸೆಂಬರ್ 17ರ ಸರ್ಕಾರದ ಮಾಹಿತಿಯ ಅನ್ವಯವೇ ದೇಶದಲ್ಲಿ ಪ್ರಸಾರವಾಗುವ 873 ಚಾನೆಲ್‌ಗಳಲ್ಲಿ 500ಕ್ಕೂ ಹೆಚ್ಚು ಚಾನೆಲ್‌ಗಳನ್ನು ಉಚಿತವಾಗಿ ಗಾಳಿಗೆ ಬಿಡಲಾಗಿದೆ. ಇದರ ಅರ್ಥ ಇಷ್ಟೇ, ಅಲ್ಲಿ ಉಚಿತವಾಗಿ ಪಡೆದು ಇಲ್ಲಿ ನಮಗೆ ಶುಲ್ಕ ವಿಧಿಸಲಾಗುತ್ತಿದೆ!
Advertisement
ಹೊಸ ಟ್ರಾಯ್ ನೀತಿ ಕೆಲವು ಸ್ಪಷ್ಟ ನಿಯಮಗಳನ್ನು ಪ್ರಕಟಿಸಿದೆ. ಅದರ ಪ್ರಕಾರ, ಇನ್ನು ಮುಂದೆ ಪ್ರತಿಯೊಬ್ಬ ಗ್ರಾಹಕ ಪ್ರತಿ ತಿಂಗಳು 130 ರೂ.ಗಳ ನೆಟ್‌ವರ್ಕ್ ಕೆಪಾಸಿಟಿ ಫೀ ಎಂಬ ಬಾಡಿಗೆ ತೆರಬೇಕಾಗುತ್ತದೆ. ಈ ಮೊತ್ತಕ್ಕೆ ಸೇವಾದಾತ ಕನಿಷ್ಠ 100 ಚಾನೆಲ್‌ಗಳನ್ನು ಕೊಡುವುದು ಕಡ್ಡಾಯ. ಅಂದರೆ ಡಿ. 30ರ ನಂತರ ಈ ಕನಿಷ್ಠ ಶುಲ್ಕವನ್ನು ವಸೂಲಿ ಮಾಡುವ ಸೇವಾದಾತರು ಯಾವುದೇ ಚಾನೆಲ್ ಇಲ್ಲದ ಸ್ಥಿತಿ ನಿರ್ಮಾಣ ಮಾಡಲು ಬರುವುದಿಲ್ಲ. ಈ ಮೊದಲಿನಂತೆ ಫ್ರೀ ಟು ಏರ್ ಚಾನೆಲ್‌ಗೆ ಅವರು ಶುಲ್ಕ ವಿಧಿಸುವ ಅವಕಾಶವಿಲ್ಲ. ಮೂಲದ 100ಕ್ಕಿಂತ ಹೆಚ್ಚು ಚಾನೆಲ್ ನೋಡುವವರಿಗೆ ಇನ್ನೊಂದು ಸೌಲಭ್ಯವೂ ಇದೆ. ಅವರು ಹೆಚ್ಚುವರಿಯಾಗಿ ಪಡೆದುಕೊಳ್ಳುವ ಪ್ರತಿ 25 ಉಚಿತ ಚಾನೆಲ್‌ಗಳಿಗೆ 20 ರೂ. ಸ್ಲಾಬ್ ಬೆಲೆ ನಿಗದಿಪಡಿಸಲಾಗಿದೆ.
ಚಾನೆಲ್‌ಗಳ ದರವನ್ನು ಗಮನಿಸಲೂ ಟ್ರಾಯ್ ಅವಕಾಶ ನೀಡಿದೆ. ಟ್ರಾಯ್‌ನ ಈ ವೆಬ್ ಲಿಂಕ್‌ನಲ್ಲಿ ಮಾಹಿತಿ ಇದೆ. https://www.trai.gov.in/news-updates/maximum-retail-price-mrp-pay-tv-channels ಇದರ ಪ್ರಕಾರ, 10 ಪೈಸೆಯ ದರದ ಚಾನೆಲ್‌ಗಳೂ ಇವೆ. ಬರೀ 25, 50 ಪೈಸೆಗೂ ಚಾನೆಲ್‌ಗಳು ಲಭ್ಯ. ಉದಾಹರಣೆಗೆ, ಕನ್ನಡದ ಉದಯ ನ್ಯೂಸ್‌ನ ದರ 10 ಪೈಸೆ. ರಾಜ್ ಮ್ಯೂಸಿಕ್ ಕನ್ನಡಕ್ಕೆ 25 ಪೈಸೆ. ಟಾಪರ್ ಟಿ ಎಂಬುದಕ್ಕೆ 59.32 ರೂ. ಎನ್‌ಎಚ್‌ಕೆ ವಿಶ್ವ ಪ್ರೀಮಿಯರ್ ಚಾನೆಲ್‌ಗೆ 1,800 ರೂ. ಇದೆ. ಆದರೆ ಜನ ಅತಿ ಹೆಚ್ಚು ನೋಡುವ ಚಾನೆಲ್‌ಗಳ ದರ 15, 17, 19ರ ಆಸುಪಾಸಿನಲ್ಲಿಯೇ ಇವೆ. ಬಹುತೇಕ ಕ್ರೀಡಾ ಚಾನೆಲ್‌ಗಳ ಪರಮಾವಧಿ ಶುಲ್ಕವೂ 19 ರೂ. ಮಾತ್ರ ಆಗಿದೆ.
ಆಫರ್‌ಗಳು ಲಭ್ಯ!ಸಾಮಾನ್ಯವಾಗಿ ಕನ್ನಡದ ಬಳಕೆದಾರ ಈವರೆಗೆ ಪ್ರತಿ ತಿಂಗಳೂ ಟಿ.ವಿ. ವೀಕ್ಷಣೆಗೆ 250ರಿಂದ 300 ರೂ. ವೆಚ್ಚ ಮಾಡುತ್ತಿದ್ದ. ಡಿಷ್‌ನಲ್ಲಂತೂ ಬರೀ ಕನ್ನಡ ಚಾನೆಲ್ ವೀಕ್ಷಿಸುವವರಿಗೆ 200ರಿಂದ 250 ರೂ ವೆಚ್ಚವಾಗುತ್ತಿತ್ತು. ಈಗಿನ ದರದಲ್ಲಿ ಕನ್ನಡದ ಕಲರ್ ಕನ್ನಡ, ಜೀ ಕನ್ನಡಕ್ಕೆ ತಲಾ 19 ರೂ. ಉದಯ ಟಿಗೆ 17 ರೂ, ಉದಯ ಮೂವೀಸ್‌ಗೆ 16 ರೂ. ಅದೇ ಕಲರ್ ಕನ್ನಡ ಮೂವೀಸ್‌ಗೆ 2 ರೂ, ಉದಯ ಮ್ಯೂಸಿಕ್‌ಗೆ 6ರೂ. ದರವಿದೆ. ಹಲವು ಕನ್ನಡ ಚಾನೆಲ್‌ಗಳು 100 ಉಚಿತ ಚಾನೆಲ್‌ಗಳಲ್ಲೂ ಬರಬಹುದು. ತನ್ನ ಬಳಕೆಯನ್ನೇ ಗಮನಿಸಿದ ನಂತರವೇ ಚಂದಾದಾರ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಂಡರೆ ಅವನಿಗೆ ಪರಮಾವಧಿ ಲಾಭವಿದೆ. ಮೂರು ತಿಂಗಳ ಲಾಕಿಂಗ್ ಅವಧಿ ಷರತ್ತು ಪೂರೈಸಿದರೆ ಚಾನೆಲ್‌ಗಳನ್ನು ಕೈಬಿಡಲು, ಹೊಸದನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಒಂದೊಂದು ಚಾನೆಲ್‌ನ ಆಯ್ಕೆಯನ್ನು ಅ ಲಾ ಕಾರ್ಟೆ ಎನ್ನುತ್ತಾರೆ. ಇನ್ನು ಮುಂದೆ ಪ್ರತಿ ಚಾನೆಲ್‌ನ ಕ್ಲಿಕ್ ಸಮಯದಲ್ಲಿ ಆ ಚಾನೆಲ್‌ನ ಎಂಆರ್‌ಪಿ ಪ್ರದರ್ಶನಗೊಳ್ಳುತ್ತದೆ. ಇದೇ ವೇಳೆ ಚಾನೆಲ್‌ಗಳ ಗೊಂಚಲನ್ನು ಟಿ.ವಿ ವೀಕ್ಷಕರಿಗೆ ಆಫರ್ ಮಾಡಲು ಚಾನೆಲ್ ಮಾಲೀಕರು ಅಥವಾ ಸೇವಾದಾತರಿಗೆ ಅವಕಾಶವಿದೆ. ಇದೇ ಸೂತ್ರವನ್ನು ಅನುಸರಿಸಿ ಸ್ಟಾರ್ ಸುವರ್ಣ ಕೇವಲ 30 ರೂ.ಗೆ ನಮ್ಮ ಚಾನೆಲ್‌ಗಳು ಲಭ್ಯ ಎಂದು ಈಗಾಗಲೇ ಜಾಹೀರಾತು ಕೊಡುತ್ತಿದ್ದಾರೆ. ಈ ಥರಹದ ಆಮಿಷಗಳು ದೊಡ್ಡ ಪ್ರಮಾಣದಲ್ಲಿ ನಮ್ಮ ಮೇಲೆ ಎರಗಲಿದೆ. ಇಂತಹ ಗೊಂಚಲಿನಲ್ಲಿ ನಮಗೆ ಬೇಕಾದುದಕ್ಕಿಂತ ಬೇಡದ ಚಾನೆಲ್‌ಗಳೇ ಹೆಚ್ಚು ಇವೆಯೇ ಎಂಬುದನ್ನು ನಾವು ಗಮನಿಸಿಕೊಳ್ಳಬೇಕು. ಟ್ರಾಯ್ ನಿಯಮಗಳ ಪ್ರಕಾರ, ಒಂದು ಗೊಂಚಲಿನಲ್ಲಿ ಒಂದೇ ಚಾನೆಲ್‌ನ ಎಸ್‌ಡಿ, ಎಚ್‌ಡಿ ಪ್ರಸಾರಗಳು ಸೇರಿರುವಂತಿಲ್ಲ. ಚಾನೆಲ್‌ನ ಎಂಆರ್‌ಪಿಗಿಂತ ಕಡಿಮೆ ಬೆಲೆಗೆ ಸೇವಾದಾತರು ಗ್ರಾಹಕರಿಗೆ ಚಾನೆಲ್ ಆಫರ್ ಮಾಡಬಹುದು. ಈ ಟಾರಿಫ್ ಆದೇಶದ ಸಂಪೂರ್ಣ ಮಾಹಿತಿಯನ್ನು ಈ ವೆಬ್ ವಿಳಾಸದಲ್ಲಿ ಪಡೆಯಬಹುದು, https://www.trai.gov.in/sites/default/files/Tariff_Order_English_3 March_2017.pdf ಟ್ರಾಯ್‌ಗೆ ಇನ್ನಷ್ಟು ಕೆಲಸವಿದೆ!
ಒಂದಂತೂ ನಿಜ, ಈ ಹಿಂದೆ ಮೊಬೈಲ್‌ನಲ್ಲಿ ಎಸ್‌ಟಿವಿಗಳ ಜಮಾನಾ ಬಂದಾಗ ಮೊಬೈಲ್ ಸೇವಾದಾತರು ಗ್ರಾಹಕನ ಒಪ್ಪಿಗೆ ಪಡೆಯದೆ ವ್ಯಾಸ್ ಆರಂಭಿಸಿ ಆತನ ಜೇಬಿಗೆ ಕತ್ತರಿ ಹಾಕುವುದು ಸಾಮಾನ್ಯವಾಗಿತ್ತು. ಕೇಬಲ್, ಡಿಷ್ ಕ್ಷೇತ್ರದಲ್ಲೂ ಈ ಥರಹದ ಹಗಲು ದರೋಡೆ ನಡೆಯುವುದನ್ನು ಕೂಡ ನಿರೀಕ್ಷಿಸಬಹುದು. ಎಲ್ಲ ಗ್ರಾಹಕರಿಗೂ ಉಚಿತ ಗ್ರಾಹಕ ಸೇವಾ ನಂಬರ್ ನೀಡಬೇಕು ಎಂತಿದ್ದರೂ ಲೋಕಲ್ ಕರೆ ದರ ಅನ್ವಯವಾಗುವ 1860ರಿಂದ ಆರಂಭವಾಗುವ ಸೇವಾ ಸಂಖ್ಯೆಯನ್ನೇ ಡಿಷ್ ಟಿ.ವಿ ಪ್ರಚಾರ ಮಾಡುವುದನ್ನು ಇಲ್ಲಿ ಉದಾಹರಿಸಬಹುದು. ಈ ರೀತಿಯ ವಂಚನೆಗಳ ವಿರುದ್ಧ ಹೋರಾಡಲು ಟ್ರಾಯ್ ಮತ್ತು ಕೇಂದ್ರ ಸರ್ಕಾರ ಬಿಗಿಯಾದ ಕ್ರಮ ಕೈಗೊಳ್ಳುವಂತಾದರೆ ಈ ಹೊಸ ನಿಯಮಗಳು ಗರಿಷ್ಠ ಪ್ರಭಾವ ಬೀರುತ್ತದೆ. – ಮಾ.ವೆಂ.ಸ.ಪ್ರಸಾದ್